Weekend With Ramesh: ಕನ್ನಡದ ಈ ನಟ ನನ್ನನ್ನು ಸ್ವಂತ ಮಗನ ಥರ ನೋಡಿಕೊಂಡ್ರು ಎಂದ ಧನಂಜಯ್

ಸದ್ಯ ನಡೆಯುತ್ತಿರುವ ಐದನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಅತಿಥಿಯಾಗಿ ನಟ ರಾಕ್ಷಸ ಡಾಲಿ ಧನಂಜಯ್ ಆಗಮಿಸಿದ್ದಾರೆ. ರಮ್ಯಾ ಮೊದಲ ಅತಿಥಿಯಾಗಿ ಆಗಿಮಿಸಿದಾಗ ಅತಿಯಾದ ಇಂಗ್ಲಿಷ್ ಬಳಸಿದ್ದ ಕಾರಣಕ್ಕಾಗಿ ಟ್ರೋಲ್ ಆಗಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಬಳಿಕ ಪ್ರಭುದೇವ, ಡಾ ಸಿ ಎನ್ ಮಂಜುನಾಥ್ ಹಾಗೂ ದತ್ತಣ್ಣ ಅವರನ್ನು ಸಾಧಕರ ಖುರ್ಚಿಯ ಮೇಲೆ ಕೂರಿಸುವುದರ ಮೂಲಕ ಮೆಚ್ಚುಗೆ ಗಿಟ್ಟಿಸಿಕೊಂಡಿತು.
ಇನ್ನು ಇದೀಗ ಡಾಲಿ ಧನಂಜಯ್ ಈ ವಾರದ ಅತಿಥಿ ಎಂದು ಪ್ರೋಮೊ ವಿಡಿಯೊಗಳನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದ್ದು ಈ ಟೀಸರ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇನ್ನು ಮಿಡಲ್ ಕ್ಲಾಸ್ ಕುಟುಂಬದಿಂದ ಬೆಳೆದು ನಾಟಕಗಳಲ್ಲಿ ಬಣ್ಣ ಹಚ್ಚಿ ಇಂದು ಸ್ಟಾರ್ ಆಗಿರುವ ಧನಂಜಯ್ ಜರ್ನಿ ಖಚಿತವಾಗಿ ಏಳುಬೀಳುಗಳಿಂದ ಕೂಡಿರಲಿದ್ದು, ಜನರನ್ನು ಆಕರ್ಷಿಸುವುದು ಪಕ್ಕಾ. ಮಿಡಲ್ ಕ್ಲಾಸ್ ಜನರ ಕಣ್ಣಲ್ಲಿ ನೀರು ತರಿಸುವಂತಹ ಎಪಿಸೋಡ್ ಇದಾಗಲಿದ್ದು, ಸದ್ಯ ಬಿಡುಗಡೆಗೊಂಡಿರುವ ಟೀಸರ್‌ಗಳೂ ಸಹ ಅದೇ ಕೆಲಸವನ್ನು ಮಾಡುತ್ತಿವೆ.
ಇನ್ನು ಇಂದು ( ಏಪ್ರಿಲ್ 13 ) ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್‌ನ ಹೊಸ ಎಪಿಸೋಡ್‌ನ ಪ್ರೋಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆಗೊಳಿಸಿದ್ದು, ಈ ಪ್ರೋಮೊದಲ್ಲಿ ಧನಂಜಯ್ ಕನ್ನಡ ಚಿತ್ರರಂಗದ ದೊಡ್ಮನೆಯ ನಟರ ಜತೆ ತಮ್ಮ ಸಂಬಂಧ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.
ಇಪ್ಪತ್ತು ಸೆಕೆಂಡುಗಳ ಈ ಪ್ರೋಮೊದಲ್ಲಿ ಮೊದಲಿಗೆ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಮಾತನಾಡಿದ್ದು, ಹಾಯ್ ಧನು.. ನಾನು ನಿನ್ನೊಟ್ಟಿಗೆ ಕೆಲಸ ಮಾಡುವಾಗೆಲ್ಲಾ ಒಂದು ಜೋಶ್ ಇದೆ, ನನ್ನ ಲವ್ ಹಾಗೂ ವಿಶಸ್ ಯಾವಾಗಲೂ ನಿಮ್ಮ ಜತೆ ಇರುತ್ತೆ ಎಂದು ಹೇಳಿಕೊಂಡಿದ್ದಾರೆ. ಬಳಿಕ ಶಿವ ರಾಜ್‌ಕುಮಾರ್ ಕುರಿತು ಮಾತನಾಡಿದ ಡಾಲಿ ಧನಂಜಯ್ ಶಿವಣ್ಣ ಅಂತ ಬಂದರೆ ನಾನು ಎಮೋಷನಲ್ಲಿ ತುಂಬಾ ಕನೆಕ್ಟ್ ಆಗಿದ್ದೇನೆ, ಸ್ವಂತ ಮಗನ ಥರ ನನ್ನ ನೋಡಿಕೊಂಡ್ರು ಎಂದು ಹೇಳಿಕೊಂಡರು.
ಮುಂದುವರಿದು ಮಾತನಾಡಿದ ಧನಂಜಯ್ ಒಂದೇ ಖುಷಿ ಏನಂದ್ರೆ, ಅಪ್ಪು ಸರ್ ಜತೆ ಪರದೆ ಹಂಚಿಕೊಂಡಿದ್ದು, ನೆನಪುಗಳಷ್ಟೇ ನಮ್ಮ ಜೀವನದಲ್ಲಿ ದೊಡ್ಡ ಕಲೆಕ್ಷನ್ ಎನ್ನಬಹುದು, ಶಿವ ರಾಜ್‌ಕುಮಾರ್ ಹಾಗೂ ಅಪ್ಪು ಸರ್ ಏನೇನು ಕೊಡಬೇಕೋ ಎಲ್ಲದನ್ನೂ ತುಂಬಾ ಪ್ರೀತಿಯಿಂದ ಕೊಟ್ರು ಎಂದು ಹೇಳಿದ್ದಾರೆ. ಸದ್ಯ ಈ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಮತ್ತೊಂದು ಪ್ರೋಮೊವನ್ನು ಇದಕ್ಕೂ ಮೊದಲೇ ಬಿಡುಗಡೆ ಮಾಡಲಾಗಿದ್ದು, ಈ ಪ್ರೋಮೊದಲ್ಲಿ ಧನಂಜಯ್ ತಮಗೆ ಅಕ್ಷರ ಕಲಿಸಿ ಅಗಲಿದ ಶಾಲಾ ಶಿಕ್ಷಕಿಯನ್ನು ನೆನೆದಿದ್ದಾರೆ.
ಅನುಲಕ್ಷ್ಮಿ ಎಂಬ ಶಿಕ್ಷಕಿ ಇತ್ತೀಚೆಗಷ್ಟೇ ನಿಧನರಾಗಿದ್ದು, ಸಾಯುವ ಮುನ್ನ ಧನಂಜಯ್ ಬಗ್ಗೆ ವೀಕೆಂಡ್ ವಿತ್ ರಮೇಶ್ ತಂಡಕ್ಕೆ ಕಿರು ಸಂದರ್ಶನ ನೀಡಿದ್ದಾರೆ. ಈ ವಿಡಿಯೊ ತುಣುಕಿನಲ್ಲಿ ಧನಂಜಯ್ ಬಗ್ಗೆ ಅವರು ಮಾತನಾಡಿದ್ದು, ನೀನು ತುಂಬಾ ಕಾರ್ಯನಿರತನಾಗಿದ್ದ ಕಾರಣ ನಾನು ನಿನ್ನ ನೋಡಲಾಗಲಿಲ್ಲ ಎಂದಿದ್ದಾರೆ.
ಈ ವಿಡಿಯೊ ನೋಡಿ ಭಾವುಕರಾದ ಧನಂಜಯ್ ಕಾರ್ಯಕ್ರಮದಲ್ಲಿ ಹಿಂದೆ ಇಂದ ಬರುವ ಹಾಗೆ ನಮ್ಮ ಮೇಡಂ ಸಹ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಭಾವುಕರಾಗಿದ್ದಾರೆ.


Click it and Unblock the Notifications











