ಹೊಸ ಧಾರಾವಾಹಿ ಮೂಲಕ 'ವಿಕ್ರಾಂತ್ ರೋಣ' ಬೆಡಗಿ ಕಿರುತೆರೆಗೆ ಕಂಬ್ಯಾಕ್
ಜೀ ಕನ್ನಡ ವಾಹಿನಿಯಲ್ಲಿ ಮಧ್ಯಾಹ್ನ ಈಗಾಗಲೇ ಸಾಕಷ್ಟು ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇದರ ಜೊತೆಗೆ ಇನ್ನೆರಡು ಧಾರಾವಾಹಿ ಸೇರಿಕೊಂಡಿವೆ.
'ಮೇಘ ಸಂದೇಶ' ಮತ್ತು 'ಮೊಮ್ಮಗಳು' ಎಂಬ ಎರಡು ತೆಲುಗು ಭಾಷೆಯ ಧಾರಾವಾಹಿಗಳನ್ನು ಡಬ್ಬಿಂಗ್ ಮಾಡಿದ್ದು, ಇದನ್ನು ಮುಂದಿನ ಸೋಮವಾರದಿಂದ ಪ್ರಸಾರ ಆರಂಭಿಸುತ್ತಿದೆ.

ಇನ್ನು ಈಗಾಗಲೇ ಕಲರ್ಸ್ ಕನ್ನಡ ಮತ್ತು ಉದಯ ಟಿವಿ ಪ್ರತ್ಯೇಕ ಎರಡು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲಿದ್ದು, ಈ ಎರಡೂ ವಾಹಿನಿಗಳ ಜೊತೆಗೆ ಈಗ ಜೀ ಕನ್ನಡ ಕೂಡ ಸೇರಿಕೊಂಡಿದೆ.
ಹೊಸ ಧಾರಾವಾಹಿ ಪ್ರೋಮೋ
ಜೀ ಕನ್ನಡ ವಾಹಿನಿ ಹೊಸ ಧಾರಾವಾಹಿಯ ಪ್ರೊಮೋ ಪ್ರಸಾರ ಮಾಡಿದೆ. 'ನಾ ನಿನ್ನ ಬಿಡಲಾರೆ' ಎಂದು ಈ ಧಾರಾವಾಹಿಗೆ ಹೆಸರಿಟ್ಟಿದ್ದು, ಈಗಾಗಲೇ ಈ ಹೆಸರಿನಲ್ಲಿ ಎರಡು ಮೂರು ಸಲ ಧಾರಾವಾಹಿಗಳು ಪ್ರಸಾರವಾಗಿವೆ. ಇನ್ನು ಈ ಧಾರಾವಾಹಿಯ ಪ್ರೊಮೋದಲ್ಲಿ ತಾಯಿ ಮಗುವನ್ನು ತೋರಿಸಿದ್ದು, ತಾಯಿ ಮಗಳಿಗೆ ಲಾಲಿ ಹಾಡನ್ನು ಹಾಡುತ್ತಾಳೆ. ಆದರೆ, ತಾಯಿ ಚಿಕ್ಕವಯಸ್ಸಿನಲ್ಲಿ ಸಾವನ್ನಪ್ಪಿದ್ದು, ಮಗಳ ಜೊತೆಗೆ ಸದಾ ಇರುವಂತೆ ತೋರಲಾಗಿದೆ. ಸದಾ ಮಗಳನ್ನು ಕಾಯುವ ತಾಯಿ ಯಾರಿಗೆ 'ನಾ ನಿನ್ನ ಬಿಡಲಾರೆ' ಎನ್ನುತ್ತಿದ್ದಾಳೆ ಎಂಬುದು ಕುತೂಹಲ ಮೂಡಿದೆ. ಇನ್ನು ಈ ಧಾರಾವಾಹಿ ಯಾವಾಗ ಪ್ರಸಾರವಾಗುತ್ತೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿಲ್ಲ.
'ನಾ ನಿನ್ನ ಬಿಡಲಾರೆ' ಎಂದ ಯಶೋದೆ
ಈ ಧಾರಾವಾಹಿಗಾಗಿ ಜೀ ಕನ್ನಡ ಯಾವ ಧಾರಾವಾಹಿಗೆ ಗೇಟ್ ಪಾಸ್ ಕೊಡುತ್ತೆ ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕೂಡ ಕೊನೆಯ ಹಂತ ತಲುಪಿದ್ದು, ಇದೇ ವೇಳೆಗೆ ವೀಕ್ಷಕರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು ಮುಗಿಸಿ ಬಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇನ್ನು ಈ ಧಾರಾವಾಹಿ ಮೂಲಕ ನಟಿ ನೀತಾ ಅಶೋಕ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ನಟಿ ನೀತಾ ಅಶೋಕ್ ಅವರು 'ನಾ ನಿನ್ನ ಬಿಡಲಾರೆ' ಎಂಬ ಟೈಟಲ್‌ನ ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಮತ್ತದೇ ಟೈಟಲ್ ಜೊತೆಗೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಕಿರುತೆರೆಗೆ ನೀತಾ ಕಮ್ ಬ್ಯಾಕ್
'ಯಶೋದೆ' ಧಾರಾವಾಹಿ ಮೂಲಕ ನಟಿ ನೀತಾ ಅಶೋಕ್ ಅವರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ನೀಲಾಂಬರಿ', 'ನಾ ನಿನ್ನ ಬಿಡಲಾರೆ', 'ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. ಹಿಂದಿಯ ದೂರದರ್ಶನದಲ್ಲೂ ಪ್ರಸಾರವಾದ ಧಾರಾವಾಹಿಗಳಲ್ಲಿ ನೀತಾ ಅವರು ಅಭಿನಯಿಸಿದ್ದಾರೆ. ಮುಬೈನಲ್ಲಿ ಮಾಡೆಲಿಂಗ್‌ನಲ್ಲಿದ್ದ ನೀತಾ ಅವರು 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿ ಎಲ್ಲರ ಮನ ಗೆದ್ದಿದ್ದರು. ಬಳಿಕ ಸದ್ದಿಲ್ಲದೇ ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಬದುಕಿಗೂ ಕಾಲಿಟ್ಟರು. ಇದೀಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿರುವುದು ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಧಾರಾವಾಹಿ ರಿಮೇಕ್ ಎಂದ ವೀಕ್ಷಕರು
ಮಡಿದ ಮೇಲೂ ಮಿಡಿಯುವ ಅಮ್ಮನ ಪ್ರೀತಿ! ನಾ ನಿನ್ನ ಬಿಡಲಾರೆ ಅತೀಶೀಘ್ರದಲ್ಲಿ ಎಂದು ಜೀ ವಾಹಿನಿ ಪ್ರೊಮೋ ಪ್ರಸಾರ ಮಾಡಿದ್ದು, ಅಭಿಮಾನಿಗಳು ನೀತಾ ಅವರನ್ನು ನೋಡಿ ಖುಷಿಯೇನೋ ಪಟ್ಟಿದ್ದಾರೆ. ಆದರೆ, ಈ ಧಾರಾವಾಹಿಯೂ ಕೂಡ ರಿಮೇಕ್ ಎನ್ನುತ್ತಿದ್ದಾರೆ. 'ನಿಂಡು ನೂರೆಲ್ಲಾ ಸಾವಾಸಂ' ಎಂಬ ತೆಲುಗು ಧಾರಾವಾಹಿಯ ರಿಮೇಕ್ ಎಂದಿದ್ದಾರೆ. ಅಲ್ಲದೇ, ಕಲರ್ಸ್ ವಾಹಿನಿಯಲ್ಲಿ 'ನೂರು ಜನ್ಮಕೂ' ಎಂಬ ಧಾರಾವಾಹಿಯ ಪ್ರೊಮೋ ಬಿಟ್ಟ ಬೆನ್ನಲ್ಲೇ ಈಗ ಜೀ ವಾಹಿನಿಯಲ್ಲೂ ಜನ್ಮಾಂತರ ಕಥೆಯ ಪ್ರೊಮೋ ಪ್ರಸಾರ ಮಾಡಿರುವುದಕ್ಕೆ ಜನರು ಯಾವುದನ್ನು ನೋಡುವುದು ಎಂಬ ಗೊಂದಲದಲ್ಲಿದ್ದಾರೆ.


Click it and Unblock the Notifications











