"ನನ್ನನ್ನು ಇಂಡಸ್ಟ್ರಿಯಲ್ಲಿ ಐರನ್ ಲೆಗ್, ಗೊಡ್ಡು ಹಸು ಎಂದಿದ್ದರು.. ನನಗೆ ಗೆಲುವು ಮಾತ್ರ ಮುಖ್ಯ": ಧನಂಜಯ್
ವೀಕ್ ಎಂಡ್ ವಿತ್ ರಮೇಶ್ ಸೀಸನ್- 5ರ ಐದನೇ ಅಥಿತಿಯಾಗಿ ನಟ ಭಯಂಕರ ಡಾಲಿ ಧನಂಜಯ್ ಸಾಧಕರ ಸೀಟಿನಲ್ಲಿ ಕುಳಿತಿದ್ದರು. 2ನೇ ದಿನ ಧನಂಜಯ್ ಜೀವನದ ಕಥೆಯನ್ನು ವೀಕ್ಷಕರ ಮುಂದೆ ಇಡಲಾಗಿದೆ. ಇದೇ ವೇಳೆ ತಾವು ತಮ್ಮದೇ ಗೆಳೆಯರ ತಂಡಕಟ್ಟಿಕೊಂಡು ಧನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಎಲ್ಲರಿಗೂ ಹೆಮ್ಮೆ ತರುವ ವಿಚಾರವಾಗಿದೆ.
ಜಿಪಿಐಇಆರ್ ರಂಗ ತಂಡದೊಂದಿಗೆ ಗೆಳೆಯರ ಜೊತೆಗೆ ನಾಟಕವನ್ನು ಮಾಡಿ, ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲವನ್ನು ಮಾಡಿದ ಕೀರ್ತಿ ಡಾಲಿ ಧನಂಜಯ್ ಅವರ ಟೀಮ್‌ಗೆ ಸಲ್ಲುತ್ತದೆ. ಮುಂಬೈ ಸೇರಿದಂತೆ ವಿದೇಶಗಳಲ್ಲಿ ಸಹ ನಾಟಕವನ್ನು ಅಭಿನಯಿಸಿದ್ದಾರೆ. ಡಾಲಿ ಧನಂಜಯ್ ಅವರು ಕೃಪಾಕರ್ ಸೇನಾನಿಯವರು ಮೊದಲು ಮಾಡಿದ ಸಹಾಯನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ. ನನ್ನ ಬಗ್ಗೆ ಅತಿ ಹೆಚ್ಚು ಯೋಚಿಸುತ್ತಿದ್ದ ವ್ಯಕ್ತಿ ಎಂದರೆ ಕೃಪಾಕರ ಸೇನಾನಿಯವರು ಎಂದಿದ್ದಾರೆ.

ಬೆಂಗಳೂರಿಗೆ ಬಂದಾಗ ಒಳ್ಳೆಯ ಊಟ ಕೊಡಿಸಿ ಐಸ್‌ಕ್ರೀಂ ಕೊಡಿಸಿ ಹಣಕೊಟ್ಟು ಹೋಗುತ್ತಿದ್ದರು ಎಂದು ಡಾಲಿ ನೆನಪಿಸಿಕೊಂಡಿದ್ದಾರೆ. ಜೊತೆಗೆ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಹಾಯ ಮಾಡಿದ ನಿರ್ದೇಶಕ ಗುರುಪ್ರಸಾದ್ ಅವರನ್ನು ನೆನೆಯಲು ಮರೆತ್ತಿಲ್ಲ. 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದು ಅದಕ್ಕು ಮುನ್ನ 'ಜಯನಗರ 4th ಬ್ಲಾಕ್' ಕಿರುಚಿತ್ರದಲ್ಲಿ ನಟಿಸಿದ್ದು ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಐರನ್ ಲೆಗ್ ಎಂದ್ರು
ಡಾಲಿ ಧನಂಜಯ್ ಅವರು ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಾಗ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಸಿನಿಮಾ ಕೈ ಕೊಟ್ಟಾಗ , ಇದರ ಜೊತೆಗೆ ಬೇರೆ ಚಿತ್ರಗಳು ಸಹ ಫ್ಲಾಪ್ ಆದಾಗ ಕೆಲವರು ಡಾಲಿ ಧನಂಜಯ್ ಅವರದ್ದು ಐರನ್ ಲೆಗ್, ಗೊಡ್ಡು ಹಸ ಎಂದಿದ್ದರಂತೆ. ಇವನೊಟ್ಟಿಗೆ ಸಿನಿಮಾ ಮಾಡಿದರೆ ಗೋವಿಂದ ಎಂದು ಎಷ್ಟೋ ಜನರು ಹಂಗಿಸಿದ್ದರು ಎಂದು ಮನದಲ್ಲಿರುವ ನೋವು ಹೊರ ಹಾಕಿದರು.

ಡಾಲಿಯಾದ ಧನಂಜಯ
ಸ್ವತಃ ಧನಂಜಯ್ ಆರಂಭದಲ್ಲಿ ಕಿರುಚಿತ್ರಗಳಲ್ಲಿ ನಟಿಸಿದ್ದರು. ಆರಂಭದಲ್ಲಿ ಸಿನಿಮಾಗಳು ಸಾಲು ಸಾಲಾಗಿ ಸೋತಾಗ ನಟರಾಕ್ಷಸ ಕಂಗೆಟ್ಟು ಹೋಗಿದ್ದರು. ಎಲ್ಲೋ ಇದ್ದವರಿಗೆ ಸೂರಿ ಫೋನ್ ಮಾಡಿ ಶಿವರಾಜ್ ಕುಮಾರ್ ಜೊತೆಗೆ ವಿಲನ್ ಕ್ಯಾರೆಕ್ಟರ್ ಮಾಡಿಸಿದರು. ನಂತರ ಹಲವಾರು ಭಾಷೆಗಳಲ್ಲಿ ನಟಿಸಿ ನಟ ಭಯಂಕರರಾದರು. 'ಟಗರು' ಸಿನಿಮಾ ದೊಡ್ಡ ಮಟ್ಟದಲ್ಲೊ ಹಿಟ್ ಆಯಿತು. ಡಾಲಿ ಪಾತ್ರ ತಂದುಕೊಟ್ಟ ಇಮೇಜ್ ಅಷ್ಟಿಷ್ಟಲ್ಲ. ಈ ಸಿನಿಮಾವನ್ನು ಫಸ್ಟ್ ಡೇ ಚಿತ್ರಮಂದಿರದಲ್ಲಿ ನೋಡಿದಾಗ ನಡೆದ ಘಟನೆಗಳನ್ನು ಧನು ಹೇಳಿಕೊಂಡರು.
ತಾತ್ಸಾರ ಬೇಡವೆಂದು ಕಿವಿಮಾತು
ಡಾಲಿ ಧನಂಜಯ ಅವರು ಇಂಡಸ್ಟ್ರಿಗೆ ಮೊದ ಮೊದಲು ಬಂದಾಗ ಕೆಲವೊಬ್ಬರು ನಡೆಸಿಕೊಂಡ ರೀತಿಗೆ ಬೇಸರವನ್ನು ವ್ಯಕ್ತಪಡಿಸಿದರು. ಹೊಸ ಮುಖಗಳಿಗೂ ಮನ್ನಣೆ ಕೊಡಬೇಕು ತಾತ್ಸಾರ ಮಾಡಬಾರದು, ಅವರೊಳಗೆ ಪ್ರತಿಭೆ ಇರುತ್ತದೆ ಎಂದರು. ತಮ್ಮ ಗೆಳೆಯರ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ಅವರ ಗೆಳೆಯರ ಒಡನಾಟ ಹೇಗಿತ್ತು ಎಂಬುದನ್ನು ಸ್ಟೇಜ್ ಮೇಲೆ ತಿಳಿಸಿದ್ದಾರೆ. ತಾನು ಎಷ್ಟೇ ದೊಡ್ಡ ಮನುಷ್ಯನಾದರೂ ಸಹ ಗೆಳೆಯರನ್ನು ಮರೆಯದೇ ಇರುವುದು ಅವರ ದೊಡ್ಡತನಕ್ಕೆ ಹಿಡಿದ ಕೈಗನ್ನಡಿಯಾಗಿ.

ಸಪ್ತಮಿಗೌಡ ಮಾತಿಗೆ ಡಾಲಿಗೆ ನಗು
ವೀಕೆಂಡ್ ವಿತ್ ರಮೇಶ್ ಶೋಗೆ ಬಂದ ನಟಿ ಸಪ್ತಮಿಗೌಡ, ಡಾಲಿ ಧನಂಜಯ್ ಅವರ ಬಗ್ಗೆ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಪ್ತಮಿ ಗೌಡರನ್ನು ಇತರರಿಗೆ ಪರಿಚಯಿಸಿದ ವೇಳೆ ಡಾಲಿ ತೆಗೆದುಕೊಂಡ ಕಾಳಜಿ ಹಾಗೂ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ. ಧನು ನೋಡಲು ಬಹಳ ನಾಚಿಕೆ ಸ್ವಭಾವದವರ ತರ ಕಾಣುತ್ತಾರೆ. ಆದರೆ ಅವರು ಮಹಾನ್ ಪೋಲಿ ಎಂದು ಕಾಲೆಳೆದರು. ಇನ್ನು ನಟಿ ಶೃತಿ ಹರಿಹರನ್ 'ರಾಟೆ' ಸಿನಿಮಾ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದ್ದ ಎರಡು ಕಾಸ್ಟ್ಯೂಮ್‌ನಲ್ಲಿ ಹೇಗೆ ಸಿನಿಮಾ ಮಾಡಿದ್ವಿ ಎಂಬುದನ್ನು ತಿಳಿಸಿದರು.
ಜೀವದಾನ ಮಾಡಿದ 'ಟಗರು'
ಡಾಲಿ ಧನಂಜಯ್ ಮಾಡಿದ ಶಾರ್ಟ್ ಫಿಲಂ, ಸಿನಿಮಾಗಳು ಸಾಲು ಸಾಲು ಸೋಲು ತಂದಾಗ ಧನಂಜಯ್ ಡಿಪ್ರೆಷನ್‌ಗೆ ಹೋಗಿದ್ದರು. ಶಿವಣ್ಣ ಅವರ ಜೊತೆಗೆ ನಟನೆ ಮಾಡಿ ಒಳ್ಳೆಯ ಹೆಸರು ಬಂದಾಗ ಇದ್ದ ಡಿಪ್ರೆಶನ್, ಸೋಲು, ಹತಾಶೆ ಎಲ್ಲವೂ ಕೊಚ್ಚಿಕೊಂಡು ಹೋಯಿತು ಎಂದು ಸ್ವತಃ ಧನು ಹೇಳಿದ್ದಾರೆ. ನಂಗೆ ಗೆಲುವಷ್ಟೇ ಮುಖ್ಯ, ಸೋಲು ಮುಖ್ಯವಲ್ಲ ಎಂದು ನಟ ರಾಕ್ಷಸ ತಿಳಿಸಿದ್ದಾರೆ. ಒಟ್ಟಾರೆ ಧನಂಜಯ ವೀಕೆಂಡ್ ಎಪಿಸೋಡ್ ವೀಕ್ಷಕರ ಮನಗೆದ್ದಿದೆ.


Click it and Unblock the Notifications











