ಅಳಿಯಂದಿರು ಅಂದ್ರೆ ಪುಟ್ಟಕ್ಕ, ಲಕ್ಷ್ಮಕ್ಕನಿಗೆ ಸಿಕ್ಕಂತಿರಬೇಕು: ಕಂಠಿ, ಸಿದ್ದೇಗೌಡ್ರ ಗುಣಗಾನ
ಜೀ ಕನ್ನಡದಲ್ಲಿ ಬರುತ್ತಿರುವ ಧಾರಾವಾಹಿಗಳು ಜನರಿಗೆ ತೀರಾ ಹತ್ತಿರವಾಗಿವೆ. ನಮ್ಮ ಸುತ್ತ ಮುತ್ತ ನಡೆಯುವ ಕಥೆ ಏನೋ ಎಂಬಂತೆ ಫೀಲ್ ಕೊಡುತ್ತವೆ. ನಮ್ಮ ಮನೆಯಲ್ಲೂ ಇಂಥವರು ಇರಬಾರದಾ? ಎಂಬಂತ ಆಸೆಗಳನ್ನು ಹುಟ್ಟಿಸುತ್ತವೆ. ಅಷ್ಟು ಒಳ್ಳೊಳ್ಳೆ ಪಾತ್ರಗಳು ಧಾರಾವಾಹಿಯಲ್ಲಿ ನೋಡುಗರನ್ನು ಕಾಡುತ್ತವೆ.
ನಿಜ ಜೀವನದಲ್ಲಿ ಎಲ್ಲಾ ಅಳಿಯಂದಿರು ಒಳ್ಳೆಯವರಾಗಿಯೇ ಸಿಗುವುದಿಲ್ಲ. ಹಾಗಂತ ಎಲ್ಲಾ ಅಳಿಯಂದಿರು ಕೆಟ್ಟವರಾಗಿಯೂ ಇರುವುದಿಲ್ಲ. ಕಷ್ಟ ಎಂದಾಗ ಅತ್ತೆಯ ಜೊತೆಗೆ ನಿಲ್ಲುವ ಅಳಿಯ ಇದ್ದರೆ ಅತ್ತೆಗೆ ನೆಮ್ಮದಿ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಸಿದ್ದೇಗೌಡ್ರು ಹಾಗೂ ಕಂಠಿ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಹಾಗೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅಳಿಯಂದಿರು ಅತ್ತೆಯಂದಿರನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವಂತೆ ಕಾಪಾಡುತ್ತಿದ್ದಾರೆ.

ಕಂಠಿ, ಸಿದ್ದೇಗೌಡ್ರ ಮೇಲೆ ಕ್ರಶ್
ಜೀ ಕನ್ನಡದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾಗಿ ವರ್ಷಗಳೇ ಆಗುತ್ತಿವೆ. ಆರಂಭದಲ್ಲಿಯೇ ಕಂಠಿ ಎಂದರೆ ಅಭಿಮಾನಿಗಳು ಜಾಸ್ತಿಯಾಗಿದ್ದರು. ಕಂಠಿ ಹೆಸರಲ್ಲಿ ಫ್ಯಾನ್ ಪೇಜ್‌ಗಳು ಹೆಚ್ಚಾಗಿದ್ದವು. ಕಂಠಿ ಭಾಷೆಗೆ ಎಲ್ಲರೂ ಫಿದಾ ಆಗಿದ್ದರು. ಆಗ ಕ್ರಶ್ ಆಗಿಯೇ ಎಲ್ಲರ ಹೃದಯದಲ್ಲಿ ಸ್ಥಾನ ಪಡೆದಿದ್ದರು. ಈಗಲೂ ಮಹಿಳಾ ಮಣಿಗಳ ಕ್ರಶ್ ಹೌದು. ಆದರೆ ಈಗ ಸಿದ್ದೇಗೌಡ್ರು ಕೂಡ ಹೊಸ ಕ್ರಶ್ ಆಗಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಡ್ಯ ಭಾಷೆಯಲ್ಲಿ ಮಾತನಾಡುತ್ತಾ ಹೆಣ್ಮನಗಳನ್ನು ಗೆದ್ದಿದ್ದಾರೆ.
ಪುಟ್ಟಕ್ಕನಿಗೆ ಸದಾ ಬೆಂಗಾವಲು ಕಂಠಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ, ಪುಟ್ಟಕ್ಕನಿಗೆ ಸದಾ ಬೆಂಗಾವಲಾಗಿ ಇರುತ್ತಾನೆ. ಪುಟ್ಟಕ್ಕ ಏನೇ ಸಮಸ್ಯೆಗೆ ಸಿಲುಕಿದ್ದರು ಕಂಠಿ ಅಲ್ಲಿಗೆ ನುಗ್ಗಿ ಪುಟ್ಟಕ್ಕನನ್ನು ಕಾಪಾಡುತ್ತಾನೆ. ಸ್ನೇಹಾ ತಪ್ಪು ಮಾಡಿದಾಗಲೂ ಪುಟ್ಟಕ್ಕನನ್ನು ಸಮಾಧಾನ ಮಾಡುತ್ತಾನೆ. ಪುಟ್ಟಕ್ಕನಿಗೆ ಮಗನಿಲ್ಲ ಎಂಬ ಕೊರತೆಯನ್ನು ಕಂಠಿ ತೀರಿಸುತ್ತಿದ್ದಾನೆ. ಅಳಿಯ ಎಂಬುದಕ್ಕಿಂತ ಮಗನಾಗಿಯೇ ಇದ್ದಾನೆ.

ಲಕ್ಷ್ಮಕ್ಕ ಬೆಂಬಲಕ್ಕೆ ಸಿದ್ದೇಗೌಡ್ರು
ಇನ್ನು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲಕ್ಷ್ಮೀ ಒಮ್ಮೆ ಸಿದ್ದೇಗೌಡರ ಪ್ರಾಣವನ್ನು ಕಾಪಾಡಿದ್ದಳು. ಆದರೆ ಆ ಋಣವನ್ನು ತೀರಿಸಲು ಹೊರಟ ಸಿದ್ದೇಗೌಡ್ರು, ಲಕ್ಷ್ಮಕ್ಕ ಯಾವಾಗಲೇ ಕಷ್ಟದಲ್ಲಿ ಸಿಲುಕಿದರು ಅಲ್ಲಿ ನಿಂತಿರುತ್ತಾನೆ. ಲಕ್ಷ್ಮಕ್ಕನ ಬೆಂಗಾವಲಾಗಿ ಕಾಯುತ್ತಾನೆ. ಈಗ ಅಕ್ಕನ ಮಗಳನ್ನು ಬೇರೆ ಇಷ್ಟ ಪಡುತ್ತಿದ್ದಾನೆ. ಹೀಗಾಗಿ ಲಕ್ಷ್ಮಕ್ಕನಿಗೆ ಹೆಚ್ಚಿನ ಸಹಾಯವನ್ನೇ ಮಾಡುತ್ತಿದ್ದಾನೆ. ಸಿದ್ದೇಗೌಡ್ರ ಈ ನಿಶ್ಕಲ್ಮಶ ಪ್ರೀತಿಗೆ ನೋಡುಗರು ತಲೆ ಬಾಗಿದ್ದಾರೆ. ಸಿದ್ದೇಗೌಡ್ರ ಆ ಮುಗ್ಧತೆ, ಆ ನಗು ಎಲ್ಲವೂ ನೆಟ್ಟಿಗರ ಗಮನ ಸೆಳೆದಿದೆ.
ಪುಟ್ಟಕ್ಕ, ಲಕ್ಷ್ಮಕ್ಕನ ಅಳಿಯಂದಿರಿಗೆ ಸಲಾಂ
ಒಳ್ಳೆಯ ಅಳಿಯಂದಿರು ಸಿಕ್ಕಿದರೆ ತಾಯಂದಿರಿಗೆ ಅದಕ್ಕಿಂತ ನೆಮ್ಮದಿ ಮತ್ತೊಂದಿಲ್ಲ. ಸೀರಿಯಲ್ ನೋಡಿ ಕೂಡ ಒಮ್ಮೊಮ್ಮೆ ರಿಯಲ್ ಲೈಫ್ ಬದಲಾಗುತ್ತದೆ. ಪುಟ್ಟಕ್ಕನಿಗೆ, ಲಕ್ಷ್ಮಕ್ಕನಿಗೆ ಸಿಕ್ಕಿರುವ ಚಿನ್ನದಂತ ಅಳಿಯಂದಿರನ್ನು ಕಂಡು ಸೀರಿಯಲ್ ಪ್ರಿಯರಾದ ತಾಯಂದಿರು ಅರಸಿಕೊಳ್ಳುತ್ತಿದ್ದಾರೆ. ನಮಗೂ ಇಂಥಹ ಅಳಿಯನೇ ಸಿಗಲಿ ಎಂದು ಬೇಡಿ ಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಕಮೆಂಟ್‌ಗಳಲ್ಲೂ ಇಬ್ಬರ ಬಗ್ಗೆ ಪಾಸಿಟಿವ್ ಕಮೆಂಟ್ಸ್ ಬರುತ್ತಿವೆ. ಅತ್ತೆ ಹಾಗೂ ಅಳಿಯಂದಿರನ್ನು ನೋಡುಗರು ಸಪೋರ್ಟ್ ಮಾಡುತ್ತಿದ್ದಾರೆ. ಬಾಂಧವ್ಯ ಇದೆ ರೀತಿ ಇರಲಿ ಎಂದು ಹಾರೈಸುತ್ತಿದ್ದಾರೆ.


Click it and Unblock the Notifications











