ವೀಕೆಂಡ್ ವಿತ್ ರಮೇಶ್- 5 ಶೀಘ್ರದಲ್ಲೇ ಆರಂಭ: ಯಾರಿರಬಹುದು ಮೊದಲ ಗೆಸ್ಟ್..?
ವೀಕೆಂಡ್ ವಿತ್ ರಮೇಶ್. ಈ ಕಾರ್ಯಕ್ರಮ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರು ಈ ಕಾರ್ಯಕ್ರಮವನ್ನು ನೋಡಲು ಟಿವಿ ಎದುರು ಹಾಜರ್ ಆಗಿ ಬಿಡುತ್ತಿದ್ದರು.
ಇದೀಗ ಮತ್ತೆ ಈ ಕಾರ್ಯಕ್ರಮ ಶುರುವಾಗುವ ಸಮಯ ಬಂದಿದೆ. ಪ್ರೇಕ್ಷಕರನ್ನು ರಂಜಿಸುವ ಜೊತೆಗೆ, ಸಾಧಕರ ಕಥೆ ಹೇಳುತ್ತಾ ಇನ್ನಷ್ಟು ಧೈರ್ಯ ತುಂಬಲು ಈ ಕಾರ್ಯಕ್ರಮ ಬೆಸ್ಟ್ ಪ್ರೋಗ್ರಾಂ ಆಗಿದೆ.
ಕಳೆದ ಎರಡು ತಿಂಗಳ ಹಿಂದೆಯೇ ಇದರ ಪ್ರೋಮೋ ರಿಲೀಸ್ ಮಾಡಿದ್ದ ಜೀ ಕನ್ನಡ ವಾಹಿನಿ. ಇದೀಗ ಮತ್ತೆ ರೀ ಪೋಸ್ಟ್ ಮಾಡಿದೆ. ಎಲ್ಲೆಡೆ ಈ ಕಾರ್ಯಕ್ರಮ ಇದೇ ತಿಂಗಳು ಪ್ರಾರಂಭವಾಗುತ್ತಿದೆ ಎನ್ನಲಾಗಿದೆ.

ದೊಡ್ಡ ಯಶಸ್ಸು ಪಡೆದಿದ್ದ ಶೋ
ಜೀ ಕನ್ನಡ ವಾಹಿನಿ ಅಂತ ಹೇಳಿದ ತಕ್ಷಣ ಸಾಕಷ್ಟು ಜನರಿಗೆ ನೆನಪಾಗುವ ಕಾರ್ಯಕ್ರಮಗಳು ಹಲವು. ಅದರಲ್ಲಿ ಮೊದಲಿಗೆ ನಿಲ್ಲುವುದು 'ವೀಕೆಂಡ್ ವಿತ್ ರಮೇಶ್'. ನಾಲ್ಕು ಸೀಸನ್ ಗಳನ್ನು ಮುಗಿಸಿರುವ ಈ ಕಾರ್ಯಕ್ರಮ ಕಿರುತೆರೆಯಲ್ಲಿ ಹೊಸ ಸಂಚಲನ ಉಂಟು ಮಾಡಿತ್ತು. 'ವೀಕೆಂಡ್ ವಿತ್ ರಮೇಶ್' ಕಿರುತೆರೆಯಲ್ಲಿ ಒಂದು ದೊಡ್ಡ ಯಶಸ್ವಿ ಕಾರ್ಯಕ್ರಮ. ಜನರಿಗೆ ಈ ಕಾರ್ಯಕ್ರಮ ಬಹಳ ಹತ್ತಿರವಾಗಿದೆ. ಇಂತಹ ದೊಡ್ಡ ಯಶಸ್ಸು ಪಡೆದ ಈ ಕಾರ್ಯಕ್ರಮದ ಹಿಂದೆ ಸಾಕಷ್ಟು ಕಾರಣಗಳಿವೆ. ಈ ಕಾರ್ಯಕ್ರಮ ಒಂದು ಮಾಮೂಲಿ ಸಂದರ್ಶನವಾಗಿರಲಿಲ್ಲ. ರೆಗ್ಯೂಲರ್ ರಿಯಾಲಿಟಿ ಶೋ ಕೂಡ ಅಲ್ಲ. ಅದು ಒಂದು ವಿಭಿನ್ನ ಕಾರ್ಯಕ್ರಮ. ಆ ವಿಭಿನ್ನತೆಯೇ ಕಾರ್ಯಕ್ರಮದ ಗೆಲುವಿಗೆ ಮೊದಲ ಕಾರಣ.

ಸಾಧಕರ ಕಥೆ ಕೇಳಲು ಕಾತುರ
ಈ ಕಾರ್ಯಕ್ರಮದ ದೊಡ್ಡ ಹೈಲೈಟ್ ಎಂದರೆ ಅದು ನಟ ರಮೇಶ್ ಅರವಿಂದ್. ರಮೇಶ್ ಅವರು ನೂರು ಸಿನಿಮಾಗಳನ್ನು ಮಾಡಿದ್ದರೂ ಕೂಡ ಸರಳವಾಗಿ ಎಲ್ಲರ ಜೊತೆಗೆ ಬೆರೆತು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರೀತಿ ಎಲ್ಲರಿಗೂ ಬಹಳ ಇಷ್ಟವಾಗುತ್ತಿತ್ತು. ಪ್ರತಿ ವಾರ ಕಾರ್ಯಕ್ರಮ ನೋಡಲೇಬೇಕು ಅಂತ ಅನಿಸುವ ಹಾಗೆ ಮಾಡುತ್ತಿದ್ದದ್ದು ಕಾರ್ಯಕ್ರಮದ ಪ್ರೋಮೋಗಳು. ಒಂದೊಂದು ಪ್ರೋಮೋ ಸಹ ಸಖತ್ ಕುತೂಹಲ ಹುಟ್ಟಿಸುತ್ತಿದ್ದವು. ಪ್ರತಿ ವಾರ ಬರುವ ಸಾಧಕರನ್ನು ನೋಡುವುದಕ್ಕೆ ಜನ ಕಾಯುತ್ತಿದ್ದರು. ಅದು ಸಿನಿಮಾ ಸ್ಟಾರ್ ಆಗಲಿ ಅಥವಾ ಯಾವುದೇ ಕ್ಷೇತ್ರದ ಸಾಧಕರೇ ಆಗಲಿ ಜನ ಅವರ ಕಥೆ ಕೇಳುವುದಕ್ಕೆ ಆಸೆ ಪಡುತ್ತಿದ್ದರು.

ಕೆಲವೇ ದಿನದಲ್ಲಿ ಕಾರ್ಯಕ್ರಮ ಆರಂಭ
ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಶೂಟಿಂಗ್ ನಡೆಯುತ್ತಿದೆ. ಪ್ರೋಮೋ ಕೂಡ ರಿಲೀಸ್ ಆಗಿದೆ. ಆದರೆ, ಕಾರ್ಯಕ್ರಮ ಯಾವಾಗ ಪ್ರಸಾರವನ್ನು ಆರಭಿಸುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. 'ವೀಕೆಂಡ್ ವಿತ್ ರಮೇಶ್ ಸೀಸನ್'- 5 ಕಾರ್ಯಕ್ರಮವನ್ನು ಕೆಲ ದಿನಗಳಲ್ಲೇ ಆರಂಭಿಸಲಿದೆ ವಾಹಿನಿ. ಕೆಲವರ ಪ್ರಕಾರ ಮುಂದಿನ ವಾರದಿಂದ ಶುರುವಾಗಲಿದೆ.

ಕುತೂಹಲ ತಾಳಲಾರದ ಪ್ರೇಕ್ಷಕರು
ಮೊದಲ ಎಪಿಸೋಡ್‌ನಲ್ಲಿ ರೆಡ್ ಸೀಟ್ ಮೇಲೆ ಕೂರುವ ವ್ಯಕ್ತಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಸೀಸನ್- 5 ರಲ್ಲಿ ಮೊದಲ ಗೆಸ್ಟ್ ರಿಷಬ್ ಶೆಟ್ಟಿ ಎಂದು ಈ ಹಿಂದೆ ಗೆಸ್ ಮಾಡಲಾಗಿತ್ತು. ಎರಡನೇ ಎಪಿಸೋಡ್‌ಗೆ ಡಾಲಿ ಧನಂಜಯ್, ನಂತರ ನಟಿ ರಮ್ಯಾ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ರಚಿತಾ ರಾಮ್, ರಾಹುಲ್ ದ್ರಾವಿಡ್ ಹೀಗೆ ಇವರೆಲ್ಲರೂ ಈ ಸೀಸನ್ ನಲ್ಲಿ ಬರಲಿದ್ದಾರೆ ಎಂದು ಗೆಸ್ ಮಾಡಲಾಗಿತ್ತು. ಆದರೆ ಇದೀಗ ಮೊದಲ ಎಪಿಸೋಡ್‌ಗೆ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಜೀ ಕನ್ನಡ ವಾಹಿನಿ ಇದರ ಪ್ರೋಮೋ ರಿಲೀಸ್ ಮಾಡುವವರೆಗೆ ಅಭಿಮಾನಿಗಳು ಕಾಯಲೇಬೇಕಿದೆ.


Click it and Unblock the Notifications











