ಪ್ರೇಮ್ ಇವತ್ತು ಹೀರೋ ಆಗೋದಕ್ಕೆ ಆ ಆರ್ಕೆಸ್ಟ್ರಾ ಕಾರಣ!
ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ತಿರುವು ಅನ್ನೋದು ಇರುತ್ತೆ. ಯಾವುದೋ ಮೆಟ್ಟಿಲುಗಳು ಸ್ಟಾರ್ ಪಟ್ಟಕ್ಕೆ ಏರಿಸಿ ಬಿಡುತ್ತವೆ. ಅದಕ್ಕೆ ಸಾಧನೆ ಮಾಡುವಾಗ ಯಾವುದೇ ದಾರಿ ಸಿಕ್ಕರೂ ಅದರಲ್ಲಿ ನಡೆದು ಬಿಡಬೇಕು. ಈಗ ನೆನಪಿರಲಿ ಪ್ರೇಮ್ ಅವರಿಗೆ ಸ್ಟಾರ್ ಪಟ್ಟ ಸಿಗುವುದಕ್ಕೆ ಕಾರಣವಾಗಿದ್ದು, ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಆರ್ಕೆಸ್ಟ್ರಾ.
ಈ ವಾರದ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮದಲ್ಲಿ ನೆನಪಿರಲಿ ಪ್ರೇಮ್ ಅತಿಥಿಯಾಗಿ ಬಂದಿದ್ದಾರೆ. ಪ್ರೇಮ್ ಸವೆಸಿದ ಹಾದಿ ಕೂಡ ಅಷ್ಟು ಸುಲಭದ ದಾರಿ ಅಲ್ಲ. ಒಂದು ಸಕ್ಸಸ್ ಗೋಸ್ಕರ ಸಾಕಷ್ಟು ಏಳು ಬೀಳು ನೋಡಿದ್ದಾರೆ. ಸದ್ಯ ಅವರ ಮಗಳು ಕೂಡ ನಟಿಯಾಗಿ ಲಾಂಚ್ ಆಗಿದ್ದಾರೆ. ಪ್ರೇಮ್ ಸಿನಿಮಾರಂಗಕ್ಕೆ ಬಂದಿದ್ದು ಹೇಗೆ? ಬರುವಾಗ ಸಿಕ್ಕ ಸಹಾಯವೇನು? ಇದೆಲ್ಲವನ್ನೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಪ್ರೇಮ್ ಶಿಕ್ಷಣ
ಯಾರಿಗೆ ಆಗಲಿ ಬಾಲ್ಯದ ಜೀವನ ಅಂದ್ರೆ ತುಂಬಾ ತುಂಬಾ ಅಮೂಲ್ಯ. ಅದೇ ರೀತಿ ಪ್ರೇಮ್ ಅವರಿಗೂ ತಮ್ಮ ಬಾಲ್ಯದ ನೆನಪುಗಳ ಬುತ್ತಿಯೇ ಇದೆ. ಅದರಲ್ಲೂ ಅವರು ಓದಿದ ಸರ್ಕಾರಿ ಶಾಲೆ ನೋಡಿದಾಗಂತೂ ಒಂದು ಕ್ಷಣ ಮಗುವೇ ಆಗಿ ಬಿಟ್ಟರು. ಬೆಂಗಳೂರಿನ ಉತ್ತರ ವಲಯದಲ್ಲಿರುವ ಸಂಪಂಗಿರಾಮ ಏರಿಯಾದ ಸರ್ಕಾರಿ ಶಾಲೆಯಲ್ಲಿ ಇವರಿಗೆ ಶಿಕ್ಷಣ ಸಿಕ್ಕಿತ್ತು. ಆ ಬಗ್ಗೆ ಹೇಳಿದ ಪ್ರೇಮ್, "ನಮ್ಗೆ ಸ್ಕೂಲ್ ಅಂದ್ರೆ ದೇವರ ಥರ. ಅದನ್ನು ಬಿಟ್ಟಿರುವುದಕ್ಕೆ ಆಗುತ್ತಿರಲಿಲ್ಲ. ಟೀಚರ್ ಬಂದು ರಾಧಾ ಅಂತ. ಅವರದ್ದು ಪುಟಾಣಿ ದೇಹ. ಆದ್ರೆ, ಮಾತಾಡ್ತಾ ಇದ್ದದ್ದು ಯಾವ ಡಾನ್‌ಗೂ ಕಡಿಮೆ ಇರಲಿಲ್ಲ. ಆ ರೀತಿ ಮಾತಾಡ್ತಾ ಇದ್ರು. ಇವರೆಲ್ಲಾ ನನ್ನ ಬಾಲ್ಯ ಸ್ನೇಹಿತರು" ಎಂದು ಬಾಲ್ಯದ ದಿನಗಳನ್ನು ನೆನೆದಿದ್ದಾರೆ.
ಜೀವನ ಕೊಟ್ಟ ಆರ್ಕೆಸ್ಟ್ರಾ
"ಇವತ್ತು ನಾನ್ ಆಕ್ಟರ್ ಆಗುವುದಕ್ಕೆ ಕಾರಣ ಅಂದ್ರೆ ಅಂತ ವೇದಿಕೆಗಳೇ ಅಂತ ಹೇಳೋದಕ್ಕೆ ಇಷ್ಟಪಡ್ತೀನಿ. ನಮ್ಮ ಏರಿಯಾದಲ್ಲಿ ಕನ್ನಡ ರಾಜ್ಯೋತ್ಸವ ಮಾಡ್ತಾ ಇದ್ರು. ಅಣ್ಣಮ್ಮನ್ನ ಕೂರಿಸ್ತಾ ಇದ್ರು. ಅಂತಹ ಟೈಮ್‌ನಲ್ಲೆಲ್ಲಾ ಸ್ಟೇಜ್ ಮೇಲೆ ಹೋಗಿ ಹಾಡು ಹೇಳಬೇಕೆಂಬ ಬಯಕೆ. ಹಾಡ್ತಾ ಹಾಡ್ತಾ ಕಲೆ ಅಂದ್ರೆ ಏನು? ಸಾಹಿತ್ಯ ಅಂದ್ರೆ ಏನು? ಹಾಡಿನ ಮೇಲೆ ಆಸಕ್ತಿ ಶುರುವಾಗಿತ್ತು. ಹಾಗಾಗಿ ಇವತ್ತು ನಾನು ಹೀರೋ ಆಗಿದ್ದೀನಿ ಅಂದ್ರೆ ಎಲ್ಲಾ ಆರ್ಕೆಸ್ಟ್ರಾದವರೇ ಕಾರಣ" ಎಂದಿದ್ದಾರೆ.

ಹಳೆಯ ಸ್ನೇಹಿತರನ್ನು ನೋಡಿದ ಖುಷಿ
ಎಲ್ಲರಿಗೂ ಬಾಲ್ಯ ಸ್ನೇಹಿತರು ಅಂತ ಇರ್ತಾರೆ. ಹಾಗಂತ ಎಲ್ಲರಿಗೂ ಒಳ್ಳೆಯವರು ಸಿಗಲ್ಲ. ಆದರೆ, ಪ್ರೇಮ್ ಅವರಿಗೆ ಸಿಕ್ಕಿದ್ದಾರೆ. ಸದ್ಯ ಹೈಸ್ಕೂಲ್‌ನಲ್ಲಿದ್ದಂತ ಮೂರು ಜನ ಸ್ನೇಹಿತರನ್ನು ವೇದಿಕೆ ಮೇಲೆ ಕರೆಸಲಾಗಿದೆ. ಅವರೆಲ್ಲಾ ಪ್ರೇಮ್ ಅವರಿಗೆ ಬೆನ್ನೆಲುಬಾಗಿ ನಿಂತವರು. ಎಸ್ಎಸ್ಎಲ್‌ಸಿ ಎಕ್ಸಾಂನಿಂದ ಹಿಡಿದು ಹಾಡು ಹಾಡುವವರೆಗೂ ಆರ್ಕೆಸ್ಟ್ರಾ ಜೀವನದ ತನಕ ಎಲ್ಲವನ್ನು ನೆನೆದಿದ್ದಾರೆ.
ವೇದಿಕೆ ಮೇಲೆ ಅಣ್ಣಾವ್ರ ಹಾಡು ಹಾಡಿದ ಪ್ರೇಮ್
ಇದೆಲ್ಲಾ ಮಾತು ಕತೆ ನಡೆಯುತ್ತಿದ್ದಾಗಲೇ ಹಿರಿಯ ನಟ ರಮೇಶ್ ಅರವಿಂದ್ ಹಾಡು ಹಾಡಿಸುವ ಪ್ರಯತ್ನ ಮಾಡಿದ್ದಾರೆ. ಆರ್ಕೆಸ್ಟ್ರಾದಲ್ಲಿ ಒಂದಷ್ಟು ಜನರಿಗೆ ಲೈಫ್ ಕೊಟ್ಟಿದ್ದೇ ಅಣ್ಣಾವ್ರ ಹಾಡು. ಈ ವೇದಿಕೆ ಮೇಲೂ ನೆನಪಿರಲಿ ಪ್ರೇಮ್ ಅಣ್ಣಾವ್ರ "ಹೆದೆರಿಕೆಯ ನೋಟವೇಕೆ?" ಹಾಡನ್ನು ಹಾಡಿದ್ದಾರೆ. ಸ್ನೇಹಿತರೆಲ್ಲಾ ಸೇರಿ, ಶರ್ಟ್‌ಗೆ ನೋಟು ಅಂಟಿಸಿ, ಹಳೇ ದಿನಗಳ ಮೆಲುಕು ಹಾಕಿದ್ದಾರೆ.


Click it and Unblock the Notifications











