Weekend with Ramesh season- 5: ಈ ವಾರದ ಅತಿಥಿಗೂ ಚಿತ್ರರಂಗಕ್ಕೂ ಉಂಟು ನಂಟು!
ವಿ. ನಾಗೇಂದ್ರ ಪ್ರಸಾದ್ ನಂತರ ಈ ವಾರ ಮತ್ತೊಬ್ಬ ಅತಿಥಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ವಾರದ ಸಾಧಕರ ಸೀಟ್‌ನಲ್ಲಿ ಕೂರುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಜೀ ವಾಹಿನಿ ಇದೇ ಪ್ರಶ್ನೆ ಕೇಳಿದೆ. ಈ ವಾರ ವೀಕೆಂಡ್ ಶೋಗೆ ಬರುವ ಸಾಧಕರು ಯಾರು ಎಂದು ವೀಕ್ಷಕರು ಗೆಸ್ ಮಾಡುತ್ತಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್- 5 ಯಶಸ್ವಿಯಾಗಿ ಮುಂದುವರೆದಿದೆ. ಮೊದಲ ವಾರ ರಮ್ಯಾ ಸಾಧಕರ ಸೀಟ್‌ನಲ್ಲಿ ಕೂತಿದ್ದರು. ಮುಂದೆ ಧನಂಜಯ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ದತ್ತಣ್ಣ ಸೇರಿದಂತೆ ಹಲವು ಸಾಧಕರ ಸಾಧನೆ ಕಥೆಯನ್ನು ರಿವೈಂಡ್ ಮಾಡಿ ರಮೇಶ್ ಅರವಿಂದ್ ತೋರಿಸಿದ್ದಾರೆ. ಒಂದಕ್ಕಿಂತ ಒಂದು ಎಪಿಸೋಡ್ ಸೊಗಸಾಗಿ ಮೂಡಿ ಬರುತ್ತಿದೆ. ಕಳೆದ ಶನಿವಾರ ವಿ. ನಾಗೇಂದ್ರ ಪ್ರಸಾದ್ ಕಥೆ ಕೇಳಿದ್ದೆವು. ಭಾನುವಾರ ಕಾರ್ಯಕ್ರಮ ಇರಲಿಲ್ಲ.

ಈ ವಾರ ಸಾಧಕರ ಸೀಟ್‌ನಲ್ಲಿ ಸಾಹಿತ್ಯ ದೊಡ್ಡ ರಂಗೇಗೌಡರು ಕೂರಲಿದ್ದಾರೆ. ಕವಿಯಾಗಿ, ಸಾಹಿತಿಯಾಗಿ , ಪ್ರಾಧ್ಯಾಪಕರಾಗಿ, ಸಿನಿಮಾ ಸಾಹಿತಿಯಾಗಿ ಕನ್ನಡ ನಾಡು, ನುಡಿಗೆ ಅವರ ಕೊಡುಗೆ ಅಪಾರ. "ಪದಗಳಲ್ಲೇ ನಗೆಯ ಮೀಟಿದ ಸಾಹಿತಿ ಈ ವಾರದ ಅತಿಥಿ.. ಯಾರು ಅಂತ ಗೆಸ್ ಮಾಡಿ?" ಎಂದು ಜೀ ವಾಹಿನಿ ಪೋಸ್ಟ್ ಮಾಡಿದೆ.

ದೊಡ್ಡರಂಗೇಗೌಡರ ಹಿನ್ನೆಲೆ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರ ಹಳ್ಳಿಯಲ್ಲಿ 1946, ಫೆಬ್ರವರಿ 7ರಂದು ದೊಡ್ಡರಂಗೇಗೌಡರು ಜನಿಸಿದರು. ಬೆಂಗಳೂರು ವಿವಿಯಿಂದ ಪದವಿ ಹಾಗೂ ಮದ್ರಾಸ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆ ಆಗಿದ್ದರು.
ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
'ಮನುಜ' ಎಂಬ ಕಾವ್ಯನಾಮದಿಂದ ದೊಡ್ಡರಂಗೇಗೌಡರು ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಪ್ರಗಾಥ ಕೃತಿಗಳು, ಕವನ ಸಂಕಲನಗಳು, ಭಾವಗೀತೆಗಳು, ಮುಕ್ತಕಗಳು, ಗದ್ಯ ಕೃತಿಗಳು, ಪ್ರವಾಸ ಸಾಹಿತ್ಯಗಳನ್ನು ಬರೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಇನ್ನು ವಿವಿಧ ಸಂಘ ಸಂಸ್ಥೆಗಳಿಂದ ಸಿಕ್ಕ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ.
ಚಿತ್ರರಂಗಕ್ಕೆ ಸೇವೆ
ಗೀತ ಸಾಹಿತಿಯಾಗಿ ದೊಡ್ಡರಂಗೇಗೌಡರು ಕನ್ನಡ ಚಿತ್ರರಂಗಕ್ಕೂ ಕೊಡುಗೆ ನೀಡಿದ್ದಾರೆ. 500 ಕನ್ನಡ ಸಿನಿಮಾ ಗೀತೆಗಳನ್ನು ರಚಿಸಿದ್ದಾರೆ. ಕೆಲ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. 'ಪರಸಂಗದ ಗೆಂಡೆತಿಮ್ಮ', 'ಜನುಮದ ಜೋಡಿ', 'ಆಲೆಮನೆ', 'ಅಶ್ವಮೇಧ', 'ಬೆಳ್ಳಿ ಕಾಲುಂಗುರ' ಸೇರಿದಂತೆ ಸಾಕಷ್ಟು ಸಿನಿಮಾ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. 'ಹೃದಯ ಸಮುದ್ರ ಕಲಕಿ'(ಅಶ್ವಮೇಧ), 'ತೇರ ಏರಿ ಅಂಬರದಾಗೆ ನೇಸರ ನಗುತ್ತಾನೆ'(ಪರಸಂಗದ ಗೆಂಡೆತಿಮ್ಮ), 'ಕೋಲುಮಂಡೆ ಜಂಗಮ ದೇವ'(ಜನುಮದ ಜೋಡಿ), 'ಕೇಳಿಸದೇ ಕಲ್ಲು ಕಲ್ಲಿನಲಿ'(ಬೆಳ್ಳಿ ಕಾಲುಂಗರ) ಕೆಲ ಜನಪ್ರಿಯ ಗೀತೆಗಳು.


Click it and Unblock the Notifications











