ರಾಜಿಯ ಮದುವೆ ನಿಂತು ಹೋಯ್ತು: ವಿಜಯ್ ಸೂರ್ಯ ಪಾತ್ರದ ಕಥೆಯೇನು?
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ರಾಜಿ' ಧಾರಾವಾಹಿಯಲ್ಲಿ ಕಳೆದೊಂದು ವಾರದಿಂದ ಮದುವೆ ಸಂಭ್ರಮ ಮನೆ ಮಾಡಿತ್ತು. ಕುತಂತ್ರಿಗಳ ವಕ್ರ ದೃಷ್ಟಿಗೆ ರಾಜಿಯ ಬದುಕು ದುಸ್ತರವಾಗುವ ಹಂತ ತಲುಪಿತ್ತು. ಅತ್ತ ಪ್ರೇಮ್ ಕೂಡ ದುಷ್ಟರ ಕೂಟದಲ್ಲಿಯೇ ಬಂಧಿಯಾಗಿದ್ದ. ಇತ್ತ ಮನೆಯಲ್ಲಿರುವ ದುಷ್ಟರ ಫ್ಲ್ಯಾನ್‌ನಲ್ಲಿ ರಾಜಿಯೂ ಬಂಧಿಯಾಗಿದ್ದಳು. ಇಬ್ಬರು ಮಾತನಾಡಲು ಆಗದ ಸ್ಥಿತಿಯಲ್ಲಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಧೈರ್ಯ, ಬುದ್ದಿವಂತಿಕೆ ಒಟ್ಟಾಗಿ ರಾಜಿಗೆ ಅನ್ಯಾಯವಾಗುವುದನ್ನು ತಡೆಯಲಾಗಿದೆ.
ಪ್ರೇಮ್ ಸದ್ಯ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ. ರಾಜಿ ಮನೆಯವರ ಒತ್ತಡ, ಪ್ರೀತಿಗೆ ಮಣಿದು ಮದುವೆಯಾಗುವುದಾಗಿ ಒಪ್ಪಿಕೊಂಡು ಬಿಟ್ಟಿದ್ದಳು. ಮೇಲ್ಮೋಟಕ್ಕೆ ನಗುತ್ತಾ ಎಲ್ಲಾ ಮರೆತಿರುವಂತೆ ಸಹಿಸಿಕೊಂಡಿದ್ದಳು. ಆದರೆ ವಿಧಿಯಾಟ ಕೂಡ ರಾಜಿ ಬಯಸಿದ ಜೀವನವನ್ನೇ ಕೊಡುವುದಕ್ಕೆ ಸಿದ್ಧವಿದೆ. ಹೀಗಾಗಿಯೇ ಎಲ್ಲಾ ಅಡೆತಡೆ ದಾಟಿ, ಮದುವೆ ಮುರಿದು ಬಿದ್ದಿದೆ.

ರಾಜಿ ಬಳಿ ಕ್ಷಮೆ ಕೇಳಿದ ಪ್ರೇಮ್ & ವೈಫ್
ಯಾವುದೋ ಗ್ಯಾಂಗ್ ಬಳಿ ತಗಲಾಕಿಕೊಂಡಿದ್ದ ಕಾರಣ ಪ್ರೇಮ್‌ಗೆ ಏನು ಮಾಡಲು ಸಾಧ್ಯವಿರದ ಪರಿಸ್ಥಿತಿಯಲ್ಲಿದ್ದ. ಅದಕ್ಕೆ ಕಾರಣ ತನ್ನ ಹೆಂಡತಿ ಮಗುವಿನ ಮೇಲಿನ ಪ್ರೀತಿ. ಮನೆಯವರ ಬಳಿ ತನಗೆ ಈಗಾಗಲೇ ಮದುವೆಯಾಗಿದೆ ಎಂಬುದನ್ನು ಹೇಳಿಕೊಳ್ಳುವುದಕ್ಕೆ ಆಗದೆ ರಾಜಿಯನ್ನು ಮದುವೆಯಾಗಲು ರೆಡಿಯಾಗಿದ್ದ. ಆದರೆ ಪ್ರೇಮ್ ಧೈರ್ಯದಿಂದಾಗಿ ಹೇಗೋ ಹೆಂಡತಿ, ಮಗು ಪ್ರೇಮ್ ಕೈ ಸೇರಿತ್ತು. ಹೀಗಾಗಿ ರಾಜಿಯ ಬದುಕು ಹಾಳಾಗುವುದು ನಿಂತಿತ್ತು. ಈ ಎಲ್ಲಾ ದುರ್ಘಟನೆಗೆ ಪ್ರೇಮ್ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಆತನ ಹೆಂಡತಿಯೂ ಕ್ಷಮೆ ಕೇಳಿದ್ದಾರೆ. ಧರ್ಮ ಸಂಕಟದಲ್ಲಿದ್ದ ಪ್ರೇಮ್‌ನನ್ನು ಎಲ್ಲರೂ ಕ್ಷಮಿಸಿದ್ದಾರೆ.

ಅರಿಶಿನದಲ್ಲಿ ಬರೆದಿದ್ದಕ್ಕೆ ಬಚಾವ್
ಪ್ರೇಮ್‌ಗೆ ಬರುತ್ತಿದ್ದ ಎಲ್ಲಾ ಕಾಲ್‌ಗಳನ್ನು, ಮೆಸೇಜ್ ಗಳನ್ನು ಆ ಒಂದು ಗ್ಯಾಂಗ್ ಪರಿಶೀಲಿಸುತ್ತಿತ್ತು. ಎಲ್ಲಿಯೇ ಹೋದರು, ಬಂದರೂ ಹಿಂದೊಬ್ಬರು ಇದ್ದೇ ಇರುತ್ತಿದ್ದರು. ಹೀಗಾಗಿ ಪ್ರೇಮ್ ಯಾವೊಂದು ಸತ್ಯವನ್ನು ಹೇಳುವುದಕ್ಕೆ ಸಾಧ್ಯವೇ ಆಗಲಿಲ್ಲ. ಆದರೆ ಬುದ್ಧಿವಂತಿಕೆ ಬಳಸಿ, ಅರಿಶಿನ ಶಾಸ್ತ್ರದಲ್ಲಿ ತಾನಿರುವ ಪರಿಸ್ಥಿತಿಯನ್ನು ಪ್ರೇಮ್ ಅರ್ಥ ಮಾಡಿಸಿದ. ಅರಿಶಿನದಲ್ಲಿ ಯಾರಿಗೂ ಅರ್ಥವಾಗದಂತೆ ಒಂದು ಸೆಂಟೆನ್ಸ್ ಬರೆದ. ಅದನ್ನು ಯಾರಿಗೂ ಗೊತ್ತಾಗದ ರೀತಿ ಓದಲು, ಅರ್ಥ ಮಾಡಿಕೊಳ್ಳಲು ಕರ್ಣನಿಗೆ ಸೂಚಿಸಿದ. ಅದನ್ನು ಗಂಭೀರವಾಗಿ ತೆಗೆದುಕೊಂಡ ಕರ್ಣ ಎಲ್ಲವನ್ನು ತಾಳೆ ಹಾಕಿ, ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಇದು ಒಂದು ದೊಡ್ಡ ಗ್ಯಾಂಗ್ ಎಂಬುದು ತಿಳಿಯಿತು. ಪ್ರೇಮ್ ಏನಾದರೂ ಈ ಗ್ಯಾಂಗ್‌ನಲ್ಲಿ ಸಿಕ್ಕಿಬಿದ್ದಿದ್ದಾನಾ ಎಂಬುದನ್ನು ಹುಡುಕುತ್ತಾ ಹೊರಟಾಗ, ಆತನ ಹೆಂಡತಿ ಮಗುವನ್ನು ವಶದಲ್ಲಿಟ್ಟುಕೊಂಡಿರುವುದು ತಿಳಿಯಿತು.

ಕರ್ಣನಿಂದ ತಪ್ಪಿತು ಬಾರಿ ಅನಾಹುತ
ಪ್ರೇಮ್ ಏನನ್ನು ಮಾಡದ ಪರಿಸ್ಥಿತಿಯಲ್ಲಿದ್ದ. ಆದರೆ ಕರ್ಣ ಇದರ ಮೂಲ ಹುಡುಕಿಕೊಂಡು ಹೊರಟಾಗ ಪ್ರೇಮ್ ಹೆಂಡತಿ-ಮಗು ಇರುವ ಸ್ಥಳ ಸಿಕ್ಕಿತು. ಸಾಹಸವನ್ನೇ ಮಾಡಿ ಹೆಂಡತಿ, ಮಗುವನ್ನು ಕಾಪಾಡಿದ. ಅತ್ತ ಪ್ರೇಮ್‌ಗೆ ಕರೆ ಮಾಡಿ, ಏನಾದರೂ ಆಕ್ಷನ್ ತೆಗೆದುಕೊಳ್ಳುವುದಿದ್ದರೆ ತೆಗೆದುಕೋ, ಇಲ್ಲಿ ನಿನ್ನ ಹೆಂಡತಿ, ಮಗು ನನ್ನ ಜೊತೆ ಸೇಫಾಗಿದ್ದಾರೆ ಎಂದಿದ್ದೆ ತಡ ಅಲ್ಲಿ ಪ್ರೇಮ್ ಆಕ್ಷನ್ ಶುರು ಮಾಡಿಕೊಂಡ. ಕಡೆಗೆ ಬ್ಲಾಕ್ ಮೇಲ್ ಮಾಡಿ, ಮದುವೆ ಮಾಡಿಸಿ ಹಣ, ಒಡವೆ ದೋಚುವ ಗ್ಯಾಂಗ್ ಪೊಲೀಸರ ವಶವಾಯಿತು. ಮದುವೆ ನಿಂತಿತು. ಪ್ರೇಮ್ ಎಲ್ಲರ ಕ್ಷಮೆಯಾಚಿಸಿದ.
ವಿಜಯ್ ಸೂರ್ಯ ಮತ್ತೆ ಕಾಣಿಸಿಕೊಳ್ಳುವುದು ಯಾವಾಗ?
ಧಾರಾವಾಹಿಯಿಂದಲೇ ಸಾಕಷ್ಟು ಪ್ರಚಾರ ಪಡೆದಿದ್ದ, ಒಂದಷ್ಟು ಅಭಿಮಾನಿ ಬಳಗ ಹೊಂದಿದ್ದ ವಿಜಯ್ ಸೂರ್ಯ ಬಳಿಕ ಸಿನಿಮಾದ ಕಡೆ ಹೋಗಿದ್ದರು. ಆಮೇಲೂ ಅಲ್ಲೊಂದು ಇಲ್ಲೊಂದು ಧಾರಾವಾಹಿ ಮಾಡುತ್ತಿದ್ದರು. ಸ್ಟಾರ್ ಸುವರ್ಣದ 'ಪ್ರೇಮಲೋಕ' ಧಾರಾವಾಹಿಯಲ್ಲಿ ಎಲ್ಲರನ್ನೂ ರಂಜಿಸುತ್ತಿರುವಾಗಲೇ ಧಾರಾವಾಹಿ ನಿಂತಿತ್ತು. ಆಮೇಲೆ ಜೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರ ನಿರ್ವಹಿಸಿ, ಅನು-ಆರ್ಯನನ್ನು ಒಂದು ಮಾಡಿ ಹೊರಟು ಹೋಗಿದ್ದರು. ಇದೀಗ 'ರಾಜಿ' ಧಾರಾವಾಹಿಯಲ್ಲೂ ಅತಿಥಿ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಮೊದಲಿಗೆ ಒಂದೇ ತರವೆನಿಸಿದರು ಕಡೆಯಲ್ಲಿ ತುಂಬಾ ವಿಭಿನ್ನ ಎನಿಸಿತು. ಆದರೆ ಈಗ 'ರಾಜಿ'ಯಲ್ಲೂ ಪ್ರೇಮ್ ಪಾತ್ರ ಅಂತ್ಯವಾಗಿದೆ. ವಿಜಯ್ ಸೂರ್ಯ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಮತ್ತೆ ಸಂಪೂರ್ಣ ನಟನಾಗಿ ಬರಲಿ ಎಂದು ಆಶಿಸುತ್ತಿದ್ದಾರೆ. ಆದಷ್ಟು ಬೇಗ ಗುಡ್ ನ್ಯೂಸ್ ಬರಲಿ ಎಂದು ಕೇಳುತ್ತಿದ್ದಾರೆ.


Click it and Unblock the Notifications











