ರಚಿತಾ, ಆಶಿಕಾ, ಶ್ರುತಿ ಯಾಕಿಂಗೆ? ಆಶಾ ಭಟ್‌ಗೆ ಒಂದೇ ಸಿನಿಮಾ.. ಕನ್ನಡದ ನಟಿಯರೆಲ್ಲಿ?
ಕನ್ನಡ ಚಿತ್ರರಂಗ ಎತ್ತ ಸಾಗುತ್ತಿದೆ ಅನ್ನೋ ಆತಂಕ ಎದುರಾಗುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ 'ಕಾಟೇರ' ಬಿಟ್ಟರೆ, ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಅಂತ ಸಿಕ್ಕೇ ಇಲ್ಲ. ಅಕ್ಕ ಪಕ್ಕದ ಚಿತ್ರರಂಗಗಳು ಗೆದ್ದು ಬೀಗುತ್ತಿರುವಾಗ ಸ್ಯಾಂಡಲ್‌ವುಡ್ ಮಾತ್ರ ಸೌಂಡೇ ಮಾಡುತ್ತಿಲ್ಲ. ಸಿನಿಮಾ ಮಂದಿ ಇದೆಲ್ಲ ಪ್ಯಾನ್ ಇಂಡಿಯಾ ಎಫೆಕ್ಟ್ ಎನ್ನುತ್ತಿದ್ದಾರೆ. ಈ ಎಫೆಕ್ಟ್ ಕನ್ನಡದ ನಟಿಯರ ಮೇಲೆ ಬಿತ್ತಾ? ಇಂತಹದ್ದೊಂದು ಪ್ರಶ್ನೆ ಖಂಡಿತಾ ಎದ್ದಿದೆ.
ಕನ್ನಡ ಚಿತ್ರರಂಗದಿಂದ ವೃತ್ತಿ ಜೀವನ ಆರಂಭ ಮಾಡಿದ್ದ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗವನ್ನೇ ಬಿಟ್ಟು ಹೋದರು. ಹೋದಲ್ಲೂ ಅಪ್ಪಿ ತಪ್ಪಿನೂ ಸ್ಯಾಂಡಲ್‌ವುಡ್ ಬಗ್ಗೆ ಮಾತಾಡೋದಿಲ್ಲ. ಇನ್ನು ಉಳಿದುಕೊಂಡಿರುವ ನಟಿಯರಿಗೆ ಮುಂದೇನು ಮಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ.

ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರುತಿ ಹರಿಹರನ್ ಅಂತಹ ನಟಿಯರು ಸೈಲೆಂಟ್ ಆಗಿದ್ದಾರೆ. ಆಗೊಂದು ಈಗೊಂದು ಸಿನಿಮಾ ಮಾಡುತ್ತಿದ್ದಾರೆ. ಸಪ್ತಮಿ ಗೌಡ ಪರಭಾಷೆ ಕಡೆ ಮುಖ ಮಾಡಿದ್ದಾರೆ. 'ರಾಬರ್ಟ್' ಅಂತಹ ಹಿಟ್ ಸಿನಿಮಾ ಕೊಟ್ಟರೂ ಎರಡನೇ ಸಿನಿಮಾ ಮಾಡಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ನಟಿಯ ಕಥೆ ಏನಾಗಿದೆ? ಅನ್ನೋ ಪ್ರಶ್ನೆ ಎದ್ದಿದೆ.
ರಚಿತಾ ರಾಮ್
2013 ರಲ್ಲಿ 'ಬುಲ್ ಬುಲ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಒಂದು ದಶಕಗಳ ಕಾಲ ಸ್ಯಾಂಡಲ್‌ವುಡ್‌ನಲ್ಲಿ ರಾಣಿಯಂತೆ ಮರೆದಿದ್ದರು. ಆದರೆ, ಇತ್ತೀಚೆಗೆ ಯಾಕೋ ಇವರು ಹೆಚ್ಚು ಸಿನಿಮಾಗಳು ಮಾಡುತ್ತಿಲ್ಲ. ಒಂದು ಕಾಲದಲ್ಲಿ ಮೂರಿಂದ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಈಗ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ನೀನಾಸಂ ಸತೀಶ್ ನಟಿಸಿದ 'ಮ್ಯಾಟ್ನಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಆಶಿಕಾ ರಂಗನಾಥ್
ಕನ್ನಡ ಚಿತ್ರರಂಗದ ಮತ್ತೊಂದು ಸುಂದರಿ ಆಶಿಕಾ ರಂಗನಾಥ್. ಇವರು ನಟಿಸಿದ 'ಅವತಾರ ಪುರುಷ 2' ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿದೆ. 2022ರ ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಈ ವರ್ಷ 'ಅವತಾರ ಪುರುಷ 2' ಹಾಗೂ 'O2' ರಿಲೀಸ್ ಆಗಿದೆ ಅಷ್ಟೇ. ಆದರೂ ಈ ಎರಡೂ ಸಿನಿಮಾಗಳು ಹಳೆ ಕಮಿಟ್‌ಮೆಂಟ್. ಹೀಗಾಗಿ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿಯಿಲ್ಲ.

ಸಪ್ತಮಿ ಗೌಡ
'ಕಾಂತಾರ' ಚಿತ್ರದ ಮೂಲಕ ಬಹಳಷ್ಟು ಜನಪ್ರಿಯತೆ ಪಡೆದ ನಟಿ ಸಪ್ತಮಿ ಗೌಡ. ಲೀಲಾ ಎಂಬ ಪಾತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಬಳಿಕ ಬಿಡುಗಡೆಯಾಗಿದ್ದೇ 'ಯುವ'. ಅದಾಗಲೇ ಪರಭಾಷೆಯ ಸಿನಿಮಾ ಅಂತಿದ್ದಾರಂತೆ. ಇತ್ತ 'ಕಾಳಿ' ಸಿನಿಮಾ ಒಪ್ಪಿಕೊಂಡಿದ್ದರೂ, ಸಿನಿಮಾ ಎತ್ತ ಸಾಗುತ್ತಿದೆ ಅನ್ನೋ ಬಗ್ಗೆ ಮಾಹಿತಿಯಿಲ್ಲ.
ಶ್ರುತಿ ಹರಿಹರನ್
'ಲೂಸಿಯಾ', 'ನಾತಿಚರಾಮಿ' ಅಂತಹ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್ ಕೂಡ ಸೈಲೆಂಟ್ ಆಗಿದ್ದಾರೆ. ಮೀಟು ಪ್ರಕರಣ, ಮದುವೆ, ಮಗು ಬಳಿಕ ಸಿನಿಮಾರಂಗ ಆಗಾಗ ಕಾಣಿಸಿಕೊಳ್ಳುತ್ತಾರಷ್ಟೇ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆ್ಯಕ್ಟಿವ್ ಆಗಿದ್ದಾರೆ.
ಆಶಾ ಭಟ್
ಚಾಲೆಂಜಿಂಗ್ ಸ್ಟಾರ್ ಜೊತೆ 'ರಾಬರ್ಟ್' ಅಂತಹ ಸಕ್ಸಸ್‌ಫುಲ್ ಸಿನಿಮಾಗಳಲ್ಲಿ ನಟಿಸಿರುವ ಆಶಾ ಭಟ್ ಒಂದೇ ಸಿನಿಮಾಗೆ ಸೈಲೆಂಟ್ ಆಗಿಬಿಟ್ಟರು. ಕನ್ನಡ ಫಿಲ್ಮ್ ಮೇಕರ್ಸ್ ಅವಕಾಶ ಕೊಡುತ್ತಲ್ಲವೋ? ಅಥವಾ ಅವರೇ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲವೋ ಗೊತ್ತಿಲ್ಲ.
ಇನ್ನು 'ಟಗರು ಪಲ್ಯ' ಸಿನಿಮಾ ಬಳಿಕ ಸದ್ದು ಮಾಡಿದ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಎರಡನೇ ಸಿನಿಮಾ ಅನೌನ್ಸ್ ಆಗಿಲ್ಲ. ಹಾಗೇ ರೀಷ್ಮಾ ನಾಣಯ್ಯ, ಮೇಘಾ ಶೆಟ್ಟಿ, ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‍ಕುಮಾರ್, ಸಂಜನಾ ಆನಂದ್‍ಗೆ ದೊಡ್ಡ ಪ್ರಾಜೆಕ್ಟ್‌ಗಳು ಸಿಕ್ಕಿಲ್ಲ. ದೊಡ್ಡ ಯಶಸ್ಸು ಕೂಡ ಸಿಕ್ಕಿಲ್ಲ.
ರುಕ್ಮಿಣಿ ವಸಂತ್‌ಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಿದೆ. ಚೈತ್ರಾ ಆಚಾರ್ ಒಬ್ಬರ ಕೈಯಲ್ಲೊಂದಿಷ್ಟು ಸಿನಿಮಾಗಳಿವೆ. ಈ ನಟಿಯರು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಚಾಪು ಮೂಡಿಸಲು ವಿಫಲವರಾಗುತ್ತಿದ್ದಾರೋ? ಸಿನಿಮಾ ಮಂದಿಗೆ ಇವರು ಬೇಡವೋ? ಇಲ್ಲಾ ಕನ್ನಡದ ನಟಿಯರಿಗೇ ಕನ್ನಡ ಸಿನಿಮಾಗಳು ಅನಿಸುತ್ತಿವೆಯೋ? ಅಥವಾ ಇದೆಲ್ಲ ಪ್ಯಾನ್ ಇಂಡಿಯಾ ಎಫೆಕ್ಟ್ ಇರಬಹುದಾ? ಖಂಡಿಯಾ ಗೊತ್ತಿಲ್ಲ.


Click it and Unblock the Notifications











