Brindavana: "ಕಥೆಗೆ ಚಿಕ್ಕ ಹುಡ್ಗ ಬೇಕಂದ್ರು ನಿರ್ದೇಶಕರು.. ಈಗ ಬದಲಾವಣೆಗೆ ಕಾರಣ ಗೊತ್ತಿಲ್ಲ": ವಿಶ್ವನಾಥ್ ತಂದೆ ರವೀಂದ್ರ
ಕಲರ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ವೀಕ್ಷಕರ ಗಮನ ಸೆಳೆಯುತ್ತಿರುವ ಧಾರಾವಾಹಿ 'ಬೃಂದಾವನ'. ತುಂಬು ಕುಟುಂಬದ ಈ ಕತೆ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಕೆ.ಎಸ್ ರಾಮ್ ಜೀ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಇತ್ತೀಚೆಗೆ ಧಾರಾವಾಹಿಯ ನಾಯಕ ನಟ ಬದಲಾಗಿದ್ದು ಭಾರೀ ಸುದ್ದಿಯಾಗಿದೆ.
ಸರಿಗಮಪ ಖ್ಯಾತಿಯ ವಿಶ್ವನಾಥ್ ಹಾವೇರಿ 'ಬೃಂದಾವನ' ಧಾರಾವಾಹಿ ನಾಯಕ ಆಕಾಶ್ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ದಿಢೀರನೆ ಆ ಜಾಗಕ್ಕೆ ವರುಣ್ ಆರಾಧ್ಯ ಆಗಮನವಾಗಿದೆ. ಕೇವಲ 25 ಸಂಚಿಕೆಗಳಿಗೆ ನಾಯಕ ನಟನ ಬದಲಾವಣೆ ಆಗಿರುವುದು ಅಚ್ಚರಿ ಮೂಡಿಸಿದೆ. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಒಂದು ಪಾತ್ರ ಮಾಡುತ್ತಿದ್ದರೆ ಹೊರ ಬರುವುದು, ಬಳಿಕ ಆ ಪಾತ್ರವನ್ನು ಮತ್ತೊಬ್ಬರು ನಿಭಾಯಿಸುವುದು ಹೊಸದೇನು ಅಲ್ಲ. ಆದರೆ ವಿಶ್ವನಾಥ್ ಧಾರಾವಾಹಿಯಿಂದ ಹೊರ ಬಂದಿರುವುದು ಯಾಕೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ.

ಧಾರಾವಾಹಿಯ ನಾಯಕ ಆಕಾಶ್ ಬಹಳ ಚಿಕ್ಕ ಹುಡುಗನಂತೆ ಇದ್ದಾರೆ. ನಾಯಕಿಗಿಂತಲೂ ಚಿಕ್ಕವನಂತೆ ಕಾಣಿಸುತ್ತಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದರು. ಇದೇ ಕಾರಣಕ್ಕೆ ವಿಶ್ವನಾಥ್ ಬದಲು ಆಕಾಶ್ ಪಾತ್ರಕ್ಕೆ ವರುಣ್ ಆರಾಧ್ಯ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ವಿಶ್ವನಾಥ್ ಹಾವೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ವಿಶ್ವನಾಥ್ ತಂದೆ ರವೀಂದ್ರ ಹಾವೇರಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. "ವಿಶ್ವನಾಥ್ ಸದ್ಯ ಇಂಡಿಯನ್ ಐಡೆಲ್‌ಗೋಸ್ಕರ ಮುಂಬೈನಲ್ಲಿ ಇದ್ದಾನೆ. ನಾವು ಸಹ ಆತನನ್ನು ಡಿಸ್ಟರ್ಬ್ ಮಾಡ್ತಿಲ್ಲ. ಅವನ ಮೊದಲ ಆದ್ಯತೆ ಸಂಗೀತ. ಸ್ವಂತವಾಗಿ ವಿಡಿಯೋ ಆಲ್ಬಮ್ ಮಾಡುತ್ತಿದ್ದಾನೆ. ಇದರ ನಡುವೆ ಧಾರಾವಾಹಿ ಬಂತು. ನಮಗೂ ಆತನನ್ನು ಕೈಬಿಟ್ಟಿದ್ದು ಯಾಕೆ ಎಂದು ಕಾರಣ ಗೊತ್ತಿಲ್ಲ"
"ವಿಶ್ವನಾಥ್‌ಗೆ ನಟನೆ ಹೊಸದು. ಇದೆಲ್ಲಾ ನಮಗೆ ಗೊತ್ತಿಲ್ಲ. ಅವ್ರು ಕರೆದ್ರು ನಾವು ಹೋದ್ವಿ. ಅವನ್ನದ್ದೇ ಲೈವ್‌ಬ್ಯಾಂಡ್ ಇದೆ. ಅದರ ಕೆಲಸಗಳು ನಡೀತಿತ್ತು. ನಮಗೆ ಈ ಬಗ್ಗೆ ಯಾವುದೇ ವಿಷಾದ ಇಲ್ಲ. ಮತ್ತೊಂದು ಅವಕಾಶಕ್ಕೆ ಕಾಯೋಣ. ಏನು ಮಾಡೋಕೆ ಆಗೊಲ್ಲ. ಇದ್ದಕ್ಕಿದಂತೆ ಬದಲಿಸಿದರು. ನಾವು ಕೇಳಲಿಲ್ಲ. ಕಾರಣ ಕೂಡ ಗೊತ್ತಿಲ್ಲ"

"ಎಲ್ಲಾ ಅವರದ್ದೇ. ನಮ್ಮದೇನು ಇರಲ್ಲ. ಹೋಗಬೇಕು, ನಟಿಸಬೇಕು ಅಷ್ಟೆ. ನೋಡಲು ಚಿಕ್ಕವನಂತೆ ಕಾಣುತ್ತಾನೆ ಎನ್ನುವ ಕಾಮೆಂಟ್ ಅನ್ನು ಫೇಸ್‌ಬುಕ್‌ನಲ್ಲಿ ನಾವು ನೋಡಿದ್ದೇವೆ. ರಾಮ್‌ಜೀಯವರು ನ್ಯೂಸ್‌ಫಸ್ಟ್ ಸಂದರ್ಶನದಲ್ಲಿ ಹೇಳಿರುವಂತೆ ನಮಗೆ ಚಿಕ್ಕ ವಯಸ್ಸಿನ ಹುಡುಗ ಬೇಕಾಗಿತ್ತು. ಹಾಗಾಗಿ ಅವನನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದಿದ್ದರು. ಕತೆಯ ಪ್ರಕಾರ 21 ವರ್ಷದ ಹುಡುಗ ಬೇಕಾಗಿತ್ತು. ಅದಕ್ಕೆ ನಮ್ಮ ಹುಡುಗನ ಆಯ್ಕೆ ಮಾಡ್ಕೊಂಡಿದ್ರಂತೆ. ಈಗ ಬೇರೆ ಕಾರಣ ಕೊಟ್ಟರೆ ಏನು ಮಾಡುವುದು" ಎಂದಿದ್ದಾರೆ.
ಒಟ್ನಲ್ಲಿ 'ಬೃಂದಾವನ' ಧಾರಾವಾಹಿಯ ಆಕಾಶ್ ಪಾತ್ರದಿಂದ ವಿಶ್ವನಾಥ್ ಹಾವೇರಿ ಹೊರ ಬಂದಿರುವುದು ಸಾಕಷ್ಟು ಜನರಿಗೆ ಬೇಸರ ತರಿಸಿದೆ. ಸದ್ಯ ಧಾರಾವಾಹಿಯಲ್ಲಿ ಪುಷ್ಪ ಕಲ್ಯಾಣ ಸಂಭ್ರಮ ನಡೀತಿದೆ. ಆಕಾಶ್ ಪಾತ್ರವನ್ನು ವರುಣ್ ಆರಾಧ್ಯ ಹೇಗೆ ನಿಭಾಯಿಸುತ್ತಾರೆ? ವೀಕ್ಷಕರ ಮನ ಗೆಲ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











