'ನಮ್ಮ ಲಚ್ಚಿ' ಬಳಿಕ ಮಾಸ್ ಲುಕ್‌ನಲ್ಲಿ ಮತ್ತೆ ಕಿರುತೆರೆಗೆ ಕಾಲಿಟ್ಟ ವಿಜಯ್ ಸೂರ್ಯ; ಹೆಸರು ದತ್ತಾ ಭಾಯ್
'ಉತ್ತರಾಯಣ' ಧಾರಾವಾಹಿಯ ಮೂಲಕ ನಟನಾ ಲೋಕದ ನಂಟು ಬೆಳೆಸಿಕೊಂಡಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ವಿಜಯ್ ಸೂರ್ಯ. ಮುಂದೆ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು ಗುಳಿಕೆನ್ನೆಯ ಹುಡುಗ ವಿಜಯ್ ಸೂರ್ಯ. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ಈ ನಟ ಸುಮಾರು ಎಂಟು ವರ್ಷಗಳ ಕಾಲ ಆ ಪಾತ್ರದ ಮೂಲಕ ಮೋಡಿ ಮಾಡಿದರು.
ನಂತರ ಕಿರುತೆರೆಯಿಂದ ದೂರವಿದ್ದ ಈ ನಟ ಮತ್ತೆ ಮರಳಿ ಬಂದದ್ದು 'ಪ್ರೇಮಲೋಕ' ಧಾರಾವಾಹಿಯ ಮೂಲಕ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದರು ವಿಜಯ್ ಸೂರ್ಯ.

ಮುಂದೆ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಸೂರ್ಯ ಅವರು ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಾಯಕ ಸಂಗಮ್ ಆಗಿ ಕಾಣಿಸಿಕೊಂಡಿದ್ದರು. ತೆಲುಗು ಕಿರುತೆರೆಗೆ ಕಾಲಿಟ್ಟಿರುವ ವಿಜಯ್ 'ಕೃಷ್ಣಮ್ಮ ಕಲಿಪಿಂಡಿ ಇದ್ದರಿನಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದರು.
ಇದರ ಜೊತೆಗೆ ಮಗದೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ವಿಜಯ್ ಸೂರ್ಯ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ದೃಷ್ಟಿಬೊಟ್ಟು'ವಿನಲ್ಲಿ ನಾಯಕನಾಗಿ ವಿಜಯ್ ಸೂರ್ಯ ನಟಿಸಲಿದ್ದಾರೆ. ವರಮಹಾಲಕ್ಷ್ಮಿಯ ಶುಭದಿನದಂದು ವಾಹಿನಿಯು ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ.

ವಿಜಯ್ ಸೂರ್ಯ ಅವರ ಖಡಕ್ ಎಂಟ್ರಿ ಇರುವ ಪ್ರೋಮೋವೊಂದನ್ನು ವಾಹಿನಿ ರಿಲೀಸ್ ಮಾಡಿದೆ. ಜೊತೆಗೆ "ಹೆಸರು ದತ್ತಾ ಶ್ರೀರಾಮ ಪಾಟೀಲ್, ಬಳ್ಳಾರಿ ಜನ ಕರೆಯೋದು ದತ್ತಾ ಭಾಯ್ ಅಂತ. ಮಗು ಮನಸ್ಸಿನವನು. ಸ್ವಲ್ಪ ಖಡಕ್, ಕೊಟ್ಟ ಮಾತು ತಪ್ಪಲ್ಲ. ಆದ್ರೆ ಸೌಂದರ್ಯ ಕಂಡ್ರೆ ಆಗಲ್ಲ. ದತ್ತಾ ಭಾಯ್ ಬರ್ತಿದ್ದಾರೆ ಶ್ರೀಘ್ರದಲ್ಲೇ..!" ಎಂದು ವಾಹಿನಿಯವರು ಹಂಚಿಕೊಂಡಿದ್ದಾರೆ. ಜೊತೆಗೆ ವಿಜಯ್ ಸೂರ್ಯ ಅವರು ಆ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದರು.
ಇಷ್ಟು ದಿನಗಳ ಕಾಲ ಲವರ್ ಬಾಯ್ ಆಗಿ ಕಿರುತೆರೆಯ ಮೂಲಕ ಮೋಡಿ ಮಾಡಿದ್ದ ವಿಜಯ್ ಸೂರ್ಯ ಇದೇ ಮೊದಲ ಬಾರಿಗೆ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಹೊಸ ಲುಕ್ ಕಂಡು ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.
ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮಿಂಚಿದ ಹ್ಯಾಂಡ್ ಸಮ್ ಹುಡುಗ ವಿಜಯ್ ಸೂರ್ಯ. 'ಕ್ರೇಜಿಲೋಕ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ವಿಜಯ್ ಸೂರ್ಯ ಆ ಸಿನಿಮಾದಲ್ಲಿ ಅಭಯ್ ಆಗಿ ನಟಿಸಿದ್ದರು. ಜೊತೆಗೆ ಅಭಯ್ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದರು.
ಮುಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಸಿನಿಮಾದಲ್ಲಿ ಡಾ. ಆಕರ್ಷ್ ಆಗಿ ಅಭಿನಯಿಸಿದರು. ನಂತರ 'ಸ', 'ಕದ್ದುಮುಚ್ಚಿ' ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡ ವಿಜಯ್ ಸೂರ್ಯ 'ಗಾಳಿಪಟ-2' ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಜೀವ ತುಂಬಿದ್ದರು. 'ಸ್ವಿಚ್ ಕೇಸ್ ಎನ್' ಹಾಗೂ 'ವೀರಪುತ್ರ' ಸಿನಿಮಾದಲ್ಲಿಯೂ ಇವರು ನಾಯಕನಾಗಿ ಕಮಾಲ್ ಮಾಡುತ್ತಿದ್ದಾರೆ.


Click it and Unblock the Notifications











