ಪಾಡ್‌ಕಾಸ್ಟ್‌ನಲ್ಲೇ ಪತ್ನಿಗೆ ವಿಚ್ಛೇದನ ಘೋಷಿಸಿದ ಕೋಟ್ಯಾಧಿಪತಿ ಯೂಟ್ಯೂಬರ್ ;ಒಂದೂವರೆ ವರ್ಷಕ್ಕೆ ದಾಂಪತ್ಯ ಅಂತ್ಯ
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಬಡ-ಮಧ್ಯಮ ವರ್ಗದ ಕುಟುಂಬಗಳ ಸಾವಿರಾರು ಹೆಣ್ಣು ಮಕ್ಕಳ ಮದುವೆಯ ಸನ್ನಿವೇಶ ನರಕಗೊಳಿಸುವುದಲ್ಲದೆ, ಮದುವೆಯ ನಂತರವೂ ಅವರ ಬದುಕಿನಲ್ಲಿ ಕತ್ತಲು ಕವಿಯುವಂತೆ ಮಾಡುತ್ತವೆ. ಒಮ್ಮೊಮ್ಮೆ ಅದ್ಧೂರಿ ಮದುವೆಯಾದವರ ಬದುಕು ಕೂಡ ಕತ್ತಲಿಂದ ಕೂಡಿರುತ್ತೆ.
ಯಾಕೆಂದರೆ ಇವರ ಅಬ್ಬರ ಮತ್ತು ಆಡಂಬರದ ಮದುವೆ ಕೇವಲ ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂವ್ಸ್‌ಗೆ ಮಾತ್ರ ಸೀಮಿತವಾಗಿರುತ್ತಷ್ಟೇ. ಬದಲಾದ ಈ ಕಾಲದಲ್ಲಿ ಜೀವನಪರ್ಯಂತದ ಭರವಸೆ ನಂಬಿಕೆಯಾಗಿ ಮದುವೆ ಉಳಿದಿಲ್ಲ. ಬದಲಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಬಹುದಾದ ಇವೆಂಟ್ ಆಗಿದೆ. ಸಾಯುವವರೆಗೆ ಜೊತೆಗಿರೋಣ ಎಂಬ ಮಾತು ಈಗ ವ್ಯೂವ್ಸ್ ಬರುವವರೆಗೆ ಮಾತ್ರ ಜೊತೆಗಿರೋಣ ಎಂಬಂತಾಗಿದೆ. ಉದಾಹರಣೆಗೆ ರಜಬ್ ಭಟ್ ಅವರ ವೈಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ.

ಹೌದು, ರಜಬ್ ಭಟ್.. ಪಾಕಿಸ್ತಾನದ ಪ್ರಖ್ಯಾತ ಯೂಟ್ಯೂಬರ್. ಝೀರೋದಿಂದ ಕೋಟ್ಯಾಧಿಪತಿಯಾದವರು ಇವರು. ತಮ್ಮ ವಿಭಿನ್ನ ಶೈಲಿಯ ವ್ಲಾಗ್‌ಗಳ ಮೂಲಕವೇ ಪಾಕಿಸ್ತಾನದೆಲ್ಲೆಡೆ ಜನಜನಿತವಾದ ರಜಬ್ ಅವರ ಆಸ್ತಿ ಭಾರತದ ರೂಪಾಯಿಯ ಲೆಕ್ಕಾಚಾರದ ಪ್ರಕಾರ 8 ಕೋಟಿಗೂ ಅಧಿಕ ಇದೆ.
ಇದಲ್ಲದೇ ಲಾಹೋರ್ ನಲ್ಲಿ ಭವ್ಯವಾದ ಬಂಗಲೆ ಹೊಂದಿರುವ ರಜಬ್ ಅವರ ಬಳಿ ಫಾರ್ಚುನರ್, ಆಡಿ, ನಂತಹ ದುಬಾರಿ ಕಾರುಗಳ ಸಂಗ್ರಹವಿದೆ. ಇವರ ಯೂಟ್ಯೂಬ್ ಚಾನೆಲ್‌ನ 4.2 ಮಿಲಿಯನ್‌ಗಿಂತ ಹೆಚ್ಚಿನ ಜನ ಫಾಲೋ ಮಾಡ್ತಿದ್ದಾರೆ.
ಇಂಥಾ ರಜಬ್ ಭಟ್ 2024ರ ಡಿಸೆಂಬರ್ ನಲ್ಲಿ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಇಮಾನ್ ಫಾತಿಮಾ ಅವರ ಜೊತೆ ಮದುವೆಯಾಗಿದ್ದರು. ತುಂಬಾನೇ ಅದ್ಧೂರಿಯಾಗಿ ನಡೆದಿದ್ದ ಮದುವೆ ಇದು. ಮದುವೆಯ ಹಲವು ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹಲವರು ಇವರು ಇಬ್ಬರದ್ದೂ ಹೇಳಿ ಮಾಡಿಸಿದ ಜೋಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವರ ಪ್ರೇಮದ ಸಂಕೇತವಾಗಿ ಇಬ್ಬರಿಗೆ ಕಿವಾನ್ ಸುಲ್ತಾನ್ ಎಂಬ ಮಗ ಕೂಡ ಇದ್ದಾನೆ.
ಆದರೆ ಈಗ ಈ ಸಂಬಂಧದಲ್ಲಿ ಬಿರುಕು ಮೂಡಿದೆ. ರಜಬ್ ತಮ್ಮ ಈ ಮದುವೆಯಿಂದ ಎಷ್ಟು ಬೇಸತ್ತಿದ್ದಾರೆ ಅಂದರೆ ಪಾಡ್‌ಕಾಸ್ಟ್‌ನಲ್ಲಿ ಸಂದರ್ಶನ ನೀಡುವ ಸಮಯದಲ್ಲಿಯೇ ತಮ್ಮ ಪತ್ನಿ ಇಮಾನ್‌ಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಇಷ್ಟೇ ಅಲ್ಲ ಇಮಾನ್‌ಗೆ ನೋಟಿಸ್ ಕೂಡ ಕಳಿಸಿದ್ದಾರೆ. ಹಲವು ಆರೋಪಗಳನ್ನು ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ರಜಬ್ ಈ ಮದುವೆಯಲ್ಲಿ ನನಗೆ ಯಾವುದೇ ಗೌರವ ಇರಲಿಲ್ಲ. ನನ್ನ ಹೆಂಡತಿ ನನ್ನ ತಾಯಿಯನ್ನು ಅವಮಾನಿಸಿದಳು. ಅವಳ ಕುಟುಂಬದ ಸದಸ್ಯರು ನನ್ನ ತಂದೆಯ ಸ್ಥಿತಿಯ ಬಗ್ಗೆ ಪ್ರಶ್ನಿಸಿದರು. ನನ್ನ ಹೆತ್ತವರನ್ನು ಇನ್ನಷ್ಟು ಅವಮಾನಿಸುವುದನ್ನು ನಾನು ಸಹಿಸಲಾರೆ. ಹಾಗಾಗಿ, ಈ ಸಂಬಂಧಕ್ಕೆ ನಾನು ಮತ್ತೊಂದು ಅವಕಾಶ ನೀಡಲಾರೆ ಎಂದು ಹೇಳಿದ್ದಾರೆ. ಮದುವೆಯಾಗಿ ಒಂದೂವರೆ ವರ್ಷ ಆಗಿದೆ ಅನ್ನೋದು ನಿಜಾ ಆದರೆ ನಾವು ಇಬ್ಬರು ಸಂಸಾರ ಮಾಡಿದ್ದು ಕೇವಲ ಒಂದೂವರೆ ತಿಂಗಳು ಮಾತ್ರ ಎಂದಿದ್ದಾರೆ.
ಇನ್ನೂ ಮೊದಲು ಪ್ರೇಮದ ಅಮಲೇರಿದಾಗ ರಜಬ್ ಕೇವಲ ಇಮಾನ್ ಜೊತೆ ಮಾತ್ರವಲ್ಲ ಇಮಾನ್ ಅವರ ತಾಯಿ ಜೊತೆ ಕೂಡ ವ್ಲಾಗ್ ಮಾಡುತ್ತಿದ್ದರು. ಆದರೆ ಈಗ ತಮ್ಮ ಅತ್ತೆಯ ಮೇಲೂ ಕೂಡ ಆರೋಪ ಮಾಡಿರುವ ರಜಬ್ ತಮ್ಮ ಅತ್ತೆ ಒಬ್ಬಳು "ಪರ್ಫ್ಯೂಮ್ ಕಳ್ಳಿ'' ಎಂದಿದ್ದಾರೆ.

ಪತಿಯ ಈ ಆರೋಪಗಳಿಗೆ ಇಮಾನ್ ಫಾತಿಮಾ ಕೂಡ ಉತ್ತರ ನೀಡಿದ್ದು ಈ ಸಂಬಂಧವನ್ನು ಉಳಿಸಲು ನಾನು ಇಲ್ಲಿಯವರೆಗೆ ಮೌನವಾಗಿದ್ದೆ ಎಂದು ಹೇಳಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದಿದ್ದಾರೆ. ನಾನು ಗರ್ಭಿಣಿಯಾಗಿದ್ದಾಗ ರಜಬ್ ತನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ, ನನ್ನನ್ನೂ ಒಬ್ಬಂಟಿಯಾಗಿ ಬಿಟ್ಟಿದ್ದರು ಎಂದು ಹೇಳಿರುವ ಇಮಾನ್ ಫಾತಿಮಾ, ಅವರ ಕಷ್ಟದ ದಿನಗಳಲ್ಲಿ ನನ್ನ ಬೆಂಬಲ ಬೇಕಿತ್ತು ಆದರೆ ಈಗ ಹಣ ಮತ್ತು ಹೆಸರು ಬಂದ ಮೇಲೆ ನನ್ನನ್ನೂ ಅವರು ಕಾಲ ಕಸದಂತೆ ನೋಡುತ್ತಿದ್ದಾರೆ ಎಂದು ಕಣ್ಣೀರಾಗಿದ್ದಾರೆ. ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಸದ್ಯ ವಿಚ್ಚೇದನ ಅಂತಹ ಸೂಕ್ಷ್ಮ ವಿಚಾರದ ಕುರಿತು ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಗಿ ಮಾತನಾಡಿದ್ದಕ್ಕೆ ಹಲವರು ಈಗ ರಜಬ್ ಭಟ್ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನದ ನೋವನ್ನು ಕೂಡ ಇಂದಿನ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಮಾರಾಟದ ಸರಕು ಮಾಡಿಕೊಂಡಿದ್ದು ದುರಂತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











