Weekend with Ramesh 5: ಗಣಿತ ಮೇಷ್ಟ್ರು ಇಲ್ಲದೆ ಇದ್ದಿದ್ರೆ ಗುರುರಾಜ್ SSLC ಫಲಿತಾಂಶ ಏನಾಗ್ತಿತ್ತು?
ಡಾ. ಗುರುರಾಜ ಕರಜಗಿ. ಈ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿ. ಈ ಬಾರಿ ಸಾಧಕರ ಖುರ್ಚಿಯಲ್ಲಿ ಇವರನ್ನು ನೋಡಬಹುದು ಎಂದಾಗ ಸಿಕ್ಕಾಪಟ್ಟೆ ಖುಷಿಪಟ್ಟವರಲ್ಲಿ ಉತ್ತರ ಕರ್ನಾಟಕದ ಮಂದಿ ಹೆಚ್ಚಿನವರು. ಕರಜಗಿ ಅವರ ಸಾಧನೆ ಸಣ್ಣ ಮಟ್ಟದ್ದಲ್ಲ. ಅತಿ ಕಿರಿಯ ವಯಸ್ಸಿಗೆ ಅಂದ್ರೆ ತಮ್ಮ 28 ನೇ ವಯಸ್ಸಿನಲ್ಲಿಯೇ ಪ್ರಾಂಶುಪಾಲರಾಗಿದ್ದವರು.
ಸದ್ಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಗುರುರಾಜ್ ಕರ್ಜಗಿಯವರ ಸಾಧನೆಯನ್ನು ಮೆಲುಕು ಹಾಕುತ್ತಾ, ಅವರ ಹಳೆಯ ನೆನಪುಗಳನ್ನು ವೇದಿಕೆ ಮೇಲೆ ಕರೆಸುವ ಪ್ರಯತ್ನ ಮಾಡಲಾಗಿದೆ.

ಬೇಂದ್ರೆ ಪತ್ರದಿಂದ ರಾಜರತ್ನಂ ಪರಿಚಯ
"ನಾನು ಬೇಂದ್ರೆಯವರಿಗೆ ಹೇಳಿದೆ. ನಾನು ಬೆಂಗಳೂರಿಗೆ ಹೋಗ್ತಾ ಇದ್ದೀನಿ ಅಂತ. ಆಗ ಅವರು ಓ ಕೆಟ್ ಪಟ್ನಾ ಸೇರುತ್ತೀಯಾ, ಆಸೆ ಇದೆಯೇನಪ್ಪ ಅಂದ್ರು. ಆಗ ನಾನು ಹೇಳಿದ್ದೆ ಕೆಟ್ಟೇನು ಹೋಗಲ್ಲ. ಕೆಲಸಕ್ಕೆ ಹೋಗ್ತೀನಿ ಅಂತ. ಅಲ್ಲಿ ಯಾರು ಪರಿಚಯ ಇಲ್ಲ. ನಾನೇ ಲೆಟರ್ ಕೊಡ್ತೀನಿ ಅಂತ ಹೇಳಿದ್ರು. ರಾಜರತ್ನಂ ಬಳಿ ಹೋದೆ, ಖಾದಿ ಪಂಚೆ, ಖಾದಿ ಜುಬ್ಬಾ, ಹೆಗಲ ಮೇಲೊಂದು ಖಾದಿ ಶಲ್ಯ ಹಾಕೊಂಡಿದ್ರು. ಅವರದ್ದು ಕಂಚಿನ ಕಂಟ. ನಾನು ಹೇಳಿದೆ ಬೇಂದ್ರೆಯವರು ಲೆಟರ್ ಕೊಟ್ಟಿದ್ದಾರೆ ಅಂದೆ. ಓಪನ್ ಮಾಡಿ, ಏನ್ರಿ ಬಾರೀ ರೆಕಮೆಂಡೇಷನ್ ತಂದು ಬಿಟ್ಟಿದ್ದೀರಿ ಅಂದ್ರು. ಅದರಲ್ಲಿ ಏನು ಬರೆದಿದ್ದಾರೋ ಗೊತ್ತಿಲ್ಲ ಸರ್ ಎಂದಾಗ. ಆಯ್ತು ಬರ್ತಾ ಇರಿ ಅಂದ್ರು".
ಮೊದಲ ಬಾರಿಗೆ ಕಥೆ ಹೇಳಿದ್ದು ಯಾರ ಮುಂದೆ!
"ಪ್ರಯತ್ನ ಮಾಡಿದರೆ ಸಿಗುವಂತದ್ದಲ್ಲ ಅದು. ಭಗವಂತನ ಕೃಪೆಯಿಂದ ಸಿಗುವಂತದ್ದು. ರಾಜರತ್ನಂ ಅಂತವರ ದರ್ಶನವಾಗೋದು ಅಂದ್ರೆ ಸುಮ್ನೆನಾ. ಸೈಕಲ್ ತಗೊಂಡು ದಿನಾ ಹೋಗ್ತಾ ಇದ್ದೆ ಮಲ್ಲೇಶ್ವರಂಗೆ. ಪಾಲಿ ಭಾಷೆ ಕಲಿತೀಯಾ ಅಂದ್ರು. ನಾನು ಹು ಅಂದೆ. ಪಾಲಿ ಭಾಷೆ ಕಲಿಸಿದ್ರು. ಹದಿನೈದು ಕಥೆ ಅನುವಾದ ಮಾಡಿ ಅಂದ್ರು. ಮಾಡಿದೆ. ಚೆನ್ನಾಗಿ ಅನ್ನಿಸ್ತು. ಒಂದು ಉಪನ್ಯಾಸ ಕೊಟ್ಟುಬಿಡಿ. ಹದಿನೈದು ಜನ ಇರ್ತಾರೆ ಅಂದ್ರು. ನಾನು ಅವರೇಳಿದ್ದು ನೋಡಿ ಯಾರೋ ಇರ್ತಾರೆ ಅಂದುಕೊಂಡೆ. ಆದ್ರೆ, ಗುಂಡಪ್ಲ, ಮಾಸ್ತಿ, ವಿಕೆ ಗೋಕಾಕ್, ವಿಸಿ, ಕೆ ಎಸ್ ನರಸಿಂಹಸ್ವಾಮಿ ಬಂದ್ರು. ನೋಡಿ ಮೊದಲಿಗೆ ಚಳಿ ಆಗೋಯ್ತು. ಆಮೇಲೆ ಚೆನ್ನಾಗಿ ಹೇಳಿದೆ. ಅದೊಂದು ಅದೃಷ್ಟ" ಅಂದ್ರು.
ಪಾಸಾಗಿದ್ದರು ಫೇಲ್ ಅಂತ ಅನೌನ್ಸ್ ಆಗಿದ್ದೇಕೆ..?
"ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಿತ್ತು. ಆ ಕಾಲದಲ್ಲೆಲ್ಲಾ ಫಲಿತಾಂಶ ಪೇಪರ್‌ನಲ್ಲಿ ಬರ್ತಾ ಇತ್ತು. ಅದರಲ್ಲೂ ರ್ಯಾಂಕ್, ಫಸ್ಟ್, ಸೆಕೆಂಡ್, ಥರ್ಡ್ ಬಂದವರ ಹೆಸರು ಮಾತ್ರ ಇರ್ತಾ ಇತ್ತು. ರಿಸಲ್ಟ್ ಬಂದು ಐದು ದಿನ ಆಗಿದೆ. ನಮ್ಮ ಅಪ್ಪ ಪೇಪರ್‌ನಲ್ಲಿ ನೋಡ್ತಾ ಇದ್ದಾರೆ. ಆದರೆ ನನ್ನ ಹೆಸರು ಇರಲಿಲ್ಲ. ಫೇಲ್ ಆದ ಅಂತ ಬಾಯಿಗೆ ಬಂದಂಗೆ ಬೈದ್ರು. ತಕ್ಷಣ ನೆನಪಾಯ್ತು ಅವ್ರಿಗೆ ಒಬ್ಬನೆ ಮಗ ಇರೋದು ಅಂತ. ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡು ಬಿಡ್ತಾನೆ ಅಂದ್ಕೊಂಡು ಸುಮ್ಮನೆ ಆದ್ರು".

ಗಣಿತ ಮೇಷ್ಟ್ರಿಂದ ಬಚಾವ್
"ತಂದೆಯವರು ಸಮಾಧಾನ ಮಾಡಿ ಮತ್ತೆ ಶಾಲೆ ಬಳಿ ಕರೆದುಕೊಂಡು ಹೋದ್ರು. ಸ್ಟಾಫ್ ರೂಮು ಬಂದ ಮೇಲೆ ಗಣಿತ ಮೇಷ್ಟ್ರು ಕರೆದ್ರು. ಬಾ ಇಲ್ಲಿ ಅಂದ್ರು. ಅಲ್ಲ ವರ್ಷವೆಲ್ಲಾ ಪಾಠ ಕೇಳಿದ್ರು ಮೂವತ್ ಮಾರ್ಕ್ಸ್ ತೆಗೆಯೋದಕ್ಕೆ ಆಗಿಲ್ವಾ. ನಂಗೆ ಮುಖ ತೋರಿಸ್ಬೇಡ ಹೋಗು ಅಂತ ಬೈದ್ರು. ಆದ್ರೆ ತಂದೆಯವರನ್ನು ಕರೆಸಿ ಆತ ಫೇಲ್ ಆಗುವ ಮಗ ಅಲ್ಲ ಅಂತ ಹೇಳಿದ್ರು. ಪಾಲಕರ ಹೆಸರಲ್ಲಿ ಅವರೇ ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಬಳಿಕ ರಿಸಲ್ಟ್ ಬಂತು. ಬಂದ ಮಾರ್ಕ್ಸ್ 93. ಮೊದಲು ಅದು 91 ಇತ್ತು. 9 ಸಣ್ಣದಾಗಿ ಬರೆದು ಬಿಟ್ಟಿದ್ದರು" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.


Click it and Unblock the Notifications











