ಉದಯ ಟಿವಿಗೆ 24ರ ಹರೆಯ: 4 ಧಾರಾವಾಹಿಗಳಲ್ಲಿ ದಾಖಲೆಯ ಸಂಭ್ರಮ
ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಉದಯ ಟಿವಿ, ಕನ್ನಡಿಗರಿಗೆ ವಿಭಿನ್ನ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿದೆ. ಧಾರಾವಾಹಿ ಕ್ಷೇತ್ರದಲ್ಲಿ ಹೊಸ ಹೊಸ ಕಥೆಗಳೊಂದಿಗೆ ಸಂಚಲನವನ್ನು ಮೂಡಿಸಿದ ಉದಯ ವಾಹಿನಿಗೆ ಸದ್ಯ 24 ರ ಹರೆಯ. ಅರ್ಥಾತ್ ಇಪ್ಪತ್ನಾಲ್ಕು ವರ್ಷಗಳನ್ನು ಪೂರೈಸಿ ಇಪ್ಪತೈದನೇ ವರ್ಷಕ್ಕೆ ಉದಯ ಟಿವಿ ಕಾಲಿಟ್ಟಿದೆ.
24 ರ ಸಂಭ್ರಮದಲ್ಲಿ ಉದಯ ಟಿವಿ ಇದ್ದರೆ, ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ನಾಲ್ಕು ಧಾರಾವಾಹಿಗಳಿಗೆ ದಾಖಲೆಯ ಸಡಗರ.
ತಾಯಿ ಮಗುವಿನ ಬಾಂಧವ್ಯದ ಕಥೆಯನ್ನ ಆಧರಿಸಿ ಉದಯ ಟಿವಿಯಲ್ಲಿ ಶುರುವಾದ ಧಾರಾವಾಹಿ 'ಜೋ ಜೋ ಲಾಲಿ'. ಈ ಭಾವನಾತ್ಮಕ ಎಳೆ ಹೊಂದಿರುವ ಧಾರಾವಾಹಿಗೆ ಈಗ '300'ರ ಸಂಭ್ರಮ.
ಕಳೆದ ವರ್ಷ ಶುರುವಾದ 'ಅವಳು' ಧಾರಾವಾಹಿ ಕೂಡ 300 ಸಂಚಿಕೆಯತ್ತ ದಾಪುಗಾಲು ಹಾಕುತ್ತಿದೆ. 250 ನೇ ಸಂಚಿಕೆ ಸಂಭ್ರಮದಲ್ಲಿ 'ಕಾವೇರಿ' ಧಾರಾವಾಹಿ ಇದ್ದರೆ, ಎರಡು ರಾಜ್ಯಗಳ ದ್ವೇಷ ಕ್ರೌರ್ಯದ ನಡುವೆ ಮೂಡುವ ಪ್ರೇಮ ಕಥೆ ಹೊಂದಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಗೆ ಶತಕದ ಸಂಭ್ರಮ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

300 ರ ಸಂಭ್ರಮದಲ್ಲಿ 'ಜೋ ಜೋ ಲಾಲಿ'
ಮುಗ್ಧೆ ರುಕ್ಮಿಣಿ.. ಹೂವಿನಂಥ ಹುಡುಗಿ ರಾಧಾ.. ಮುದ್ದು ಮನಸ್ಸಿನ ಮಾಧವ.. ನಿಶ್ಕಲ್ಮಶ ಹೃದಯದ ಪ್ರೀತಂ.. ಇವರೆಲ್ಲರ ಬದುಕಿನ ದಿಕ್ಕನೇ ಬದಲಾಯಿಸುವ ಸವಾಲುಗಳು 'ಜೋ ಜೋ ಲಾಲಿ'ಯ ಮುಖ್ಯ ಅಂಶಗಳು. ಸೋಮವಾರದಿಂದ ಶುಕ್ರವಾರ ಸಂಜೆ 6.30ಕ್ಕೆ ಪ್ರಸಾರ ಆಗುತ್ತಿರುವ 'ಜೋ ಜೋ ಲಾಲಿ' ಧಾರಾವಾಹಿಗೆ ಇದೀಗ 300 ಸಂಚಿಕೆಯ ಸಂಭ್ರಮ.

300 ರ ಸಡಗರದಲ್ಲಿ 'ಅವಳು'
ಕಳೆದ ವರ್ಷ ಏಪ್ರಿಲ್ 24 ರಂದು ಉದಯ ಟಿವಿಯಲ್ಲಿ 'ಅವಳು' ಧಾರಾವಾಹಿ ಆರಂಭಗೊಂಡು, ಇದೀಗ 300ನೇ ಸಂಚಿಕೆಯತ್ತ ಸಾಗುತ್ತಿದೆ. ಅಕ್ಕ-ತಂಗಿ ಅತ್ತೆ-ಸೊಸೆಯಾಗುವ ವಿಶೇಷ ಕಥೆ ಹೊಂದಿರುವ ಧಾರಾವಾಹಿ ಇದು. 'ಧ್ರುವ್ ಮೀಡಿಯಾ ಕ್ರಾಫ್ಟ್' ಬ್ಯಾನರ್ ಅಡಿಯಲ್ಲಿ ಗುರುರಾಜ್ ಕುಲಕರ್ಣಿ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಗೆ ನಾಗರಾಜ್ ಉಪ್ಪುಂದ ಅವರ ಛಾಯಾಗ್ರಹಣ ಮತ್ತು ನಿರ್ದೇಶನವಿದೆ. ಉದಯ ಟಿವಿಯ 24ರ ಹಬ್ಬಕ್ಕೆ ಅವಳು 300ರ ಸಂಭ್ರಮವೂ ಮೆರುಗು ನೀಡಿದೆ. 'ಅವಳು.. ಕಥೆಯಾದವಳು' ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

'ಕಾವೇರಿ'ಗೆ 250 ನೇ ಸಂಚಿಕೆ ಸಂಭ್ರಮ
ಕನ್ನಡದ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವೇರಿ' ಧಾರಾವಾಹಿ 250 ಸಂಚಿಕೆಗಳನ್ನು ಪೂರೈಸಿ ಮುನ್ನೂರರತ್ತ ಮುನ್ನುಗ್ಗುತ್ತಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದ ಧಾರಾವಾಹಿ ಇದು. ಡಿ2 ಮೀಡಿಯಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಕಾವೇರಿ ಧಾರಾವಾಹಿ ಪ್ರಸಾರವಾಗುತ್ತಿದೆ.

'ಬ್ರಹ್ಮಾಸ್ತ್ರ'ಕ್ಕೆ ಶತಕದ ಸಂಭ್ರಮ
ಎರಡು ರಾಜ್ಯಗಳ ದ್ವೇಷ ಕ್ರೌರ್ಯದ ನಡುವೆ ಮೂಡುವ ಪ್ರೇಮ ಕಥೆಯೇ 'ಬ್ರಹ್ಮಾಸ್ತ್ರ'. ಕಿರುತೆರೆಯಲ್ಲೇ ವಿಭಿನ್ನ ಶೈಲಿಯೊಂದಿಗೆ ರವಿ ಗರಣಿ ಅವರ ನಿರ್ಮಾಣದಲ್ಲಿ ಬರುತ್ತಿರುವ ಈ ಧಾರಾವಾಹಿ 100ನೇ ಸಂಚಿಕೆಯತ್ತ ಸಾಗುತ್ತಿದೆ. 'ಬ್ರಹ್ಮಾಸ್ತ್ರ' ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











