ಕಿರುತೆರೆಯಲ್ಲಿ ಈ ವಿಲನ್ ಪಾತ್ರಗಳಲ್ಲಿ ನಿಮ್ಮ ಫೇವರಿಟ್ ಯಾವುದು?
ಧಾರಾವಾಹಿ ಪ್ರಪಂಚ ನಿನ್ನೆ ಮೊನ್ನೆಯದಲ್ಲ. ಹಲವಾರು ದಶಕಗಳಿಂದ ಧಾರಾವಾಹಿಗಳು ಕಿರುತೆರೆ ಜನರ ಮನೆ ಮನೆಯಲ್ಲಿಯೂ ರಿಂಗಣಿಸುತ್ತಾ, ಜನಮನ ರಂಜಿಸುತ್ತಾ ಬಂದಿದೆ. ಸಾಮಾನ್ಯವಾಗಿ ತಿಳಿ ಸಂಜೆಯ ನಂತರ ಆರಂಭವಾಗುವ ಆ ಧಾರಾವಾಹಿಗಳು ದಿನವಿಡೀ ದಣಿದು ಬಂದ ಮನಕ್ಕೆ ಒಂದಷ್ಟು ಮುದ ನೀಡುವ ಪ್ರಯತ್ನದಲ್ಲಿರುತ್ತದೆ. ಟಿವಿ ಮುಂದೆ ಕುಳಿತವರು ಅಪ್ಪಟ ಮನರಂಜನೆಯನ್ನಷ್ಟೇ ಬಯಸುತ್ತಿರುತ್ತಾರೆ.
ಹೀಗಿರುವಾಗ ಮನೆ ಮನೆಗಳಲ್ಲಿ ನಡೆಯುವ ಕಥೆಯನ್ನು ವಿಭಿನ್ನವಾಗಿ ಹೇಳುವ ಧಾರಾವಾಹಿಗಳು, ವೀಕ್ಷಕರಿಗೆ ಒಂದು ರೀತಿಯ ಸಮಾಧಾನವನ್ನು ಕೊಡುತ್ತದೆ. ಅಂದ ಹಾಗೇ ಇತ್ತೀಚಿನ ದಿನಗಳಲ್ಲಿ ನಾಯಕ, ನಾಯಕಿಯ ಪಾತ್ರಕ್ಕೆ ಅದೆಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಖಳನಾಯಕ/ನಾಯಕಿಯರ ಪಾತ್ರಗಳಿಗೆ ಇರುತ್ತದೆ.

ಹೌದು, ಒಂದು ಕಥೆಯಲ್ಲಿ ನಾಯಕ ಹಾಗೂ ನಾಯಕಿ ಎಷ್ಟು ಮುಖ್ಯವೊ ಹಾಗೆಯೇ ಒಬ್ಬ ಖಳನಾಯಕ ಕೂಡ ಮುಖ್ಯವಾಗುತ್ತಾನೆ. ಅಸಲಿಗೆ ಎಷ್ಟೋ ಬಾರಿ ಒಂದು ಪಾತ್ರ ನಾಯಕನಾಗಿ ಮೂಡಲಿಕ್ಕೆ ಒಬ್ಬ ಖಳನಾಯಕ ಬೇಕೇ ಬೇಕು. ಕಥೆಯ ಮುಂದುವರಿಕೆಗೂ ಖಳನಾಯಕ ಅಥವಾ ಖಳನಾಯಕಿಯ ಪಾತ್ರ ಬಹುಮುಖ್ಯ.
ಜೀವನ ಎಂದು ಸುಗಮವಾದ ದಾರಿಯಲ್ಲ. ಹಲವಾರು ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ ಮತ್ತು ಅದನ್ನು ದಾಟಿಕೊಂಡು ಮುಂದೆ ಹೋದಾಗಲೇ ನಮ್ಮ ಆಸೆ ಕನಸು ಗುರಿ ತಲುಪಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದನ್ನೇ ಧಾರಾವಾಹಿ ಕಥೆ ಒಬ್ಬ ಖಳನಾಯಕನ ಪಾತ್ರದ ಮೂಲಕ ಹಲವಾರು ಅಡೆ ತಡೆಗಳನ್ನು ತಂದು ಅದನ್ನ ಎದುರಿಸುವ ಪಾತ್ರಗಳನ್ನು ನಾಯಕ ನಾಯಕಿಯಾಗಿ ತೋರಿಸುತ್ತದೆ.
ಇನ್ನು ಪ್ರತಿಯೊಬ್ಬರಿಗೂ ಅವರದ್ದೇ ಆದ ಕಥೆಗಳಿರುತ್ತವೆ. ಪ್ರತಿ ಘಟನೆಯನ್ನೂ ನೂರಾರು ದೃಷ್ಟಿಕೋನಗಳಲ್ಲಿ ನೋಡಬಹುದು. ಹೀಗೆಯೇ ಪ್ರತಿ ಪಾತ್ರಕ್ಕೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಕನ್ನಡ ಕಿರುತೆರೆ ಇಂದು ಹಲವಾರು ಪ್ರಸಿದ್ಧ ಖಳನಾಯಕ ಪಾತ್ರಗಳು ಜನರ ಮನದಾಳದಲ್ಲಿ ಅಚ್ಚಾಗಿದೆ.
ಉದಾಹರಣೆಗೆ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಜಯಂತ್ ಪಾತ್ರ ಇತ್ತ ಕೆಟ್ಟದ್ದು ಅಲ್ಲದ ಅತ್ತ ತೀರಾ ಒಳ್ಳೆಯದೂ ಅಲ್ಲದ ಪಾತ್ರವಾದರೂ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಕೀರ್ತಿ ಪಾತ್ರವು ಗ್ರೇ ಶೇಡ್ ನೊಂದಿಗೆ ಪ್ರೇಕ್ಷಕರ ಅಚ್ಚುಮೆಚ್ಚಾಗಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ಸದಾ ತಮಾಷೆ ಮಾಡಿಕೊಂಡಿರುವ ಖಳನಾಯಕ ಜೈದೇವ್ ಪಾತ್ರವಾಗಿರಲಿ, ಶಕುಂತಲಾ ಪಾತ್ರವಾಗಿರಲಿ ಜನರಿಗೆ ಹಿಡಿಸಿದೆ.
ಹೀಗೆ ಒಂದು ಖಳನಾಯಕ ಪಾತ್ರವನ್ನು ಜನರು ಎಷ್ಟೇ ದ್ವೇಷಿಸಿದರೂ ಆ ಪಾತ್ರವೇ ತರತರದ ಹುನ್ನಾರ ಹೂಡುತ್ತ ಕಥೆಯನ್ನು ಮುನ್ನಡೆಸುವ ಸಾರಥಿ ಎಂದರೆ ತಪ್ಪಾಗಲ್ಲ.


Click it and Unblock the Notifications











