'ವಧು' ಧಾರಾವಾಹಿಯ ನಟಿ ಮಾಡಲಿಂಗ್ ಕ್ಷೇತ್ರದಲ್ಲಿ ಸಿಕ್ಕಪಟ್ಟೆ ಫೇಮಸ್; ಯಾರಿವರು?
ವಿನೂತನ ಧಾರಾವಾಹಿಗಳ ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡವೂ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಇದೀಗ ಎರಡು ಹೊಸ ಧಾರಾವಾಹಿಗಳು ಶುರುವಾಗಿದ್ದು ಕಿರುತೆರೆ ವೀಕ್ಷಕರಿಗೆ ಡಬಲ್ ಮನರಂಜನೆ ಸಿಗುವುದರಲ್ಲಿ ಎರಡು ಮಾತಿಲ್ಲ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ವಧು'ವಿನಲ್ಲಿ ನಾಯಕ ಸಾರ್ಥಕ್ ಮಡದಿ ಪ್ರಿಯಾಂಕಾಳಾಗಿ ನಟಿಸುತ್ತಿರುವ ನಟಿಯ ಹೆಸರು ಸೋನಿ ಮುಲೇವಾ. ಮನೋಜ್ಞ ನಟನೆಯ ಮೂಲಕ ಮನ ಸೆಳೆದಿರುವ ಸೋನಿ ಮುಲೇವಾ ಅವರು ರಾಜಸ್ಥಾನ ಮೂಲದವರಾದರೂ, ಈಕೆ ಹುಟ್ಟಿ ಬೆಳೆದ್ದಿದ್ದೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ.

ಬಾಲ್ಯದಿಂದೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂದು ಬಯಸಿದ್ದರು ನಟಿ ಸೋನಿ ಮುಲೇವಾ. ಸದ್ಯ 'ವಧು' ಧಾರಾವಾಹಿಯ ಪ್ರಿಯಾಂಕಾಳಾಗಿ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಸೋನಿ ಮುಲೇವಾ ಅವರು ರಂಗಭೂಮಿ ಕಲಾವಿದೆ ಹೌದು! ಅಂದ ಹಾಗೇ ಸೋನಿ ಅವರು ಮೊದಲ ಅಭಿನಯಿಸಿದ ನಾಟಕ
ವಿಲಿಯಂ ಶೇಕ್ಸ್ ಪಿಯರ್. ಈ ನಾಟಕದಲ್ಲಿ ಹರ್ಮಿಯ ಪಾತ್ರಕ್ಕೆ ಜೀವ ತುಂಬಿದ್ದರು ಈಕೆ.
ತದ ನಂತರ ಸಂಸ್ಕೃತ ನಾಟಕ 'ಸೀತಾರಾಮ ಕಥಾ'ದಲ್ಲಿ ಮೂರು ಪಾತ್ರಗಳಲ್ಲಿ ನಟಿಸಿದ್ದರು. ಅವದತಿಗೆ, ಕೌಸಲ್ಯೆ, ಸೂತ್ರಧಾರ ಎಂಬ ಮೂರು ಪಾತ್ರಗಳಲ್ಲಿ ನಟಿಸಿರುವ ಸೋನಿ ಮುಲೇವಾ ಪತ್ರಿಕೋದ್ಯಮದಲ್ಲಿ ಬಿಎ ಪದವಿಯನ್ನು ಪಡೆದಿರುವ ಬೆಡಗಿ. ಥಿಯೇಟರ್ ಆರ್ಟ್ಸ್ ನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿರುವ ಸೋನಿ ಮುಲೇವಾ ಕಿರುತೆರೆಗೆ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ಕಾಲಿಟ್ಟಿದ್ದರು.

'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಮಾಜಿ ಪ್ರೇಯಸಿ ಅಹಲ್ಯಾಳಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಸೋನಿ. ಒಂದಷ್ಟು ಸಂಚಿಕೆಗಳಲ್ಲಿ ಕಾಣಿಸಿಕೊಂಡ ಈಕೆ 'ಗಟ್ಟಿಮೇಳ'ದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಎಂದರೆ ತಪ್ಪಾಗಲಾರದು. 'ಗಟ್ಟಿಮೇಳ' ಧಾರಾವಾಹಿಯ ನಂತರ ಈಕೆ ನಟಿಸಿದ್ದು 'ಮುದ್ದುಮಣಿಗಳು' ಧಾರಾವಾಹಿಯಲ್ಲಿ.
'ಮುದ್ದುಮಣಿಗಳು' ಧಾರಾವಾಹಿಯಲ್ಲಿ ನಾಯಕಿ ದೃಷ್ಟಿ ಆಗಿ ನಟಿಸುತ್ತಿದ್ದ ಸಮೀಕ್ಷಾ ಅವರು ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಆಯ್ಕೆ ಆದವರು ಸೋನಿ ಮುಲೇವಾ. ದೃಷ್ಟಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ಸೋನಿ ಮುಲೇವಾ ಸದ್ಯ ಪ್ರಿಯಾಂಕಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ.
ಇನ್ನು 'ಜರ್ಸಿ ನಂ.1' ಸಿನಿಮಾದಲ್ಲಿ ಚಂದನ್ ಆಚಾರ್ಯ ಅವರೊಂದಿಗೆ ಅಭಿನಯಿಸಿರುವ ಸೋನಿ ಮುಲೇವಾ ಮಾಡೆಲಿಂಗ್ ಲೋಕದಲ್ಲಿಯೂ ಗುರುತಿಸಿಕೊಂಡಿರುವ ಬೆಡಗಿ. ಒಂದಷ್ಟು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸೋನಿ ಮುಲೇವಾ 2017ರಲ್ಲಿ ಸೋನಿ 'ಮಿಸ್ ಟೀನ್ ಇಂಡಿಯಾ' ಸ್ಫರ್ಧೆಯಲ್ಲಿ' ಭಾಗವಹಿಸಿದ್ದರು.
'ಮಿಸ್ ಇಂಡಿಯಾ ಎಲೈಟ್ ಮಾಡೆಲ್' ಸ್ಫರ್ಧೆಯಲ್ಲಿ ಭಾಗವಹಿಸಿದ ಈಕೆ ಆ ಶೋ ಗೆದ್ದರು. ಮುಂದೆ 'ಫೇಸ್ ಆಫ್ ಮೈಸೂರು', 'ಮಿಸ್ ಟೀನ್ ಇಂಟರ್ ನ್ಯಾಷನಲ್ ಸೌತ್ ಇಂಡಿಯಾ' ಹಾಗೂ 2018ರಲ್ಲಿ 'ಗ್ಲೆನ್ ಆನನ್ ಸೂಪರ್ ಮಾಡೆಲ್' ಸ್ಫರ್ಧೆಯಲ್ಲಿ ಭಾಗವಹಿಸಿದ ಈಕೆ ಪ್ರಶಸ್ತಿಯನ್ನು ಪಡೆದುಕೊಂಡರು.
ಇನ್ನು ಧಾರಾವಾಹಿ, ಸಿನಿಮಾದ ಹೊರತಾಗಿ ರಿಯಾಲಿಟಿ ಶೋವಿನಲ್ಲಿಯೂ ಈಕೆ ಮೋಡಿ ಮಾಡಿದ್ದರು. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ'ಮಹಾನಟಿ' ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿರುವ ಸೋನಿ ಮುಲೇವಾ ಪ್ರತಿವಾರವೂ ವಿಭಿನ್ನ ರೀತಿಯಲ್ಲಿ ಕಿರುತೆರೆ ವೀಕ್ಷಕರ ಜೊತೆಗೆ ತೀರ್ಪುಗಾರರ ಮನ ಸೆಳೆಯುತ್ತಿದ್ದರು.


Click it and Unblock the Notifications











