Weekend With Ramesh: ಅಂದು ಟಿಸಿ ಕೊಟ್ಟು ಓಡಿಸಿದ್ದವರ ಜೊತೆಗೆಯೇ ಸ್ಕೂಲ್ ಆರಂಭಿಸಿದ ಡಿಕೆಶಿ
'ನಾನು ಏಳನೇ ಕ್ಲಾಸಿನಲ್ಲಿ ಇರುವಾಗಲೇ ಸೋತಿಲ್ಲ, ಈಗಲೂ ಸೋತಿಲ್ಲ, ಮುಂದೆನೂ ಸೋಲಲ್ಲ' ಇದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎಂದಿನ ಆತ್ಮಸ್ಥೈರ್ಯದ ಮಾತು. ಆದರೆ ಇದು ರಾಜಕೀಯ ವೇದಿಕೆಯಾಗಿರಲಿಲ್ಲ, ಬದಲಿಗೆ ಸಣ್ಣ ಪರದೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆಶಿ ಆಡಿದ ಮನದಾಳದ ಮಾತು.
ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಂಡಿದ್ದ ನಾಯಕತ್ವ ಗುಣ ಕೆಲವೊಮ್ಮೆ ಯಾವ ರೀತಿ ಶೈಕ್ಷಣಿಕವಾಗಿ ಶಾಲಾಕಾಲೇಜುಗಳಲ್ಲಿ ತೊಂದರೆ ಎದುರಿಸಬೇಕಾಯಿತು ಎನ್ನುವುದರ ಬಗ್ಗೆ ಡಿ.ಕೆ.ಶಿವಕುಮಾರ್, ಈ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದರು. ಅದರಲ್ಲಿ, ಶಾಲೆಯ ಮಂಡಳಿಯವರು ಟಿಸಿ (Transfer Certificate) ಕೊಟ್ಟು ಕಳುಹಿಸಿದ್ದನ್ನೂ ಡಿಕೆಶಿ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.

ಬಾಲ್ಯ, ಪ್ರೌಢಾವ್ಯವಸ್ಥೆಯಲ್ಲಿ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿರುವ ಅವರ ತಾಯಿಯ ಸಹೋದರಿಯ ಮನೆಗೆ ಕಳುಹಿಸಲಾಗಿತ್ತು. ಡಿಕೆಶಿ ತಾಯಿಯ ಬಾವ ಮಿಲಿಟರಿಯಲ್ಲಿ ಇದ್ದವರು. ಅಲ್ಲಿ ಕಳೆದ ಜೀವನವನ್ನೂ ಕಾರ್ಯಕ್ರಮದಲ್ಲಿ ಮೆಲುಕು ಹಾಕಿಕೊಂಡರು.
ದೇವರಿಗೆ ಹರಕೆ ಹೊತ್ತ ನಂತರ ಡಿಕೆಶಿ ಹುಟ್ಟಿದರು ಎನ್ನುವ ಮಾತನ್ನು ಹೇಳಿದ ಅವರ ತಾಯಿ, ನನ್ನ ಮಕ್ಕಳಿಗೆ ಚಕ್ಕುಲಿ, ಕೋಡುಬಳೆ ಮುಂತಾದವು ಇಷ್ಟ. ದೊಡ್ಡ ಡಬ್ಬದಲ್ಲಿ ಅದನ್ನು ಮಾಡಿ ಇಡುತ್ತಿದ್ದೆ. ಮಕ್ಕಳಿಗೆ ಎಂದೂ ನಾನು ಕೈಎತ್ತಿಲ್ಲ. ಇಂದು ನನ್ನ ಮಗ ಈ ಮಟ್ಟಕ್ಕೆ ಬೆಳೀತಾನೆ ಅಂದರೆ ಅದು ಅವನಲ್ಲಿರುವ ಛಲ ಕಾರಣ ಎಂದು ಡಿಕೆಶಿ ತಾಯಿ, ಮಗನ ಬಗ್ಗೆ ಹೆಮ್ಮೆಯ ಮಾತನ್ನಾಡಿದರು.
ಕನಕಪುರದಲ್ಲಿ ಹುಟ್ಟಿದ ಡಿ.ಕೆ.ಶಿವಕುಮಾರ್ ಓದಿದ್ದು ಮೂರು ಶಾಲೆಗಳಲ್ಲಿ. ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಾರ್ಮೆಲ್ ಸ್ಕೂಲ್ ಮತ್ತು ವಿದ್ಯಾವರ್ಧಕ ಶಾಲೆಯಲ್ಲಿ. ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಪ್ರೊಫೆಸರ್ ಆಗಿದ್ದ ಡಾ.ಗೋಪಾಲಕೃಷ್ಣ ಅವರು ಡಿಕೆಶಿಗೆ ಟಿಸಿ ಕೊಟ್ಟು ಕಳುಹಿಸಿದ್ದರಂತೆ. ಕೆಲವು ದಿನಗಳ ಹಿಂದೆ ಡಿಕೆಶಿ ಉಪಮುಖ್ಯಮಂತ್ರಿ ಆದ ನಂತರ ಅವರಿಂದ ಆಶೀರ್ವಾದವನ್ನು ಪಡೆದಿದ್ದರು ಎನ್ನುವ ಮಾತನ್ನು ರಮೇಶ್ ಅರವಿಂದ್ ಈ ಸಂದರ್ಭದಲ್ಲಿ ಹೇಳಿದರು.

ಶಾಲೆಗಳಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳಲ್ಲಿ ಡಿ.ಕೆ.ಶಿವಕುಮಾರ್ ಎಲ್ಲದರಲ್ಲೂ ಮೊದಲಿಗರಾಗಿರುತ್ತಿದ್ದರು. ನನ್ನನ್ನು ಚುನಾವಣೆಗೆ ನಿಲ್ಲದಂತೆ ಬ್ಲಾಕ್ ಮಾಡಲಾಗಿತ್ತು. ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಅಲ್ಲಿನ ಸ್ಟ್ಯಾಂಡರ್ಡ್‌ಗೆ ತಕ್ಕಂತೆ ನಾನು ಇಲ್ಲ ಎಂದು ನನಗೆ ಟಿಸಿ ಕೊಟ್ಟು ಕಳುಹಿಸಲಾಗಿತ್ತು. ಡಾ. ಗೋಪಾಲಕೃಷ್ಣ ಅವರ ಮೇಲೆ ಬಹಳ ದ್ವೇಷ ಬೆಳೆದಿತ್ತು. ಮೊನ್ನೆ ಮೊನ್ನೆ ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ ಎಂದು ಡಿಕೆಶಿ ಹೇಳಿದರು.
ಒಂದು ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದೆ, ನನಗೆ ಎದುರಾಳಿಯಾಗಿ ಆರತಿ ಪಾಠಕ್ ಎನ್ನುವವರು ನಿಂತಿದ್ದರು. ಅವರನ್ನು ಸೋಲಿಸಿ ನಾನು ಗೆದ್ದಿದ್ದೆ. ಆದರೆ, ನನ್ನ ಹೆಸರನ್ನು ಅನೌನ್ಸ್ ಮಾಡದೇ ಆರತಿ ಹೆಸರನ್ನು ಘೋಷಣೆ ಮಾಡಲಾಯಿತು. ನನಗೋಸ್ಕರ ಸ್ಪೋರ್ಟ್ಸ್ ಸೆಕ್ರೆಟರಿ ಎನ್ನುವ ಹುದ್ದೆಯನ್ನು ಸೃಷ್ಟಿಸಲಾಯಿತು ಎಂದು ಡಿಕೆಶಿ, ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.
ಡಿಕೆಶಿಗೆ ಟಿಸಿ ಕೊಟ್ಟು ಕಳುಹಿಸಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರ ಪರಮಾಪ್ತ ಸಿಹಿಕಹಿ ಚಂದ್ರು, "ಅಂದು ಸ್ಕೂಲಿನಿಂದ ಓಡಿಸಿದವರ ಜೊತೆಗೆ (ಡಾ. ಗೋಪಾಲಕೃಷ್ಣ) ಸೇರಿಕೊಂಡು ಇಂದು ಇವನು (ಡಿ.ಕೆ.ಶಿವಕುಮಾರ್) ಸ್ಕೂಲ್ ನಡೆಸುತ್ತಾನೆಂದರೆ ಇದಕ್ಕಿಂತ ದೊಡ್ಡ ಸಾಧನೆ ಬೇಕೇ. ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾನೆ"ಎಂದು ಚಂದ್ರು ಹೇಳಿದರು.


Click it and Unblock the Notifications











