ಅನಘಾ ಪಾತ್ರಕ್ಕೆ ಅಂತ್ಯ ಹಾಡಿದಾಗ 10 ನಿಮಿಷ ಕನ್ನಡಿ ಮುಂದೆ ನಿಂತಿದ್ದೇಕೆ ಈ ನಟಿ? ಆ ಧಾರಾವಾಹಿ ಯಾವುದು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಜನನಿ' ಧಾರಾವಾಹಿಯೂ ಒಂದು. ಬರೋಬ್ಬರಿ 750 ಸಂಚಿಕೆ ಪೂರೈಸಿದ್ದ 'ಜನನಿ' ಧಾರಾವಾಹಿಯು ಇತ್ತೀಚೆಗಷ್ಟೇ ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡಿದೆ. 'ಜನನಿ' ಧಾರಾವಾಹಿಯಲ್ಲಿ ಅನಘಾ ಆಗಿ ಅಭಿನಯಿಸುತ್ತಿದ್ದ ವರ್ಷಿತಾ ಸೇನಿ ಅವರು ತಮ್ಮ ಪಯಣದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ.
"ಅನಘಾ ಪಾತ್ರ ನನಗೆ ತುಂಬಾ ಹತ್ತಿರವಾದಂತಹ ಪಾತ್ರ. ಆ ಪಾತ್ರದಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಜೊತೆಗೆ ಅನಘಾ ಆಗಿ ನಟಿಸುವಾಗಲಂತೂ ನಾನು ತುಂಬಾನೇ ಎಂಜಾಯ್ ಮಾಡಿದ್ದೇನೆ. ಅಂದ ಹಾಗೇ ಅನಘಾ ಪಾತ್ರಕ್ಕೆ ಲಿಮಿಟೇಶನ್ಸ್ ಇರ್ಲಿಲ್ಲ. ನನಗೆ ಹೇಗೆ ಬೇಕು ಹಾಗೇ ಮಾಡಿದ್ರೂ ಅದೇ ಕರೆಕ್ಟ್ ಆಗಿರ್ತಿತ್ತು. ಸಮ್ ಪಾಯಿಂಟ್ ನಾನು ವರ್ಷಿತಾ ಆಗಿದ್ರೂ ಅನಘಾ ಥರಾನೇ ಆಡ್ತಿದ್ದೆ. ಅಷ್ಟು ಕೂಡಾ ನಾನು ಪಾತ್ರದಲ್ಲಿ ಮುಳುಗಿಹೋಗಿದ್ದೆ" ಎಂದು ಜನನಿ ಧಾರಾವಾಹಿಯ ಜರ್ನಿಯ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ ವರ್ಷಿತಾ ಸೇನಿ.

"ಸತ್ಯ ಹೇಳ್ಬೇಕು ಅಂಥ ಅಂದ್ರೆ ಒಂದೂವರೆ ವರ್ಷ ಅದು ಹೇಗೆ ಹೋಯ್ತು ಅಂತಾನೇ ನನಗೆ ಗೊತ್ತಾಗ್ಲಿಲ್ಲ. ನಿರ್ದೇಶಕರು ಹೊನ್ನೇಶ್ ಹಾಗೂ ರಾಮ್ ಅವರಿಗೆ ನಾನು ಥ್ಯಾಂಕ್ಸ್ ಹೇಳಲೇಬೇಕು. ಅನಘಾ ಪಾತ್ರದಲ್ಲಿ ನಾನು ಇನ್ವಾಲ್ವ್ ಆಗೋದಕ್ಕೆ ಹೊನ್ನೇಶ್ ಸರ್ ತುಂಬಾನೇ ಹೇಳಿಕೊಟ್ಟಿದ್ದಾರೆ. ಕಾಮಿಡಿ ಜಾನರ್ ನಂಗೆ ಅಷ್ಟು ಚೆನ್ನಾಗಿ ಮಾಡುವುದಕ್ಕೆ ಬರುವುದಿಲ್ಲ. ಕಾಮಿಡಿಗೆ ಬೇಕಾದ ಟೈಮಿಂಗ್ ಆಗಲಿ, ಪಂಚ್ ಆಗಲಿ ನನಗೆ ಬರ್ತಾ ಇರ್ಲಿಲ್ಲ. ಹೊನ್ನೇಶ್ ಸರ್ ತುಂಬಾ ಚೆನ್ನಾಗಿ ಅವ್ರೆ ಮಾಡಿ ನಂಗೆ ಹೇಳಿ ಕೊಡ್ತಾ ಇದ್ರು" ಎಂದು ಸಂದರ್ಶನದ ವೇಳೆ ವರ್ಷಿತಾ ಸೇನಿ ಹೇಳಿಕೊಂಡಿದ್ದಾರೆ.
"ಅನಘಾ ಪಾತ್ರವನ್ನು ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇತ್ತೀಚೆಗಷ್ಟೇ ತಮ್ಮನ ಮದುವೆ ನಡೆಯಿತು. ನಾನು ಆ ಕೆಲಸದಲ್ಲಿ ಬ್ಯುಸಿಯಾದ ಕಾರಣ ಅಷ್ಟೊಂದು ಗೊತ್ತಾಗ್ಲಿಲ್ಲ. ಆದ್ರೆ ಒಬ್ಬಳೇ ಕೂತಾಗಲೆಲ್ಲಾ ಅನಘಾ ಪಾತ್ರ ನನ್ನನ್ನು ಕಾಡುತ್ತಿರುತ್ತೆ. ನಾನು ಅನಘಾ ಪಾತ್ರಕ್ಕೆ ಎಮೋಷನಲ್ ಆಗಿ ಕನೆಕ್ಟ್ ಆಗಿ ಬಿಟ್ಟಿದ್ದೆ" ಎಂದಿದ್ದಾರೆ ವರ್ಷಿತಾ ಸೇನಿ.
"ಜನನಿ ಧಾರಾವಾಹಿಯ ಲಾಸ್ಟ್ ದಿನದ ಶೂಟಿಂಗ್ ಅಂತೂ ನಾನು ಯಾವತ್ತೂ ಮರೆಯುವುದಕ್ಕೆ ಸಾಧ್ಯವಿಲ್ಲ. ಶೂಟಿಂಗ್ ಮುಗಿದದ್ದೇ ತಡ ಎಲ್ಲರೂ ಅಳುತ್ತಾ ಬಂದು ಡ್ರೆಸ್ ಛೇಂಜ್ ಮಾಡ್ತಿದ್ರು. ಆದರೆ ನಾನು ಮಾತ್ರ ಹತ್ತು ನಿಮಿಷಗಳ ಕಾಲ ಮಿರರ್ ಮುಂದೆ ನಿಂತಿದ್ದೆ. ಇದೇ ಲಾಸ್ಟ್ ಆಗಿ ನಾನು ನನ್ನನ್ನು ಅನಘಾ ಆಗಿ ನೋಡಿಕೊಳ್ಳುವುದು ಎಂದುಕೊಂಡು ನನ್ನನ್ನೇ ನಾನು ನೋಡಿ ಕಣ್ತುಂಬಿಸಿಕೊಂಡಿದ್ದೆ. ತುಂಬಾ ಅಳುಬಂತು" ಎಂದಿದ್ದಾರೆ ವರ್ಷಿತಾ ಸೇನಿ.
"ಕಿರುತೆರೆ ವೀಕ್ಷಕರಂತೂ ಅನಘಾ ಪಾತ್ರವನ್ನು ತುಂಬಾನೇ ಮೆಚ್ಚಿಕೊಂಡಿದ್ದರು. ಅನಘಾ ಪಾತ್ರ ತುಂಬಾ ಚೆನ್ನಾಗಿದೆ ಎಂದೂ ಕೂಡಾ ಜನರು ಪ್ರತಿಕ್ರಿಯೆ ನೀಡುತ್ತಿದ್ದರು. ಈಗಂತೂ ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಹಕಲಾವಿದರುಗಳು, ಟೆಕ್ನಿಶಿಯನ್ಸ್ ಹೀಗೆ ಎಲ್ಲರನ್ನು ಕೂಡಾ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅನಘಾ ಪಾತ್ರ ನನ್ನ ಹೃದಯಕ್ಕೆ ಹತ್ತಿರವಾದಂತಹ ಪಾತ್ರ. ಅದು ನನ್ನ ಫೇವರಿಟ್ ಪಾತ್ರ. ಇಷ್ಟು ವರ್ಷ ನಾನು ಮಾಡಿದಂತಹ ಎಲ್ಲಾ ಪಾತ್ರಗಳಲ್ಲಿ ನನಗೆ ನನ್ನ ಫಸ್ಟ್ ಧಾರಾವಾಹಿಯ ಅನು ಪಾತ್ರ ಮತ್ತು ಅನಘಾ ಪಾತ್ರನೇ ತುಂಬಾ ಫೇವರಿಟ್" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ವರ್ಷಿತಾ ಸೇನಿ ಹೇಳಿಕೊಂಡಿದ್ದಾರೆ.


Click it and Unblock the Notifications











