ಅಮೃತಧಾರೆಯಲ್ಲಿ ಒಲವಿನ ಧಾರೆ ; ರಾಣವ್ ಮತ್ತು ರಾಧಾ ಹಿನ್ನೆಲೆಯೇನು ? ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ?
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಇನ್ನೂ ಈ ಪ್ರೀತಿ ಯಾರ ಮೇಲಾದರೂ ಯಾವಾಗ ಬೇಕಾದರೂ ಆಗಬಹುದು.
ಅದರಲ್ಲಿಯೂ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ..ಪಾತ್ರಕ್ಕೆ ಜೀವ ತುಂಬುತ್ತಾ, ತುಂಬುತ್ತಾ ಹಲವರು ಪ್ರೇಮಪಾಶದಲ್ಲಿ ಸಿಲುಕಿಕೊಳ್ಳುತ್ತಾರೆ. ಅಭಿನಯಿಸುತ್ತಾ ತಮ್ಮ ಕೋ-ಸ್ಟಾರ್ ಗೆ ಮನ ಸೋಲುತ್ತಾರೆ. ಇದಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಂದ ಹಿಡಿದು ವಿಕ್ರಂ ಸೂರಿ ಮತ್ತು ನಮಿತಾ ರಾವ್‌ವರೆಗೆ ದಿಗಂತ್ ಮತ್ತು ಐಂದ್ರೀತಾ ರೇ ಅವರಿಂದ ಹಿಡಿದು ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್‌ವರೆಗೆ ಹಲವು ಉದಾಹರಣೆಗಳು ಇವೆ. ಈ ಸಾಲಿಗೆ ಈಗ ರಾಣವ್ ಗೌಡ ಮತ್ತು ರಾಧಾ ಭಗವತಿ ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಹೌದು, ರಾಣವ್ ಗೌಡ ಮತ್ತು ರಾಧಾ ಭಗವತಿ. ''ಅಮೃತಧಾರೆ''ಯ ಜೈದೇವ್ ಮತ್ತು ಮಲ್ಲಿ. ''ಅಮೃತಧಾರೆ'' ಧಾರಾವಾಹಿ ಮಾಡುವಾಗಲೇ ಇವರ ಒಲವಿನ ಧಾರೆ ಹರಿಯುತ್ತಿತ್ತು. ಆದರೆ, ಪ್ರೇಕ್ಷಕರಿಗೆ ಅದರ ಸುಳಿವು ಸಿಕ್ಕಿರಲಿಲ್ಲ.
ಆದರೂ ಕೂಡ ಹಲವರು ರಾಣವ್ ಮತ್ತು ರಾಧಾ ಅವರದ್ದು ಒಳ್ಳೆಯ ಜೋಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರಿ. ನಿಜಜೀವನದಲ್ಲಿಯೂ ಇಬ್ಬರು ಗಂಡ ಹೆಂಡ್ತಿಯಾದರೆ ಚೆನ್ನಾಗಿರುತ್ತೆ ಎಂದು ಬಯಸಿದ್ದರು. ಈಗ ಹಲವರ ಆಸೆಯಂತೆಯೇ ರಾಧಾ ಮತ್ತು ರಾಣವ್ ತಮ್ಮ ಬದುಕಿನ ಹೊಸ ಅಧ್ಯಾಯ ಶುರು ಮಾಡಲು ಅಣಿಯಾಗಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ತಮ್ಮ ಹಿತೈಶಿಗಳಿಗೆ, ಅಭಿಮಾನಿಗಳಿಗೆ ತಮ್ಮ ಹಿಂಬಾಲಕರಿಗೆ ಸರ್ ಫ್ರೈಸ್ ನೀಡಿದ್ದಾರೆ.
ರಾಧಾ ಭಗವತಿ ಯಾರು ? ಹಿನ್ನೆಲೆಯೇನು..?
ಅಕ್ಕವ್ರೇ ಅಕ್ಕವ್ರೇ ಎನ್ನುತ್ತಲೇ ''ಅಮೃತಧಾರೆ'' ಮೂಲಕ ಎಲ್ಲರ ಮನವನ್ನು ಗೆದ್ದ ಹಳೆ ಮಲ್ಲಿ ಯಾನೆ ರಾಧಾ ಅವರ ಅಜ್ಜ ರಂಗಭೂಮಿ ಕಲಾವಿದರಾಗಿದ್ದರು. ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಕಲೆ ರಾಧಾ ರಕ್ತದಲ್ಲಿಯೇ ಇತ್ತು.
ಕಲರ್ಸ್ ಕನ್ನಡದ ''ರಾಮಾಚಾರಿ'' ಧಾರಾವಾಹಿಯಲ್ಲಿ ''ರಾಮಾಚಾರಿ'' ತಂಗಿ ಶೃತಿ ಪಾತ್ರವನ್ನು ಮಾಡಿದ್ದ ರಾಧಾ ಮಾಡೆಲ್ ಕೂಡ ಹೌದು. ''ಉಘೇ ಉಘೇ ಮಾದೇಶ್ವರ'' ಇವರು ಅಭಿನಯಿಸಿರುವ ಮತ್ತೊಂದು ಪ್ರಮುಖ ಧಾರಾವಾಹಿ.

ಸದ್ಯ ''ಭಾರ್ಗವಿ ಎಲ್‌ಎಲ್‌ಬಿ'' ಧಾರಾವಾಹಿಯಲ್ಲಿ ಮಿಂಚುತ್ತಿರುವ ರಾಧಾ ಬೆಳ್ಳಿತೆರೆಯಲ್ಲಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ''ವಸಂತಕಾಲದ ಹೂಗಳು'' ಚಿತ್ರದಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. 'ಆ 90 ದಿನಗಳು''.. ತೀರಾ ಇತ್ತೀಚೆಗೆ ಬಿಡುಗಡೆಯಾದ ''ಅಪಾಯವಿದೆ ಎಚ್ಚರಿಕೆ'' ಚಿತ್ರದಲ್ಲಿ ಕೂಡ ರಾಧಾ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಿರುತೆರೆ, ಹಿರಿತೆರೆ, ಮ್ಯೂಸಿಕ್ ಆಲ್ಬಂ ಮಾತ್ರವಲ್ಲದೇ ರಾಧಾ ಹಿನ್ನೆಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಇವರು ಕಂಠದಾನ ಕಲಾವಿದೆ ಕೂಡ ಹೌದು.
ರಾಣವ್ ಗೌಡ ಹಿನ್ನೆಲೆ..?
ರಾಣವ್ ತಿಂದು ಉಂಡು ಮಲಗುವ ವಯಸ್ಸಿನಲ್ಲಿಯೇ ಬಣ್ಣದ ಲೋಕದ ಸೆಳೆತಕ್ಕೆ ಒಳಗಾದರು. ಬಾಲನಟನಾಗಿ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಆರನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಸುಧಾರಾಣಿ ಅವರೊಂದಿಗೆ ''ತುಳಸಿ'' ಸೀರಿಯಲ್‌ನಲ್ಲಿ ನಟಿಸಿದ್ದರು.
ಪಠ್ಯಕ್ಕಿಂತಲೂ ಪಠ್ಯೇತರ ವಿಷಯದಲ್ಲಿ ಆಸಕ್ತಿ ಹೊಂದಿದ್ದ ರಾಣವ್ ಇಂಜಿನಿಯರಿಂಗ್ ಸೇರಿದ್ದರೂ, ಅದನ್ನು ಅರ್ಧಕ್ಕೆ ಬಿಟ್ಟರು. ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ''ಅರಮನೆ'' ಧಾರಾವಾಹಿಯಲ್ಲಿ ನಾಯಕನ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಮರಳಿದ ರಾಣವ್ ಬಿ.ಸುರೇಶ್ ಅವರ ''ಜೀವನದಿ'' ಧಾರಾವಾಹಿಯಲ್ಲಿ ಖಳನಾಯಕನ ಮಗನ ಸ್ನೇಹಿತ ಪಾತ್ರದಲ್ಲಿ ಮಿಂಚಿದ್ದರು.
ಆ ನಂತರ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ ''ರಾಜಕುಮಾರಿ'' ಸೀರಿಯಲ್‌ನಲ್ಲಿ ಎರಡನೇ ನಾಯಕನಾಗಿ ರಾಣವ್ ಗೌಡ ನಟಿಸಿದ್ದರು. ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ''ವರಲಕ್ಷ್ಮೀ ಸ್ಟೋರ್ಸ್''... ''ಮತ್ತೆ ವಸಂತ'' ಧಾರಾವಾಹಿಗಳಲ್ಲಿ ನಟಿಸಿದರು. ಆ ನಂತರ ಜೀ ವಾಹಿನಿಯ ''ಕಮಲಿ'' ಸೀರಿಯಲ್‌ನಲ್ಲಿ ಅಂಬಿ ಅಣ್ಣ ಅಮರ್ ಎಂಬ ಪಾತ್ರದಲ್ಲಿ ರಾಣವ್ ಕಾಣಿಸಿಕೊಂಡರು. ಇವರ ಬದುಕು ಒಂದು ಹಂತದಲ್ಲಿ ಬದಲಾಗಿದ್ದು ಇಲ್ಲಿಯೇ.

ವಿಶೇಷ ಅಂದರೆ ರಾಧಾ ಅವರಂತೆಯೇ ರಾಣವ್ ಕೂಡ ಸಿನಿಮಾಗಳನ್ನು ಮಾಡಿದ್ದಾರೆ. ''ಶ್ರೀಕಂಠ''..''ಮತ್ತೆ ಬಾ ಉಪೇಂದ್ರ''.. ''ವಿರಾಟ್'' ಇವರು ಅಭಿನಯಿಸಿರುವ ಕೆಲ ಪ್ರಮುಖ ಸಿನಿಮಾಗಳು. ಸದ್ಯ ''ಅಮೃತಧಾರೆ'' ಧಾರಾವಾಹಿ ಮೂಲಕ ಜೈದೇವ್ ಎಂದೇ ಕರುನಾಡಿನೆಲ್ಲೆಡೆ ಖ್ಯಾತರಾಗಿದ್ದಾರೆ ರಾಣವ್ ಗೌಡ.
ಇಬ್ಬರ ನಡುವಿನ ವಯಸ್ಸಿನ ಅಂತರ ?
ರಾಧಾ ಮತ್ತು ರಾಣವ್ ಅವರ ನಡುವೆ ಇರುವ ವಯಸ್ಸಿನ ಅಂತರವೆಷ್ಟು ಎನ್ನುವುದು ನಿಖರವಾಗಿ ನಮಗೆ ಗೊತ್ತಿಲ್ಲದೇ ಇದ್ದರೂ ಗೂಗಲ್ ಪ್ರಕಾರ ಇಬ್ಬರ ನಡುವೆ ಒಂದೆರಡು ವರ್ಷಗಳ ಅಂತರ ಇದೆ. ಆ ಪ್ರಕಾರ ರಾಣವ್ ಗೌಡ ಅವರಿಗಿಂತ ರಾಧಾ ವಯಸ್ಸಿನಲ್ಲಿ ದೊಡ್ಡವರು. ರಾಧಾ ಭಗವತಿ ಅವರಿಗೆ ಈಗ 34 ವರ್ಷವಾದರೆ ರಾಣವ್‌ಗೆ ಈಗ 33ರ ಹರೆಯ.
ಇಂಥಾ ರಾಣವ್ ಗೌಡ ಮತ್ತು ರಾಧಾ ಭಗವತಿ ಸದ್ಯ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯ ಇವರ ಹಲವಾರು ಅಭಿಮಾನಿಗಳು ಇವರಿಗೆ ಶುಭ ಕೋರುತ್ತಿದ್ದಾರೆ. ಸದ್ಯ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ಶೀಘ್ರದಲ್ಲಿ ನಡೆಯಲಿದೆ.


Click it and Unblock the Notifications











