'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಹೊರ ನಡೆದ ಸ್ನೇಹಾ; ಈ ಪಾತ್ರಕ್ಕೆ ಎಂಟ್ರಿ ಕೊಟ್ಟವರ್‍ಯಾರು?
ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭದಿಂದಲೂ ಪ್ರೇಕ್ಷಕರ ಫೇವರಿಟ್ ಧಾರಾವಾಹಿಗಳಲ್ಲೊಂದು. ಪುಟ್ಟಕ್ಕ ಹಾಗೂ ಆಕೆಯ ಮೂರು ಹೆಣ್ಣು ಮಕ್ಕಳ ಸುತ್ತ ಸುತ್ತುವ ಈ ಧಾರಾವಾಹಿಯ ಕಥೆ ಜನಮನ ಗೆದ್ದಿದೆ. ಹಿರಿಯ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಂತೂ ಸಿನಿ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಬಹಳ ಸಂತಸ ತಂದಿತ್ತು.
ಇದರಲ್ಲಿ ಸ್ನೇಹಾ ಎಂಬ ದಿಟ್ಟ ಹೆಣ್ಣುಮಗಳ ಪಾತ್ರವೂ ಜನರಿಗೆ ಇಷ್ಟವಾಗಿತ್ತು. ಕಂಠಿ ಹಾಗೂ ಸ್ನೇಹಾಳ ಲವ್ ಸ್ಟೋರಿಯನ್ನು ಇಷ್ಟ ಪಟ್ಟು ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ವಿಚಿತ್ರ ತಿರುವನ್ನು ನೀಡಿದ್ದರು ಧಾರಾವಾಹಿಯ ನಿರ್ದೇಶಕರು. ಹೌದು ಸ್ನೇಹ ಪಾತ್ರಧಾರಿ ಆಗಿದ್ದ ಸಂಜನಾ ಬುರ್ಲಿ ಅವರು ಧಾರಾವಾಹಿಯನ್ನು ಬಿಡಬೇಕಾಗಿ ಬಂದಿದ್ದಕ್ಕೆ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರವನ್ನೇ ಸಾಯಿಸಿಬಿಟ್ಟರು. ಡಿಸಿ ಆಗಿ ಪಾತ್ರ ಮುಂದುವರಿಯುತ್ತಿರುವಾಗಲೇ ಸಡನ್ ಆಗಿ ಈ ಪಾತ್ರವನ್ನು ಧಾರಾವಾಹಿ ಕಥೆಯಿಂದ ತೆಗೆದಿದ್ದು ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ.

ಆದರೆ, ಇದೀಗ ಸ್ನೇಹಾಳ ಹೃದಯವನ್ನು ಕಸಿ ಮಾಡುವ ಮೂಲಕ ಎಂಬ ಇನ್ನೊಂದು ಪಾತ್ರಕ್ಕೆ ಜೀವ ನೀಡಿ ಕತೆಯನ್ನು ಮುಂದುವರಿಸಲಾಗಿತ್ತು. ಸ್ನೇಹಾ ಎಂಬ ಹೊಸ ಪಾತ್ರವನ್ನು ಪರಿಚಯಿಸಲಾಗಿತ್ತು. ಈ ಪಾತ್ರದಲ್ಲಿ ಮೊದಲಿಗೆ ಅಪೂರ್ವ ನಾಗರಾಜ್ ಎಂಬ ನಟಿಯನ್ನು ಪರಿಚಯಿಸಿದರು.
ಆದರೆ ಅದ್ಯಾಕೋ ಪ್ರೇಕ್ಷಕರಿಗೆ ಈ ಪಾತ್ರ ಹಾಗೂ ನಟಿ ಸರಿ ಹೊಂದಲೇ ಇಲ್ಲ. ಹಾಗಾಗಿ ಅಪೂರ್ವ ನಾಗರಾಜ್ ಅವರ ಪಾತ್ರ ಬದಲಾಗಿದೆ. ಇನ್ನು ಮುಂದೆ ಕಿರುತೆರೆ ನಟಿ ವಿದ್ಯಾ ರಾಜ್ ಅವರು ಸ್ನೇಹ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅಂದ ಹಾಗೇ ಈಗಾಗಲೇ ವಿದ್ಯಾ ರಾಜ್ ಅವರು ಸ್ನೇಹಾ ಆಗಿ ನಟಿಸುತ್ತಿರುವ ಸಂಚಿಕೆಯ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಹೊಸ ಸ್ನೇಹಾಳನ್ನು ಕಂಡು ವೀಕ್ಷಕರು ಆಶ್ಚರ್ಯ ಪಟ್ಟುಕೊಂಡಿದ್ದಾರೆ.
ಸದ್ದಿಲ್ಲದೇ ಸ್ನೇಹಾ ಪಾತ್ರದಲ್ಲಿ ಬದಲಾವಣೆಯಾಗಿದ್ದು, ವಿದ್ಯಾ ರಾಜ್ ಅವರು ಸ್ನೇಹಾಳಾಗಿ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರಾ ಎಂಬ ಕುತೂಹಲವೂ ವೀಕ್ಷಕರಿಗಿದೆ. ಕಂಠಿಯ ಹೆಂಡತಿ ಸ್ನೇಹಾ ಬಹಳ ದಿಟ್ಟ ಸ್ವಾಭಿಮಾನಿ ಹೆಣ್ಣು ಮಗಳಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿಯನ್ನು ವೀಕ್ಷಿಸುತ್ತಿದ್ದ ಹಲವಾರು ಹೆಣ್ಣು ಮಕ್ಕಳಿಗೆ ಮಾದರಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಇದೀಗ ಪರಿಚಯವಾಗಿರುವ ಹೊಸ ಪಾತ್ರ ಸ್ನೇಹಾ, ಒಂದಷ್ಟು ತನ್ನದೇ ಆದ ಭಯ ಹಾಗೂ ಅಸುರಾಕ್ಷತ ಭಾವದಲ್ಲಿರುವಂತಹ ಪಾತ್ರವಾಗಿದೆ. ಇತ್ತೀಚೆಗಷ್ಟೇ ತನ್ನ ಹೆಂಡತಿ ಸ್ನೇಹಾಳ ಹೃದಯವನ್ನೇ ಈಕೆಗೂ ನೀಡಿರುವುದು ಎಂಬ ವಿಚಾರ ಕಂಠಿಗೆ ಗೊತ್ತಾಗಿದೆ.

ಇದೀಗ ಸ್ನೇಹಾ ಹಾಗೂ ಕಂಠಿಯ ನಡುವೆ ಯಾವ ರೀತಿ ಸಂಬಂಧ ಬೆಳೆಯುತ್ತದೆ ಎಂಬುದು ಪ್ರೇಕ್ಷಕರ ಕುತೂಹಲವಾಗಿದೆ. ತನ್ನ ಮನೆಯಲ್ಲಿ ಇದ್ದ ಸ್ನೇಹಾ ಬಗ್ಗೆ ತಾತ್ಸಾರವಿದ್ದ ಕಂಠಿಗೆ, ಸ್ನೇಹಾಳಲ್ಲಿ ತನ್ನ ಹೆಂಡತಿ ಹೃದಯವಿರುವುದು ತಿಳಿದಾಗಿನಿಂದ ತಾತ್ಸಾರವೆಲ್ಲ ದೂರವಾಗಿ ಅನುಕಂಪ ಮೂಡುತ್ತಿದೆ. ಹಾಗಾಗಿ ಇವರಿಬ್ಬರ, ಜೋಡಿ ಕಥೆಯನ್ನು ನಿರ್ದೇಶಕರು ಯಾವ ರೀತಿ ತೆಗೆದುಕೊಂಡು ಹೋಗುವ ಯೋಚನೆಯಲ್ಲಿದ್ದಾರೆ ಎಂಬುದೇ ಪ್ರೇಕ್ಷಕರ ಕುತೂಹಲ.
ವಿಚಾರವೆಂದರೆ ನಟಿ ವಿದ್ಯಾ ರಾಜ್ ಅವರು ಸದ್ಯ 'ರಾಮಾಚಾರಿ' ಧಾರಾವಾಹಿಯ ರುಕ್ಕು ಪಾತ್ರದಲ್ಲಿಯೂ ನಟಿಸುತ್ತಿದ್ದಾರೆ. ರಾಮಾಚಾರಿಯಲ್ಲಿ ಕೃಷ್ಣನ ಹೆಂಡತಿ ರುಕ್ಮಿಣಿಯಾಗಿ ನಟಿ ದೇವಿಕಾ ಭಟ್ ಅವರು ಮೊದಲಿಗೆ ಕಾಣಿಸಿಕೊಂಡಿದ್ದರು. ನಂತರ ಕೆಲವೇ ಸಮಯದೊಳಗೆ ದೇವಿಕಾ ಭಟ್, ರುಕ್ಮಿಣಿ ಪಾತ್ರದಿಂದ ಹೊರ ನಡೆದರು. ಆ ಪಾತ್ರಕ್ಕೆ ನಟಿ ವಿದ್ಯಾ ರಾಜ್ ಅವರು ಇದೀಗ ಜೀವ ತುಂಬಿದ್ದಾರೆ.
ರುಕ್ಮಿಣಿ ಪಾತ್ರ ನೆಗೆಟಿವ್ ಶೇಡ್‌ನದ್ದಾಗಿದ್ದು, ವಿದ್ಯಾ ರಾಜ್ ಅವರ ಅಭಿನಯ ಪ್ರೇಕ್ಷಕರಿಗೆ ಹಿಡಿಸಿದೆ. ಇದರ ನಡುವೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿಯೂ ಪಾತ್ರಧಾರಿ ಬದಲಾವಣೆಯಾಗಿ ನಟಿ ವಿದ್ಯಾ ರಾಜ್ ಅವರು ಸ್ನೇಹ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅಂದ್ಹಾಗೇ ವಿದ್ಯಾ ರಾಜ್ ಅವರು ಈ ಮೊದಲು 'ಕನ್ಯಾದಾನ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಇದರ ಜೊತೆಗೆ 'ಸೇವಂತಿ' ಧಾರಾವಾಹಿಯಲ್ಲಿಯೂ ನಾಯಕ ಅರ್ಜುನ್ ನ ಪರ್ಸನಲ್ ಅಸಿಸ್ಟೆಂಟ್ ಆಗಿ ವಿದ್ಯಾ ರಾಜ್ ನಟಿಸುತ್ತಿದ್ದಾರೆ.
'ಸೇವಂತಿ', 'ರಾಮಾಚಾರಿ' ಹಾಗೂ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ನಟಿ ವಿದ್ಯಾ ರಾಜ್ ಅವರು ತಮ್ಮ ಅಚ್ಚುಕಟ್ಟಾದ ಅಭಿನಯದಿಂದ ಜನಮನ ಗೆಲ್ಲುತ್ತಿರುವುದು ಸುಳ್ಳಲ್ಲ.


Click it and Unblock the Notifications











