Weekend with Ramesh: ಚಿನ್ನಿ ಪ್ರಕಾಶ್ ತನ್ನ ಮಕ್ಕಳ ಮುಖ ನೋಡಿದ್ದೇ 30 ವರ್ಷ ಆದ್ಮೇಲೆ.. ಅಂಥದ್ದೇನಾಗಿತ್ತು?
ಚಿನ್ನಿ ಪ್ರಕಾಶ್ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಜನಪ್ರಿಯರ ಕೊರಿಯೋಗ್ರಾಫರ್. ಆದರೆ, ಈ ಸ್ಥಾನಕ್ಕೆ ಬರುವುದಕ್ಕೆ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಅವಕಾಶಕ್ಕಾಗಿ ಚಿನ್ನಿ ಪ್ರಕಾಶ್ ಅವರು ಕೂಡ ನಿರ್ದೇಶಕರ ಮನೆ ಬಾಗಿಲನ್ನು ಅಲೆದಿದ್ದಾರೆ. ಒಂದೇ ಒಂದು ಅವಕಾಶಕ್ಕಾಗಿ ನಿದ್ದೆಗೆಟ್ಟು ನಿಂತಿದ್ದಾರೆ. ಆ ಎಲ್ಲಾ ಪರಿಶ್ರಮ ಇಂದು ಅವರನ್ನು ಸಾಧಕರ ಸೀಟಿನಲ್ಲಿ ಕೂರುವಂತೆ ಮಾಡಿದೆ.
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ಖ್ಯಾತ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರನ್ನು ಕರೆಸಲಾಗಿದೆ. ಅವರ ಜರ್ನಿ, ಸೋಲು, ಗೆಲುವು ಎಲ್ಲವನ್ನು ಈ ಕಾರ್ಯಕ್ರಮದ ಮೂಲಕ ಜನರಿಗೆ ತಲುಪಿದೆ. ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಬಿಗ್ ಸ್ಟಾರ್‌ಗಳಿಗೆ ಕೊರಿಯೋಗ್ರಾಫಿ ಮಾಡಿದ ಚಿನ್ನಿ ಮಾಸ್ಟರ್ ಜೀವನ ಚರಿತ್ರೆ ಇಲ್ಲಿದೆ.

ಗಂಡ - ಹೆಂಡತಿ ಇಬ್ಬರು ಕೊರಿಯೋಗ್ರಾಫರ್
ಚಿನ್ನಿ ಮಾಸ್ಟರ್ ಹಾಗೂ ರೇಖಾ ಪ್ರಕಾಶ್ ಎಂದರೆ ಆಗ ಎಲ್ಲಾ ಸಿನಿಮಾದಲ್ಲೂ ಅವರ ಕೊರಿಯೋಗ್ರಾಫಿ ಇರಲೇಬೇಕಿತ್ತು. ಅಷ್ಟು ಫೇಮಸ್ ಆಗಿದ್ದ ಜೋಡಿ ಅದು. ಆದರೆ, ಕೆಲಸ ಅಂತ ಮಾಡುವುದಕ್ಕೆ ಶುರು ಮಾಡಿದ ದಂಪತಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದ್ರು. ಇಂಥದ್ದೇ ಸಿನಿಮಾ ಬೇಕು ಅಂತ ಇಲ್ಲ. ಚಿಕ್ಕವರ ಸಿನಿಮಾ, ದೊಡ್ಡವರ ಸಿನಿಮಾ ಅನ್ನೋ ಮ್ಯಾಟರ್ ಆಗ್ತಾ ಇರಲಿಲ್ಲ. ಸ್ಯಾಂಡಲ್‌ವುಡ್‌ನಿಂದ ಶುರುವಾದ ಜರ್ನಿ ಬಾಲಿವುಡ್, ಮಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ರಂಗಕ್ಕೂ ಪಸರಿಸಿತ್ತು.
ಮದುವೆಯಾಗಿದ್ದೆ ಒಂದು ಅದ್ಭುತ
ಚಿನ್ನಿ ಪ್ರಕಾಶ್ ಮಾಸ್ಟರ್ ಗೆ ರೇಖಾ ಸಿಕ್ಕಿದ್ದೇ ಅದೃಷ್ಟ. ಅವರ ಕಷ್ಟ ಸುಖದಲ್ಲೂ ಜೊತೆಯಾಗಿ ನಿಂತವರು ರೇಖಾ. ಇಬ್ಬರು ಪ್ರೀತಿ ಮಾಡ್ತಾ ಇದ್ರು. ಚಿನ್ನಿ ಪ್ರಕಾಶ್ ಅವರಿಗೆ ಸಂಸಾರದ ಜವಾಬ್ದಾರಿ ಹೆಚ್ಚು. ಅದನ್ನೆಲ್ಲಾ ನಿಭಾಯಿಸುವುದಕ್ಕೆ ಸಮಯ ನೀಡಿದ್ದರಂತೆ ರೇಖಾ. ಆದರೆ ಒಂದು ಸಿನಿಮಾ ಶೂಟಿಂಗ್ ಸ್ಟಾಪ್ ಆಗಿತ್ತು. ಆಗ ರೇಖಾ ಅವರ ಅಮ್ಮ ನೀವಿಬ್ಬರು ಮದುವೆ ಆಗಿ ಬಿಡಿ ಅಂತ ಮದುವೆ ಮಾಡಿಸಿದ್ದರಂತೆ. ಮದುವೆಯೂ ಸಿಂಪಲ್ ಇನ್ನೂ ಹನಿಮೂನ್ ಅಂತು ಇನ್ನು ಸಿಂಪಲ್. ಬೆಂಗಳೂರಿಗೆ ಒಂದು ದಿನ ಕರೆದುಕೊಂಡು ಬಂದಿದ್ದರಂತೆ.

ಮಕ್ಕಳಿಗೂ ಅದೇ ಬುದ್ದಿ
ಹೀಗೆ ಕೆಲಸದಲ್ಲಿಯೇ ಬ್ಯುಸಿ ಇದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಚಿನ್ನಿ ಮಾಸ್ಟರ್ ಮಕ್ಕಳನ್ನು ಗಮನವಿಟ್ಟು ನೋಡಿದಾಗ ಅವರಿಗೆ ಅದಾಗಲೇ 30 ವರ್ಷವಾಗಿತ್ತಂತೆ. ಅಂದ್ರೆ ಮನೆಯಲ್ಲಿಯೇ ಇದ್ದರೂ, ಮಕ್ಕಳ ಜೊತೆಗೆ ಇದ್ದರೂ, ಕೆಲಸದ ನಡುವೆ ಮಕ್ಕಳು ಹೇಗೆ ಬೆಳೆದರು ಎಂಬುದು ಗೊತ್ತಾಗಿಲ್ಲ ಎನ್ನುತ್ತಾರೆ. ಇನ್ನು ಮಕ್ಕಳು ಕೂಡ ಅಪ್ಪನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಮೊದಲ ಮಗ ಬೈಟ್ ಕೊಟ್ಟಿದ್ದು, "ಇವತ್ತು ಈ ಶೋನಲ್ಲಿ ಕೂತಿರೋದನ್ನು ನೋಡೋದಕ್ಕೆ ಖುಷಿಯಾಗುತ್ತೆ. ನಾವೂ ಸಾಕಷ್ಟು ಬೆಳೆದದ್ದು ಅಕ್ಕ, ಅತ್ತೆ ಮನೆಯಲ್ಲಿಯೇ. ನಾವಿಬ್ರು ಚೆನ್ನಾಗಿ ಓದ್ತಾ ಇರ್ಲಿಲ್ಲ. ಆದರೆ, ನಾವಿಬ್ರು ನಿಮ್ಮ ಹೆಸರನ್ನು ಉಳಿಸ್ತೀವಿ" ಎಂದಿದ್ದಾರೆ. ಎರಡನೇ ಮಗ ಸಿದ್ಧಾರ್ಥ್ "ನಾವೂ ಚಿಕ್ಕವರಿದ್ದಾಗ ಕೊರಿಯೋಗ್ರಾಫರ್ ಅಂದ್ರೆ ಅರ್ಥ ಗೊತ್ತಿರಲಿಲ್ಲ. ಆಗ ನಮ್ಮ ಟೀಚರ್‌ಗಳು ನಮಗೆ ಅರ್ಥ ಮಾಡಿಸಿದ್ರು. ಅಲ್ಲಿಂದ ನಾವೂ ಅರ್ಥ ಮಾಡಿಕೊಂಡ್ವಿ, ಕಾಯಕವೇ ಕೈಲಾಸ ಅಂತ. ಅದನ್ನೇ ಪಾಲಿಸ್ತಾ ಇದ್ದೀವಿ" ಎಂದಿದ್ದಾರೆ
ಮಕ್ಕಳನ್ನು ನೆನೆದು ಚಿನ್ನಿ ಮಾಸ್ಟರ್ ಕಣ್ಣೀರು
ಸಮಯ ಯಾವಾಗಲೂ ಒಂದೇ ರೀತಿ ಇರಲ್ಲ ಅನ್ನೋದಕ್ಕೆ ಆಗಾಗ ಉದಾಹರಣೆಗಳು ಕಾಣಿಸುತ್ತಾ ಇರುತ್ತವೆ. ಚಿನ್ನಿ ಮಾಸ್ಟರ್ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. "ಆಗ ನಮಗೆ ಸಮಯ ಇರಲಿಲ್ಲ. ಆದರೆ, ಈಗ ಮಕ್ಕಳು ಬ್ಯುಸಿಯಾಗಿ ಬಿಟ್ಟಿದ್ದಾರೆ" ಎಂದಿದ್ದಾರೆ.


Click it and Unblock the Notifications











