ಸದ್ದಿಲ್ಲದೇ ಮದುವೆಯಾದ 'ಯಾರೇ ನೀ ಮೋಹಿನಿ' ನಟಿ ಭಾರತಿ ಹೆಗಡೆ ; ಇಲ್ಲಿವೆ ಮದುವೆಯ ಸುಂದರ ಕ್ಷಣಗಳು
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ.
ಇಂತಹ ಬಂಧನಕ್ಕೆ ಈ ವರ್ಷ ನಂದ ಗೋಕುಲದ ರಕ್ಷಾ.. ಗತ ವೈಭವದ ಹೀರೋ ದುಷ್ಯಂತ್ .. ಕನ್ನಡ ಕಿರುತೆರೆಯ ಜೋಡಿ ಹಕ್ಕಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್.. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.. ಅಲ್ಲು ಶಿರೀಶ್ ಮತ್ತು ನಯನಿಕಾ ರೆಡ್ಡಿ.. ನಿಮಿಕಾ ರತ್ನಾಕರ್.. ಮೆಹ್ರೀನ್ ಪಿರ್ಜಾದಾ.. ಹೀಗೆ ಹಲವರು ಈ ವರ್ಷ ಒಳಗಾಗಿದ್ದಾರೆ. ಈ ಸಾಲಿಗೆ ಈಗ ಭಾರತಿ ಹೆಗಡೆ ಕೂಡ ಸೇರಿಕೊಂಡಿದ್ದಾರೆ.

ಹೌದು, ಭಾರತಿ ಹೆಗಡೆ.. ಶಿರಸಿಯ ಸಿದ್ದಾಪುರದ ಚೆಲುವೆ. ಸಿದ್ದಾಪುರದಲ್ಲಿಯೇ ಪ್ರಾಥಮಿಕ ಶಿಕ್ಷಣ ಮತ್ತು ಪಿಯುಸಿ ಓದಿದ ಭಾರತಿ ಹೆಗಡೆ ಆ ನಂತರ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಅಮಣ್ಣಿ ಮತ್ತು ಕ್ರೈಸ್ಟ್ ಕಾಲೇಜಿನಲ್ಲಿ ಎಂ ಎಸ್ ಡಬ್ಲ್ಯೂ ಮಾಡಿದರು. ಕಾರ್ಮಿಕ ಇಲಾಖೆಯಲ್ಲಿ ಕೂಡ ಕೆಲ ಕಾಲ ಕೆಲಸ ಮಾಡಿದರು.
ಇನ್ನು ಭರತನಾಟ್ಯದಲ್ಲಿ ವಿದ್ವತ್ ಪಡೆದ ಭಾರತಿ ಸಂಗೀತದಲ್ಲೂ ಕಡಿಮೆ ಇಲ್ಲ ಎನ್ನುವಂತೆ ಹಿಂದೂಸ್ತಾನಿ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಪಾಸಾಗಿದ್ದಾರೆ. ಇದರ ಜೊತೆಗೆ ''ಸಮಾಜ''ಎಂಬ ಕಿರು ಚಿತ್ರದಲ್ಲಿ ನಟಿಸಿರುವ ಭಾರತಿಗೆ ಬೆಸ್ಟ್ ಆಕ್ಟರ್ ಅವಾರ್ಡ್ ಕೂಡ ಬಂದಿದೆ.

ಹೀಗೆ ಬಣ್ಣದ ಸೆಳೆತಕ್ಕೆ ಬಿದ್ದ ಭಾರತಿ ಹೆಗಡೆ ಸಿನಿಮಾ ಮತ್ತು ಧಾರಾವಾಹಿಗಳ ಆಡಿಶನ್‌ಗೆ ಹೋಗಲು ಪ್ರಾರಂಭಿಸಿದರು. ''ಶಾಂತಂಪಾಪಂ'' ಧಾರಾವಾಹಿಗೆ ಆಯ್ಕೆ ಆದರು. ಆ ನಂತರ ನಟಿ ಹಾಗೂ ನಿರ್ದೇಶಕಿ ಶ್ರುತಿ ನಾಯ್ಡು ಅವರ ಕಣ್ಣಿಗೆ ಕೂಡ ಬಿದ್ದ ಭಾರತಿ ಹೆಗಡೆ ''ಯಾರೆ ನೀ ಮೋಹಿನಿ'' ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯ ಗೆದ್ದರು. ಚಿತ್ರಾ ಪಾತ್ರದಲ್ಲಿ ಮೋಡಿ ಮಾಡಿದರು. ಉದಯ ವಾಹಿನಿಯಲ್ಲಿ ''ನಯನಾತಾರ'' ಧಾರಾವಾಹಿಯಲ್ಲಿ ಅಮ್ಮ ಭಾಗವತಿ ಪಾತ್ರದಲ್ಲಿ ಮಿಂಚಿದರು.
ಇಂಥಾ ಭಾರತಿ ಹೆಗಡೆ ಸದ್ಯ ಸದ್ದಿಲ್ಲದೇ ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.

ಭಾರತಿ ಹೆಗಡೆ ಅವರ ಕೈ ಹಿಡಿದ ಹುಡುಗ ಯಾರು..? ಹಿನ್ನೆಲೆ ಏನು..? ಇಬ್ಬರದ್ದು ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಎಂಬ ಪ್ರಶ್ನೆಗೆ ಭಾರತಿ ಹೆಗಡೆ ಎಲ್ಲಿಯೂ ಉತ್ತರವನ್ನು ನೀಡಿಲ್ಲವಾದರೂ ಸದ್ಯ ಇವರ ಮದುವೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸದ್ಯ ಹಲವರು ಭಾರತಿ ಹೆಗಡೆ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಅಂದ್ಹಾಗೇ ''ಯಾರೇ ನೀ ಮೋಹಿನಿ'' ಧಾರಾವಾಹಿಯ ಯಶಸ್ಸಿನ ನಂತರ ಭಾರತಿ ಹೆಗಡೆ ಅವರನ್ನು ಹಲವು ಅವಕಾಶಗಳು ಅರಸಿಕೊಂಡು ಹೋಗಿದ್ದವು. ಆದರೆ ಒಂದೇ ಪಾತ್ರಕ್ಕೆ ಬ್ರಾಂಡ್ ಆಗಲು ಭಾರತಿ ಅವರಿಗೆ ಮನಸ್ಸು ಇರಲಿಲ್ಲ. ಬಂದಿರುವಂತಹ ಹೆಚ್ಚಿನ ಅವಕಾಶಗಳು ಹಾರರ್ ಕಥೆಗಳಾಗಿರುವುದರಿಂದ ಹಿಂದೇಟು ಹಾಕಿದ್ದರು. ತಾನು ಒಂದೇ ರೀತಿಯ ನಟನೆಗೆ ಬ್ರಾಂಡ್ ಆಗಬಾರದು ಎಂಬುದು ನಟಿ ಭಾರತಿ ಹೆಗಡೆ ಅವರ ಅಭಿಪ್ರಾಯವಾಗಿತ್ತು.
ಇನ್ನುಳಿದಂತೆ ಮದುವೆಯಾದ ನಂತರ ಹಲವು ನಟಿಯರು ಬಣ್ಣದ ಬದುಕಿಗೆ ವಿದಾಯ ಹೇಳುತ್ತಾರೆ. ಮನೆ-ಗಂಡ ಎಂದು ತಲ್ಲೀನರಾಗುತ್ತಾರೆ. ಈ ಹಿನ್ನೆಲೆ ಭಾರತಿ ಹೆಗಡೆ ನಟನೆಯಲ್ಲಿ ಮುಂದುವರೆಯುತ್ತಾರಾ..? ಅಥವಾ ಕಿರುತೆರೆಗೆ ಗುಡ್ ಬೈ ಹೇಳ್ತಾರಾ..? ಎನ್ನುವ ಕುತೂಹಲ ಸದ್ಯ ಇವರ ಅಭಿಮಾನಿಗಳಲ್ಲಿದೆ.


Click it and Unblock the Notifications