ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ 'ಸಿಲ್ಲಿ ಲಲ್ಲಿ' ಧಾರಾವಾಹಿಯ ಕಲಾವಿದರೆಲ್ಲಾ ಈಗೆಲ್ಲಿದ್ದಾರೆ?
ಒಂದು ದಶಕಕ್ಕೂ ಮೊದಲಿನ ವಿಚಾರವಿದು! ಕಿರುತೆರೆ ಪ್ರೇಕ್ಷಕರೆಲ್ಲರೂ ಸಿಲ್ಲಿಲಲ್ಲಿ ಎಂಬ ಧಾರಾವಾಹಿಯನ್ನು ತಪ್ಪದೆ ನೋಡುತ್ತಿದ್ದ ಕಾಲವದು. ಡಾಕ್ಟರ್ ವಿಠಲ್ ರಾವ್, ರಾಜಕಾರಣಿ ಲಲಿತಾಂಬಿಕ, ಸೂಜಿ, ವಿಶಾಲು, ಪಲ್ಲಿ, ನರ್ಸ್ ಲಲಿತ, ಹೀಗೆ ವಿಭಿನ್ನ ಪಾತ್ರಗಳ ಮೂಲಕ ಈ ಧಾರಾವಾಹಿ ಜನಮನ ಗೆದ್ದಿತ್ತು. ನಟರಾದ ರವಿಶಂಕರ್ ಗೌಡ, ಮಂಜು ಭಾಷಿಣಿ, ರೂಪ ಪ್ರಭಾಕರ್, ನಮಿತಾ ರಾವ್, ಶ್ರೀನಿವಾಸ್ ಗೌಡ, ಪ್ರಶಾಂತ್ ಮಿತ್ರ ಮುಂತಾದವರು ಬಹಳ ವಿಭಿನ್ನವಾಗಿ ಈ ಧಾರಾವಾಹಿಯಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಟ ನಿರ್ದೇಶಕ, ಬಾಣಸಿಗ ಸಿಹಿ ಕಹಿ ಚಂದ್ರು ಅವರು ಈ ಧಾರಾವಾಹಿಯನ್ನು ನಿರ್ದೇಶಿಸಿದ್ದರು.
ಅಂತಹ ಕಾಲದಲ್ಲಿ ಅಷ್ಟು ಜನಪ್ರಿಯವಾದ ಧಾರಾವಾಹಿಯನ್ನು ಕೊಟ್ಟ ಈ ಎಲ್ಲಾ ಕಲಾವಿದರು ನಂತರ ಹೆಚ್ಚಿನ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹಾಗಾದರೆ ಈಗ ಇವರೆಲ್ಲ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿರುವುದಂತೂ ನಿಜ.

ನಟಿ ಮಂಜು ಭಾಷಿಣಿ
ನಟಿ ಮಂಜು ಭಾಷಿಣಿ 'ಮಾಯಾಮೃಗ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು, ನಂತರ 'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ಬಹಳಷ್ಟು ಜನಪ್ರಿಯತೆ ಗಳಿಸಿದ್ದರು. ಅದಾದ ಮೇಲೆ ಧಾರಾವಾಹಿಯಿಂದ ಬಹುದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಈ ನಟಿ 'ಮತ್ತೆ ಮಾಯಾಮೃಗ' ಎಂಬ ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಂಡರು. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ ಎನ್ನುವ ಖಡಕ್ ರೋಲ್‌ನಲ್ಲಿ ಕಾಣಿಸಿಕೊಂಡು ಜನಮನ ಗೆದ್ದಿದ್ದಾರೆ.
ನಟ ರವಿಶಂಕರ್ ಗೌಡ
'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಡಾಕ್ಟರ್ ವಿಠಲ್ ರಾವ್ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟ ರವಿಶಂಕರ್ ಗೌಡ, ಅದಾದ ಮೇಲೆ ಹೆಚ್ಚಿನ ಧಾರಾವಾಹಿಗಳಲ್ಲಿ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ನಂತರ ಹಿರಿತೆರೆಗೆ ಕಾಲಿಟ್ಟಿರುವ ಅವರು 'ಪಯಣ', 'ಕಿರಗೂರಿನ ಗಯ್ಯಾಳಿಗಳು', 'ಮನೆ ಮಾರಾಟಕ್ಕಿದೆ', 'ಪೌಡರ್', 'ರಾಘವೇಂದ್ರ ಸ್ಟೋರ್ಸ್' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಧಾರಾವಾಹಿಗಳಿಂದ ಮಾತ್ರ ತುಸು ದೂರವೇ ಉಳಿದಿದ್ದಾರೆ ಈ ನಟ.
ನಟಿ ರೂಪ ಪ್ರಭಾಕರ್
ಸೂಜಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ರೂಪ ಪ್ರಭಾಕರ್, 'ಸಿಲ್ಲಿ ಲಲ್ಲಿ' ಧಾರಾವಾಹಿ ನಂತರ ಕೆಲವೇ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಪಲ್ಲಿ ಪಾತ್ರಧಾರಿ ಪ್ರಶಾಂತ್ ಅವರನ್ನು ಮದುವೆಯಾಗಿರುವ ನಟಿ ರೂಪ ಪ್ರಭಾಕರ್ ಇತ್ತೀಚಿಗೆ 'ರಾಜ ರಾಣಿ' ಎಂಬ ರಿಯಾಲಿಟಿ ಶೋನಲ್ಲಿ ಜೋಡಿಯಾಗಿ ಕಾಣಿಸಿಕೊಂಡರು.
ನಟಿ ನಮಿತಾ ರಾವ್
'ಸಿಲ್ಲಿ ಲಲ್ಲಿ' ಧಾರಾವಾಹಿಯುದ್ದಕ್ಕೂ ಡಾಕ್ಟರೇ ಎನ್ನುತ್ತಾ ಡಾಕ್ಟರ್ ವಿಠ್ಠಲ್ ರಾವ್ ಸುತ್ತ ಸುತ್ತುತ್ತಿದ್ದ, ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ನಟಿ ನಮಿತಾ ರಾವ್. ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದ ಈ ನಟಿ 'ಸಿಲ್ಲಿ ಲಲ್ಲಿ' ಧಾರಾವಾಹಿ ನಂತರ ಹೆಚ್ಚಿನ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ನಟಿ ಸುನೇತ್ರ ಪಂಡಿತ್
ರಾಜಕಾರಣಿ ಲಲಿತಾಂಬಿಕಾ ಅವರ ಸೆಕ್ರೆಟರಿ ಪಾತ್ರಧಾರಿ ವಿಶಾಲುವಾಗಿ ಕಾಣಿಸಿಕೊಂಡಿದ್ದ ನಟ ಈ ಸುನೇತ್ರ ಪಂಡಿತ್ ಕೂಡ ತಮ್ಮ ನಟನೆ ಹಾವ ಭಾವದ ಮೂಲಕವೇ 'ಸಿಲ್ಲಿ ಲಲ್ಲಿ' ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿದ್ದರು. ಅದಾದ ಮೇಲೆ ಕಿರುತೆರೆಯಲ್ಲಿ ಬೇರೆ ಬೇರೆ ಧಾರಾವಾಹಿಗಳಲ್ಲಿ ವಿಭಿನ್ನ ರೋಲ್‌ಳಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿ. ಕೆಲ ಸಿನಿಮಾಗಳಲ್ಲೂ ನಟಿಸಿರುವ ಈಕೆ, ಇತ್ತೀಚೆಗೆ 'ಮನಸಾರೆ' ಎಂಬ ಧಾರಾವಾಹಿಯಲ್ಲಿ ಒಂದು ಪಾತ್ರದಲ್ಲಿ ನಟಿಸಿದ್ದರು. ಪ್ರಸ್ತುತ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಒಂದು ವಿಭಿನ್ನ ಹಾಗೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











