ನಾನು ತಾಳಿ ಧರಿಸಲ್ಲ, ಯಾಕಂದ್ರೆ..; ಕಿರುತೆರೆ ನಟಿ ವೈಷ್ಣವಿ ಗೌಡ
ತಿಂಗಳ ಹಿಂದೆ ಕಿರುತೆರೆ ನಟಿ ವೈಷ್ಣವಿ ಗೌಡ ಹಸೆಮಣೆ ಏರಿದ್ದರು. ಉತ್ತರ ಭಾರತ ಮೂಲದ ಏರ್‌ಫೋರ್ಸ್ ಅಧಿಕಾರಿ ಅನುಕೂಲ್ ಮಿಶ್ರಾ ಎಂಬುವವರ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಬಹಳ ಅದ್ಧೂರಿಯಾಗಿ ನಡೆದ ಮದುವೆ ಬಗ್ಗೆ ಸ್ವತಃ ವೈಷ್ಣವಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.
ನವ ಜೋಡಿ ಹನಿಮೂನ್‌ಗಾಗಿ ಮನಾಲಿಗೆ ಹೋಗಿ ಬಂದಿದ್ದರು. ಈ ಬಗ್ಗೆ ಕೂಡ ವೈಷ್ಣವಿ ವೀಡಿಯೋ ಮಾಡಿ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿರುವ 'ಸೀತಾರಾಮ' ನಟಿ ವೀಡಿಯೋ, ರೀಲ್ಸ್ ಮಾಡುತ್ತಿರುತ್ತಾರೆ. ತಮ್ಮದೇ ಯೂಟ್ಯೂಬ್ ಚಾನಲ್ ಹೊಂದಿದ್ದು ಆಗಾಗ್ಗೆ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಸದ್ಯ ಟ್ರೋಲ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸೆಲೆಬ್ರೆಟಿಗಳು ತಾಳಿ ಹಾಕದ ವಿಚಾರಕ್ಕೆ ಪದೇ ಪದೆ ಟ್ರೋಲ್ ಎದುರಿಸುವಂತಾಗುತ್ತದೆ. ಈ ಹಿಂದೆ ಕೂಡ ಕೆಲ ನಟಿಯರನ್ನು ಇದೇ ಕಾರಣಕ್ಕೆ ಟ್ರೋಲ್ ಮಾಡಿದ್ದು ಇದೆ. ನಟಿ ವೈಷ್ಣವಿ ಗೌಡ ಈಗ ಟೀಕೆ ಎದುರಿಸುವಂತಾಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಆಕೆ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಪತಿಯ ಹುಟ್ಟೂರಿನಲ್ಲಿ ಹೊಸದೊಂದು ವೀಡಿಯೋ ಮಾಡಿ ಮಾತನಾಡಿದ್ದಾರೆ. ಅದಕ್ಕೂ ಮುನ್ನ ಆರಂಭದಲ್ಲೇ ತಮ್ಮ ಎದುರಾಗುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಸಂಪ್ರದಾಯದ ಪ್ರಕಾರ ನೀವು ಯಾಕೆ ಮದುವೆ ಆಗ್ಲಿಲ್ಲ. ಮದುವೆ ಬಳಿಕ ನೀವು ಯಾಕೆ ತಾಳಿ ಹಾಕ್ಲಿಲ್ಲ. ತಾಳಿ ಹಾಕದೇ ನಮ್ಮ ಸಂಪ್ರದಾಯಕ್ಕೆ ಗೌರವ ಕೊಡಲ್ವಾ? ಮದುವೆ ಯಾಕ್ ಬೇಕಿತ್ತು, ತಾಳಿ ಹಾಕದೇ ಇದ್ದಮೇಲೆ ಎಂದು ಕಾಮೆಂಟ್ ಕೆಲವರು ಕಾಮೆಂಟ್ ಮಾಡಿದ್ರಿ. ಅದಕ್ಕೆ ಉತ್ತರ ಕೊಡ್ತೀನಿ ಎಂದು ವೈಷ್ಣವಿ ಮಾತು ಆರಂಭಿಸಿದ್ದಾರೆ. ಸಾಮಾನ್ಯವಾಗಿ ಹುಡುಗನ ಮನೆ ಸಂಪ್ರದಾಯ, ಶಾಸ್ತ್ರಗಳು ಏನು ಇರುತ್ತೋ ಅದನ್ನೇ ಮದುವೆ ಆಗುವ ಹುಡುಗಿ ಮನೆಯವರು ಪಾಲಿಸಬೇಕು. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಅದನ್ನೇ ನಾವು ಮಾಡಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಳಿ ಯಾಕೆ ಹಾಕ್ತಿಲ್ಲ, ಎನ್ನುವ ಪ್ರಶ್ನೆಗೆ "ತಾಯಿ ಎನ್ನುವುದು ನಮ್ಮ ಮನೆಯವರ ಪದ್ಧತಿಯಲ್ಲಿ ಇಲ್ಲ. ಅವರು ಅನುಸರಿಸುವುದಿಲ್ಲ. ನಮ್ಮ ಅತ್ತೆ ಕೂಡ ತಾಳಿ ಇವತ್ತಿನವರೆಗೂ ಹಾಕುವುದಿಲ್ಲ. ಅದು ಯಾಕೆ ಅಂತ ಗೊತ್ತಿಲ್ಲ. ತಾಳಿ ನಮ್ಮ ಕಡೆ ಮುಖ್ಯ ಅಲ್ಲ, ಮದುವೆ ಆಗಿದೆ ಎಂದು ಗೊತ್ತಾಗಲು ಮೂಗು ಚುಚ್ಚಿಸಿರಬೇಕು. ಕೈಯಲ್ಲಿ ಗಾಜಿನ ಬಳೆ ಇರಬೇಕು. ಜೊತೆಗೆ ಒಂದು ದಾರ ಕಟ್ಟಿಕೊಳ್ಳಬೇಕು. ಜೊತೆಗೆ ಕಾಲುಂಗುರ ಹಾಕಬೇಕು. ಇದನ್ನೇ ನಾನು ಕೂಡ ಅನುಸರಿಸುತ್ತಿದ್ದೇನೆ. ನಮ್ಮ ಶಾಸ್ತ್ರ, ಸಂಪ್ರದಾಯದ ಬಗ್ಗೆ ಬಹಳ ಗೌರವ ನನಗಿದೆ. ನಾನು ತಾಳಿ ಹಾಕಲಿಲ್ಲ, ಅಂದಮಾತ್ರಕ್ಕೆ ಗೌರವ ಇಲ್ಲ ಅಂತಲ್ಲ. ಆದರೆ ಅವರ ಸಂಪ್ರದಾಯದಲ್ಲಿ ಇಲ್ಲದ ಕಾರಣ ನಾನು ತಾಳಿ ಹಾಕಿಕೊಂಡಿಲ್ಲ" ಎಂದು ವೈಷ್ಣವಿ ಗೌಡ ವಿವರಿಸಿದ್ದಾರೆ.
ಚತ್ತಿಸ್‌ಘರ್‌ನಲ್ಲಿರುವ ಬಿಲೈ ನಗರದ ಮಾಲ್‌ನಲ್ಲಿ ಶಾಪಿಂಗ್ ಮಾಡಿ ಬಳಿಕ ವೈಷ್ಣವಿ ಹಾಗೂ ಪತಿ ಅನುಕೂಲ್ ಸ್ನೇಹಿತರ ಮನೆಗೆ ಹೋಗಿ ಊಟ ಮಾಡಿ ನಂತ್ರ ದೇವಸ್ಥಾನಕ್ಕೆ ತೆರಳಿದ್ದಾರೆ. ಬಳಿಕ ಆ ದೇವಸ್ಥಾನದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇನ್ನು ತಮ್ಮ ಪತಿಯ ಹುಟ್ಟೂರಿನ ಬಳಿಯ ಸಂತೆಗೆ ತೆರಳಿದ್ದಾರೆ. ಕೋಳಿ ಕಾಳಗ ದರ್ಶನ ಮಾಡಿಸಿದ್ದಾರೆ. ಚಿತ್ರಕೋಟ್ ಜಲಪಾತ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳನ್ನು ವೈಷ್ಣವಿ ಪರಿಚಯಿಸಿದ್ದಾರೆ.
ನಟಿ ವೈಷ್ಣವಿ ಗೌಡ ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಕೊಂಚ ಬಿಡುವು ಪಡೆದಿರುವ ಆಕೆ ಶೀಘ್ರದಲ್ಲೇ ಯಾವುದಾದರೂ ಧಾರಾವಾಹಿ ಮೂಲಕ ವೀಕ್ಷಕರ ಮುಂದೆ ಬರಲಿದ್ದಾರೆ.


Click it and Unblock the Notifications











