ಬಿಗ್‌ಬಾಸ್: ಕಿಚ್ಚನ ಮೆಚ್ಚಿನ ಸೀಸನ್ ಯಾವುದು? ಮೆಚ್ಚಿನ ಸ್ಪರ್ಧಿ ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 8 ಫೆಬ್ರವರಿ 28 ರಿಂದ ಪ್ರಸಾರ ಆಗಲಿದೆ. ಶೋ ಬಗ್ಗೆ ಇಂದು ವಿಶೇಷ ಸುದ್ದಿಗೋಷ್ಠಿ ನಡೆದಿದ್ದು, ನಟ ಸುದೀಪ್ ಹಾಗೂ ಆಯೋಜಕ ಪರಮೇಶ್ವರ್ ಗುಂಡ್ಕಲ್ ಅವರುಗಳು ಶೋ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕನ್ನಡ ಬಿಗ್‌ಬಾಸ್ ನ ಈ ವರೆಗಿನ ಎಂಟು ಸೀಸನ್‌ಗಳನ್ನು ಸುದೀಪ್ ಒಬ್ಬರೇ ನಡೆಸಿಕೊಟ್ಟಿದ್ದು. ಇಷ್ಟು ವರ್ಷಗಳಲ್ಲಿ ಸುದೀಪ್ ಅವರ ಮೆಚ್ಚಿನ ಸೀಸನ್ ಯಾವುದು, ಕಷ್ಟದ ಸೀಸನ್ ಯಾವುದಾಗಿತ್ತು, ಇಷ್ಟದ ಸ್ಪರ್ಧಿ ಯಾರಾಗಿದ್ದರು ಎಂಬ ಪ್ರಶ್ನೆಗಳು ಸುದೀಪ್ ಅವರಿಗೆ ಎದುರಾಯಿತು.
ಜಾಣ ಮಾತುಗಾರರಾದ ಸುದೀಪ್ ಅವರು ಮೂರೂ ಪ್ರಶ್ನೆಗಳಿಗೆ ತಮ್ಮದೇ 'ಬ್ಯಾಲೆನ್ಸಿಂಗ್' ಮಾದರಿಯಲ್ಲಿ ಹಾಸ್ಯ ಬೆರೆಸಿ ತೂಕದ ಉತ್ತರಗಳನ್ನು ನೀಡಿದರು ಸುದೀಪ್.

ಸುದೀಪ್ ಗೆ ಇಷ್ಟವಾದ ಸೀಸನ್ ಯಾವುದು?
'ನನಗೆ ಇಷ್ಟವಾದ ಸೀಸನ್ ಬಿಗ್‌ಬಾಸ್‌ನ ಮೊದಲನೇ ಸೀಸನ್. ಏಕೆಂದರೆ ಅದು ನಮ್ಮ ಪಾಲಿಗೆ ಮೊದಲ ಪ್ರಯತ್ನ. ಆಯೋಜಕರಿಗೆ, ಸ್ಪರ್ಧಿಗಳಿಗೆ, ಪ್ರೇಕ್ಷಕರಿಗೆ ಮತ್ತು ನಿರೂಪಕನಾಗಿ ನನಗೂ ಸಹ ಮೊದಲ ಅನುಭವ ಹಾಗಾಗಿ ಅದು ನನಗೆ ಬಹಳ ವಿಶಿಷ್ಟ ಮತ್ತು ಇಷ್ಟವಾದ ಸೀಸನ್ ಆಗಿದೆ' ಎಂದರು ನಟ ಸುದೀಪ್.

ಸುದೀಪ್ ಗೆ ಇಷ್ಟವಾಗದ ಸೀಸನ್ ಯಾವುದು?
ಇಷ್ಟವಾಗದ ಸೀಸನ್ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್. ಬಿಗ್‌ಬಾಸ್ ನ ಆರನೇ ಸೀಸನ್ ನನ್ನ ಪಾಲಿಗೆ ತುಸು 'ಸ್ಟ್ರೆಸ್‌ಫುಲ್' ಆಗಿತ್ತು. ಒಂದು ಘಟನೆ ಒಟ್ಟು ಮನೆಯ ವಾತಾವರಣ ಬದಲಿಸಬಲ್ಲದು. ಹಾಗೂ ಆ ಬಿಗ್‌ಬಾಸ್ ನಲ್ಲಿ ಹಲವು ಉತ್ತಮ ಸ್ಪರ್ಧಿಗಳು ಇದ್ದರು. ಕೆಲವರು ಬೇರೆ ಶೋ ನಲ್ಲಿ ಇದ್ದಿದ್ದರೆ ಗೆಲ್ಲುತ್ತಿದ್ದರು. ಇದು ನನಗೆ ಸ್ಟ್ರೆಸ್ ಫುಲ್ ಎನಿಸಿತು ಎಂದರು ಸುದೀಪ್. ಹಾಗೆಂದ ಮಾತ್ರಕ್ಕೆ ನನಗೆ ಆ ಶೋ ಇಷ್ಟವಿಲ್ಲ ಎಂದೇನಲ್ಲ, ಆ ಶೋ ಸಹ ಚೆನ್ನಾಗಿಯೇ ಇತ್ತು' ಎಂದರು ಸುದೀಪ್.

ಸುದೀಪ್ ಗೆ ಇಷ್ಟದ ಸ್ಪರ್ಧಿ ಯಾರು?
ಇಷ್ಟದ ಸ್ಪರ್ಧಿ ಯಾರು? ಎಂಬ ಪ್ರಶ್ನೆಗೆ, ನನಗೆ ವೈಯಕ್ತಿಕವಾಗಿ ಇಷ್ಟದ ಸ್ಪರ್ಧಿ ಯಾರೂ ಇಲ್ಲ, ಹಾಗೆ ಇರಲೂ ಬಾರದು. ಏಕೆಂದರೆ ನಾನು ಪಕ್ಷಪಾತಿ ಆಗಬಾರದು, ಆಗುವುದಿಲ್ಲ. ಒಂದೊಮ್ಮೆ ನನಗೆ ಇಂಥಹಾ ಸ್ಪರ್ಧಿ ಇಷ್ಟ ಎಂದುಕೊಂಡುಬಿಟ್ಟರೆ ನಾನು ಪಕ್ಷಪಾತಿ ಆಗಿಬಿಡುತ್ತೇನೆ. ಆದರೆ ಚೆನ್ನಾಗಿ ಆಟವಾಡಿದ ಕೆಲವರನ್ನು ಹೆಸರಿಸುವುದಾದರೆ ಅರುಣ್ ಸಾಗರ್, ಹರೀಶ್ ರಾಜ್ ಇನ್ನೂ ಹಲವರು ಇದ್ದಾರೆ ಎಂದರು ಸುದೀಪ್.

'ಯಾರೊಂದಿಗೂ ಕುಳಿತು ಬಿಗ್‌ಬಾಸ್ ನೋಡುವುದಿಲ್ಲ'
ನಾನು ಯಾರೊಂದಿಗೂ ಕೂತು ಬಿಗ್‌ಬಾಸ್ ಶೋ ನೋಡುವುದಿಲ್ಲ. ಮನೆಯಲ್ಲಿ ನನ್ನ ತಾಯಿ ಶೋ ನೋಡುತ್ತಾರೆ ಆದರೆ ಅವರೊಟ್ಟಿಗೂ ಕೂತು ನಾನು ಶೋ ನೋಡುವುದಿಲ್ಲ. ಒಂದೊಮ್ಮೆ ನನ್ನ ತಾಯಿ ಯಾರೋ ಒಬ್ಬ ಸ್ಪರ್ಧಿಯನ್ನು ನೋಡಿ 'ಪಾಪ ಕಣೋ ಆ ಹುಡುಗಿ' ಎಂದು ಹೇಳುಬಿಟ್ಟರೆ ಸಾಕು, ನಾನು ನನ್ನ ತಾಯಿಯ ಭಾವನೆ ಮನಸಿನಲ್ಲಿಟ್ಟುಕೊಂಡು ಜಡ್ಜ್‌ಮೆಂಟ್ ಮಾಡುವ ಸಾಧ್ಯತೆ ಇರುತ್ತದೆ. ನಾನು ಪಕ್ಷಪಾತಿ ಆಗದೇ ಇರಬಾರದೆಂದು ಸದಾ ಎಚ್ಚರಿಕೆಯಿಂದ ಇರುತ್ತೇನೆ ಎಂದರು ಸುದೀಪ್.


Click it and Unblock the Notifications











