Weekend With Ramesh: ಕನ್ನಡದ ಈ ನಟನನ್ನು ಫಾಲೋ ಮಾಡಬೇಕು ಎಂದ ಪ್ರಭುದೇವ!

ಮೈಸೂರು ಮೂಲದ ಪ್ರಭುದೇವ್ ಅವರು ಇತರೆ ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ಪ್ರಭುದೇವ್ ನಟ ನಿರ್ದೇಶಕ ಡ್ಯಾನ್ಸರ್ ಆಗಿದ್ದಾರೆ. ಈಗ ಐದನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಸಾಧಕನಾಗಿ ಪ್ರಭುದೇವ ಆಗಮಿಸಿದ್ದಾರೆ.
ದೊಡ್ಡ ಸ್ಟಾರ್ ಪಟ್ಟ ಗಳಿಸಿದ್ದರೂ ಸಹ ಅವರು ಸ್ನೇಹಿತರ ಜೊತೆ ಹೇಗಿದ್ದರು ಅವರ ಬಾಲ್ಯ ಹೇಗಿತ್ತು ಎಂಬುದನ್ನು ಅವರೇ ರಿವಿಲ್ ಮಾಡಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಭುದೇವ್ ಅವರ ತಂದೆ ಮೂಗೂರು ಸುಂದರ್ ಅವರು ಮಗನ ಜನ್ಮ ರಹಸ್ಯವನ್ನು ಜನರ ಮುಂದೆ ಇಟ್ಟಿದ್ದಾರೆ.
ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ್ ಅವರಿಗೆ ಸರ್ಪ್ರೈಸ್ ನೀಡುವ ಮೂಲಕ ಮತ್ತೊಮ್ಮೆ ಶಾಲಾ ದಿನಗಳು ಹಾಗೂ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ.
ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆ ದಿನ ಮಗು ಜನಿಸಿದ್ರೆ ಹೇಗಾಗಿರಬೇಡ, ಆದರೆ ಮೂಗೂರು ಸುಂದರ್ ಅವರು ತಮ್ಮ ಮಗ ಅಮಾವಾಸ್ಯೆ ದಿನ ಹುಟ್ಟಿದ ಎಂದು ತುಂಬಾ ಖುಷಿಯನ್ನ ಪಟ್ಟಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿದ್ದಾರೆ. ನನ್ನ ಮಗ ಅಮಾವಾಸ್ಯೆಯ ದಿನ ಹುಟ್ಟಿದ್ದು ನನಗಂತೂ ತುಂಬಾ ಸಂತಸವನ್ನು ತಂದಿದೆ ಎಂದು ವೇದಿಕೆಯ ಮೇಲೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಪ್ರಭುದೇವ್ ಅವರಿಗೆ ಹಪ್ಪಳ ಎಂದರೆ ತುಂಬಾ ಇಷ್ಟ. ಇದರಿಂದಾಗಿ ಹಪ್ಪಳದ ಕಥೆಯನ್ನ ಹೇಳಿದ್ದಾರೆ. ನಾವು ಮನೆಯಲ್ಲಿ ಇದ್ದಾಗ ಹಪ್ಪಳವನ್ನು ಜೋಡಿಸಿಕೊಂಡು ತಿನ್ನುತ್ತಿದ್ದೆವು ಎಂದು ರಮೇಶ್ ಬಳಿ ಹೇಳಿದ್ದಾರೆ. ಇನ್ನು ಇದೇ ವೇಳೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ತಂದೆ ಮಗ ಇಬ್ಬರು ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
ಮೈಸೂರಿನ ದೂರ ಗ್ರಾಮದಲ್ಲಿ ಇದ್ದಾಗ ಅವರ ಬಾಲ್ಯ ಜೀವನ ಹೇಗಿತ್ತು ಎಂಬುದನ್ನು ಪ್ರಭುದೇವ್ ನೆನಪಿಸಿಕೊಂಡಿದ್ದಾರೆ. ಬುಗುರಿ ಆಟ, ಗೋಲಿಯಾಟ ಆಡುವುದನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ಸೈಕಲ್‌ನಲ್ಲಿ ಬಂಡಿ ಹೊಡೆಯುತ್ತಿದ್ದುದನ್ನು ನೆನೆಸಿಕೊಂಡಿದ್ದಕ್ಕಾಗಿ ರಮೇಶ್ ವೇದಿಕೆ ಮೇಲೆ ಅವರು ಆಡುತ್ತಿದ್ದ ಎಲ್ಲಾ ಆಟಗಳನ್ನು ಪ್ರಭುದೇವ್ ಕೈಯಲ್ಲಿ ಆಡಿಸಿದ್ದಾರೆ.
ತಮಗೆ ಸ್ಟಾರ್ ಪಟ್ಟ ಸಿಕ್ಕಿ ಬಿಟ್ಟರೆ ಎಲ್ಲರನ್ನೂ ಮರೆಯುವ ಈ ಕಾಲದಲ್ಲಿ ಪ್ರಭುದೇವರವರು ತಮ್ಮ ಶಾಲೆಯ ಗೆಳೆಯರ ಜೊತೆಗೆ ಈಗಲೂ ಸಹ ಒಡನಾಟದಲ್ಲಿ ಇದ್ದಾರೆ. ವರ್ಷಕ್ಕೆ ಒಮ್ಮೆ ಎಲ್ಲರೂ ಸೇರಿ ಸಂಭ್ರಮ ಪಡುತ್ತಾರೆ. ಇದೆಲ್ಲವನ್ನು ಅವರ ಸ್ನೇಹಿತರೇ ರಿವೀಲ್ ಮಾಡಿದ್ದಾರೆ. ಪ್ರಭುದೇವ್‌ಗೆ ಸ್ಟಾರ್ ಪಟ್ಟ ಸಿಕ್ಕಿದ್ದರೂ ಸಹ ಯಾವುದೇ ಹಮ್ಮು ಇಲ್ಲ. ನಾವು ಎಲ್ಲೇ ಸಿಕ್ಕಿದರೂ ಸಹ ನಮ್ಮನ್ನು ಆತ್ಮೀಯತೆಯಿಂದ ಮಾತನಾಡಿಸುತ್ತಾನೆ ಎಂದು ಅವರ ಗೆಳೆಯರು ತಿಳಿಸಿದ್ದಾರೆ.
ಇನ್ನು ಪ್ರಭುದೇವರವರು ಎಲ್ಲೇ ಹೋದರೂ ಸಹ ಸುಮ್ಮನೆ ಬರುವುದಿಲ್ಲ ಏನಾದರೂ ಒಂದು ಡ್ಯಾನ್ಸ್ ಮಾಡಿ ಅಭಿಮಾನಿಗಳ ಮನಸ್ಸಿಗೆ ಸಂತೋಷವನ್ನು ಕೊಟ್ಟು ಬರುತ್ತಾರೆ. ಅದರಂತೆ ರಮೇಶ್ ಅರವಿಂದ್ ಅವರ ಜೊತೆಗೆ ಪ್ರಭುದೇವರು ಮೂನ್ ವಾಕ್ ಮಾಡಿದ್ದಾರೆ. ಯೋಗರಾಜ್ ಭಟ್ ಅವರು ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿ ನಟ ಶಿವರಾಜ್ ಕುಮಾರ್ ಹಾಗೂ ಪ್ರಭುದೇವ್ 21 ವರ್ಷಗಳ ಬಳಿಕ ಒಟ್ಟಿಗೆ ನಟಿಸುತ್ತಿರುವ ಚಿತ್ರವನ್ನು ತಾವು ನಿರ್ದೇಶಿಸುತ್ತಿರುವುದರ ಬಗ್ಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪ್ರಭುದೇವರವರು ಅವರ ಬಾಲ್ಯದ ಸ್ನೇಹಿತರನ್ನು ನೋಡಿ ನಾನು ಲುಂಗಿಯನ್ನು ಉಟ್ಟುಕೊಳ್ಳುವುದಿಲ್ಲ. ಇವರೆಲ್ಲರೂ ಲುಂಗಿಯನ್ನ ಉಟ್ಟುಕೊಳ್ಳುತ್ತಾರೆ. ಯಾಕೆಂದರೆ ಬೆಳಿಗ್ಗೆ ಎದ್ದು ನೋಡಿದ್ರೆ ಲುಂಗಿ ಮಾಯವಾಗಿತ್ತು ಎಂದು ಬಾಲ್ಯದಲ್ಲಿ ನಡೆದಂತಹ ಒಂದು ಪ್ರಸಂಗವನ್ನ ಮೆಲುಕು ಹಾಕಿ ಎಲ್ಲರ ಮುಖದಲ್ಲೂ ನಗೆಯನ್ನ ತರಿಸಿದ್ದಾರೆ.
ಪ್ರಭುದೇವ್ ಮತ್ತು ಸ್ನೇಹಿತರು ಮಲಗಿದ್ದಾಗ ರಾತ್ರಿ ಲುಂಗಿ ಉಟ್ಟುಕೊಂಡು ಮಲಗಿದ್ದಾರೆ. ಆದರೆ ಪ್ರಭುದೇವ್‌ಅವರು ಬೆಳಿಗ್ಗೆ ಎದ್ದಾಗ ಲುಂಗಿ ಮಾಯವಾಗಿತ್ತಂತೆ. ಇದರಿಂದ ನಾನು ಅಂದಿನಿಂದ ಲುಂಗಿ ಉಟ್ಟಿಕೊಳ್ಳುವುದನ್ನು ಬಿಟ್ಟೆ ಎಂದು ಪ್ರಭುದೇವ್ ತಿಳಿಸಿದ್ದಾರೆ.
ರಮೇಶ್ ಅರವಿಂದ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಮ್ಮ ಡೈರೆಕ್ಷನ್‌ನಲ್ಲಿ ನಟಿಸಬೇಕು ಎಂದು ಆಸೆ ಪಡುತ್ತಾರೆ ಎಂದಾಗ, ಪ್ರಭುದೇವ ಅವರನ್ನು ಫಾಲೋ ಮಾಡಿದ್ರೆ ಸಾಕು ಎಂದು ಹೇಳುವ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.
ನಟ ಪ್ರಕಾಶ್ ರೈ ಅವರ ಮಗ ಸತ್ತಾಗ ಪ್ರಭುದೇವ್ ಅವರು ತುಂಬಿದ ಆತ್ಮಸ್ಥೈರ್ಯದ ಬಗ್ಗೆ ಪ್ರಕಾಶ್ ರೈ ಮಾತನಾಡಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಪ್ರಭುದೇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಅವರ ಹುಟ್ಟು ಹಬ್ಬದ ಸಮಯದಲ್ಲಿ ಹಾರೈಸೋಣ.


Click it and Unblock the Notifications











