ಗಂಡು ಮಗುವಿಗೆ ತಂದೆಯಾದ ವಿಜಯ್ ಸೂರ್ಯ; ಪತ್ನಿ ಜತೆ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಟ
ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಟಿವಿ ವೀಕ್ಷಕರ ಮನೆ, ಮನಗಳನ್ನು ತಲುಪಿದ ನಟ ವಿಜಯ್ ಸೂರ್ಯ ಸದ್ಯ ಮತ್ತೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ನಮ್ಮ ಲಚ್ಚಿ ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ವಿಜಯ್ ಸೂರ್ಯ ಇದೇ ಸಮಯಕ್ಕೆ ತೆಲುಗು ಕಿರುತೆರೆಯಲ್ಲಿಯೂ ಸಹ ನಿರತರಾಗಿದ್ದಾರೆ.
ಹೀಗೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಜಯ್ ಸೂರ್ಯ ಇದೀಗ ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಹೌದು, ಈಗಾಗಲೇ ಸೋಹನ್ ಎಂಬ ಮಗನನ್ನು ಹೊಂದಿದ್ದ ವಿಜಯ್ ಸೂರ್ಯ ಹಾಗೂ ಚೈತ್ರಾ ಶ್ರೀನಿವಾಸ್ ದಂಪತಿ ಈಗ ಎರಡನೇ ಬಾರಿಗೆ ಗಂಡು ಮಗುವಿಗೆ ತಂದೆ - ತಾಯಿಗಳಾಗಿದ್ದಾರೆ.

ಇನ್ನು ಕಳೆದ ತಿಂಗಳು ಅಂದರೆ ಜೂನ್ 2ರಂದು ವಿಜಯ್ ಸೂರ್ಯ ಪತ್ನಿ ಚೈತ್ರಾ ಶ್ರೀನಿವಾಸ್ ಎರಡನೇ ಮಗನಿಗೆ ಜನ್ಮ ನೀಡಿದ್ದು, ಈ ಕುರಿತು ವಿಜಯ್ ಸೂರ್ಯ ಸಂದರ್ಶವೊಂದರಲ್ಲಿ ಮಾತನಾಡಿದ್ದು, ತಾನು ಕಳೆದ ಎರಡು ತಿಂಗಳುಗಳಿಂದ ಸತತವಾಗಿ ಕನ್ನಡದ ನಮ್ಮ ಲಚ್ಚಿ ಹಾಗೂ ತೆಲುಗಿನ ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಧಾರಾವಾಹಿಗಳಲ್ಲಿ ನಿರತನಾಗಿದ್ದೆ ಎಂದಿದ್ದಾರೆ.
ತನ್ನ ಎರಡನೇ ಮಗ ಜನಿಸಿದ ಸಂದರ್ಭದಲ್ಲಿ ತಾನು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ಇದ್ದೆ ಎಂದ ವಿಜಯ್ ಸೂರ್ಯ ಆ ಸಮಯದಲ್ಲಿ ತನ್ನ ಸಹೋದರ ಕರೆ ಮಾಡಿ ಚೈತ್ರಾಗೆ ಸಣ್ಣ ಚೆಕಪ್ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ, ಬಳಿಕ ಹದಿನೈದು ನಿಮಿಷಗಳ ನಂತರ ಮತ್ತೊಂದು ಕರೆ ಬಂತು. ಚೈತ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿಸಿದ್ರು.
ಆ ಸಂದರ್ಭದಲ್ಲಿ ನಾನು ಆಕೆಯ ಜತೆ ಇರಬೇಕಿತ್ತು ಎನಿಸಿತು, ಆದರೆ ಅನಿರೀಕ್ಷಿತವಾಗಿ ನಡೆದದ್ದರಿಂದ ನಾನು ಅಲ್ಲಿ ಇರಲಾಗಲಿಲ್ಲವಲ್ಲ ಎಂಬ ಬೇಸರವಿದೆ ಎಂದು ವಿಜಯ್ ಸೂರ್ಯ ತಿಳಿಸಿದ್ದಾರೆ. ಇನ್ನು ಜೂನ್ 2ರಂದೇ ಜನಿಸಿದ ತಮ್ಮ ಎರಡನೇ ಮಗುವಿನ ಬಗ್ಗೆ ವಿಜಯ್ ಸೂರ್ಯ ತಿಂಗಳ ಬಳಿಕ ಮಾಹಿತಿ ನೀಡಿದ್ದು, ಕೆಲ ಸಮಯ ಕಳೆದ ಬಳಿಕ ಆತನ ಜನನದ ವಿಷಯವನ್ನು ಅಧಿಕೃತವಾಗಿ ಘೋಷಿಸೋಣ ಎಂದು ತೀರ್ಮಾನಿಸಿದ್ದೆವು ಎಂದು ವಿಜಯ್ ಸೂರ್ಯ ತಡವಾಗಿ ವಿಷಯ ತಿಳಿಸಿದ್ದರ ಕುರಿತು ಮಾಹಿತಿ ನೀಡಿದ್ದಾರೆ.


Click it and Unblock the Notifications











