ಸೂಪರ್‌ಸ್ಟಾರ್ ವಿದ್ಯಾಳಾಗಿ ಬದಲಾದ ಎಡವಟ್ಟು ರಾಣಿ.. 'ವಿದ್ಯಾಪತಿ'ಯ ಅರಗಿಣಿ
ಈಕೆ ಕಲಿತದ್ದು ಸಿವಿಲ್ ಇಂಜಿನಿಯರಿಂಗ್! ಬದುಕು ರೂಪಿಸಿಕೊಂಡಿದ್ದು ಬಣ್ಣದ ಲೋಕದಲ್ಲಿ. ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡಿರುವ ಈ ಬೆಡಗಿ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ನಾವಿಂದು ಮಾತನಾಡುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಮಲೈಕಾ ವಸುಪಾಲ್. ಜೀ ಕನ್ನಡ ವಾಹಿನಿಯಲ್ಲಿ ದಿಲೀಪ್ ರಾಜ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡ ಬೆಡಗಿ ಈಕೆ.
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ಲೀಲಾ ಆಲಿಯಾಸ್ ಯಡವಟ್ಟು ರಾಣಿ ಲೀಲಾಳಾಗಿ ನಟಿಸಿರುವ ಮಲೈಕಾ ವಸುಪಾಲ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿರುವ ಚೆಲುವೆ. ಸಹಜ ನಟನೆಯ ಮೂಲಕ ಮಲೈಕಾ ವಸುಪಾಲ್ ಅವರು ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ ಎಂಬುದಕ್ಕೆ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಆಕೆ ಪಡೆದಿರುವ ಪ್ರಶಸ್ತಿಗಳೇ ಸಾಕ್ಷಿ.

ಹೀಗಿರುವಾಗ ಈಕೆ ಇದೀಗ ಸೂಪರ್ ಸ್ಟಾರ್ ವಿದ್ಯಾಳಾಗಿ ಬದಲಾಗಿದ್ದಾರೆ. ಅರೇ! ಇದೇನಿದು, ಮಲೈಕಾ ವಸುಪಾಲ್ ಹೆಸರು ಬದಲಾಯಿಸಿಕೊಂಡಿದ್ದಾರಾ ಎಂದು ಆಶ್ಚರ್ಯ ಪಡಬೇಡಿ. ಮಲೈಕಾ ಅವರು ಸೂಪರ್ ಸ್ಟಾರ್ ವಿದ್ಯಾಳಾಗಿ ಬದಲಾಗಿರುವುದೇನೋ ನಿಜ. ಆದರೆ ಅದು ರಿಯಲ್ ನಲ್ಲಿ ಅಲ್ಲ, ರೀಲ್‌ನಲ್ಲಿ ಮಾತ್ರ.
ಇಶಾಂ ಮತ್ತು ಹಸೀಂ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವಿದ್ಯಾಪತಿ' ಸಿನಿಮಾದಲ್ಲಿ ನಾಯಕಿ ಸೂಪರ್ ಸ್ಟಾರ್ ವಿದ್ಯಾಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮಲೈಕಾ ವಸುಪಾಲ್. ಧನಂಜಯ ಅವರ ಡಾಲಿ ಪಿಕ್ಚರ್ಸ್‌ನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಮಲೈಕಾ ಅವರಿಗೆ ಜೋಡಿಯಾಗಿ ನಾಗಭೂಷಣ್ ಅವರು ನಟಿಸಲಿದ್ದಾರೆ. ಇನ್ನು ಎರಡು ದಿನದ ಹಿಂದೆಯಷ್ಟೇ ಮಲೈಕಾ ಅವರ ಹುಟ್ಟುಹಬ್ಬವಿತ್ತು. ಆ ದಿನ ಆಕೆಯ ಪೋಸ್ಟರ್ ಅನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ.

ದಾವಣಗೆರೆ ಬೆಣ್ಣೆ ಬೆಡಗಿ ಮಲೈಕಾಗೆ ಇದು ಎರಡನೇ ಸಿನಿಮಾ ಹೌದು. ಚಿಕ್ಕಣ್ಣ ನಾಯಕನಾಗಿ ನಟಿಸಿರುವ 'ಉಪಾಧ್ಯಕ್ಷ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ಈಕೆ. ಮೊದಲ ಸಿನಿಮಾದಲ್ಲಿ ಸಿನಿಪ್ರಿಯರ ಮನ ಸೆಳೆದ ಮಲೈಕಾಗೆ ಬಾಲ್ಯದಿಂದಲೂ ನಟನೆಯತ್ತ ಏನೋ ಒಂದು ರೀತಿಯ ವಿಶೇಷ ಸೆಳೆತವಿತ್ತು.
ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಹೊಂದಿದ್ದ ಮಲೈಕಾ ಇದೀಗ ಪೂರ್ಣ ಪ್ರಮಾಣದ ನಟಿಯಾಗಿ ಭಡ್ತಿ ಪಡೆದು ಬಾಲ್ಯದ ಕನಸು ನನಸು ಮಾಡಿಕೊಂಡಿದ್ದಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಲೀಲಾಳಾಗಿ ನಟನೆಗೆ ಕಾಲಿಟ್ಟ ಈಕೆ ಹಂತ ಹಂತವಾಗಿ ನಟನೆಯ ಆಗು ಹೋಗುಗಳನ್ನು ಅರಿತುಕೊಂಡು ನಟನೆಯಲ್ಲು ಪಕ್ವತೆಯನ್ನು ಪಡೆದರು.
ಆರಂಭದ ದಿನಗಳಲ್ಲಿ ಕೊಂಚ ಭಯಪಟ್ಟಿದ್ದ ಈಕೆ ಮುಂದೆ ಎಲ್ಲವನ್ನು ಕಲಿತರು. ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡ ಅದೃಷ್ಟವಂತೆ ಈಕೆ. ಮೊದಲ ಸಿನಿಮಾದಲ್ಲಿ ಬಜಾರಿ ಹೆಣ್ಣುಮಗಳಾಗಿ ನಟಿಸಿದ ಈಕೆ ಅಪ್ಪನ ಮುದ್ದಿನ ಮಗಳಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಇದೀಗ 'ವಿದ್ಯಾಪತಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮಲೈಕಾ ವಸುಪಾಲ್ ಅವರು ಯಾವತ್ತಿಗೂ ಇಂತಹುದೇ ಪಾತ್ರ ಬೇಕು ಎಂದು ಬಯಸಿದವರಲ್ಲ.
ಯಾವುದೇ ಪಾತ್ರ ನೀಡಿದರೂ ನಟಿಸಲು, ಬಣ್ಣ ಹಚ್ಚಲು ತಯಾರಾಗಿದ್ದಾರೆ ಮಲೈಕಾ ವಸುಪಾಲ್. ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಈಕೆಗೆ ನಟಿಸಲು ಹಿರಿತೆರೆ, ಕಿರುತೆರೆ ಎಂಬ ವ್ಯತ್ಯಾಸವೂ ಇಲ್ಲ. ಬದಲಿಗೆ ಪ್ರಾಮುಖ್ಯತೆ ಇರುವ ಪಾತ್ರವಾಗಬೇಕು ಅಷ್ಟೇ. ಒಟ್ಟಿನಲ್ಲಿ ನಾವು ನಟಿಸುವ ಪಾತ್ರವನ್ನು ಸಿನಿಪ್ರಿಯರು ಮೆಚ್ಚಬೇಕು ಎಂಬುದು ಆಕೆಯ ಅಭಿಪ್ರಾಯ.
ನಟಿಸುತ್ತಿರುವುದು ಒಂದೇ ಧಾರಾವಾಹಿಯಾಗಲಿ ಅಥವಾ ಎರಡೇ ಧಾರಾವಾಹಿಯಾಗಲೀ, ಸಿನಿಮಾವಾಗಲಿ ಪರವಾಗಿಲ್ಲ. ಆದರೆ ನಾವು ನಟಿಸುವ ಪಾತ್ರ ಮಾತ್ರ ಯಾವಾಗಲೂ ವೀಕ್ಷಕರ ಮನಸಲ್ಲಿ ಹಸಿರಾಗಿರಬೇಕು ಎಂದು ಬಯಸಿದವರು ಮಲೈಕಾ. ಈಗಾಗಲೇ ಎಡವಟ್ಟು ರಾಣಿ ಲೀಲಾಳಾಗಿ ಈಕೆ ವೀಕ್ಷಕರ ಮನ ಸೆಳೆದಿದ್ದು ಆಗಿದೆ. ಇದೀಗ ಸೂಪರ್ ಸ್ಟಾರ್ ವಿದ್ಯಾಳಾಗಿ ಮಲೈಕಾ ವೀಕ್ಷಕರ ಮನ ಸೆಳೆಯುತ್ತಾರಾ ಅಂತ ನೋಡಬೇಕಾಗಿದೆ.


Click it and Unblock the Notifications











