ವೀಕ್ಷಕರನ್ನು ರಂಜಿಸಲು ಬಂದ 'ಶಾರದೆ': ಹೊಚ್ಚ ಹೊಸ ಧಾರಾವಾಹಿಯ ನಾಯಕಿಯ ಹಿನ್ನೆಲೆಯೇನು?
ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ ಸ್ಟಾರ್ ಸುವರ್ಣ. 'ಗೌರಿಶಂಕರ', 'ನೀನಾದೆ ನಾ', 'ಶ್ರೀದೇವಿ ಮಹಾತ್ಮೆ', 'ಕಾವೇರಿ ಕನ್ನಡ ಮೀಡಿಯಂ', 'ಆಸೆ', 'ಎಡಿಯೂರು ಶ್ರೀಸಿದ್ಧಲಿಂಗೇಶ್ವರ', 'ಉಧೋ ಉಧೋ ಶ್ರೀರೇಣುಕಾ ಯಲ್ಲವ್ವ', 'ಅವನು ಮತ್ತು ಶ್ರಾವಣಿ' ಹೀಗೆ ಸಾಲು ಸಾಲು ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿದೆ ಸ್ಟಾರ್ ಸುವರ್ಣ. ಇದರ ಜೊತೆಗೆ 'ಪ್ರೀತಿಗಾಗಿ', 'ಅನುಪಮಾ' ಎನ್ನುವ ಡಬ್ಬಿಂಗ್ ಧಾರಾವಾಹಿಗಳು ಕೂಡಾ ವೀಕ್ಷಕರ ಮನ ಸೆಳೆದಿದೆ.
ಇದರ ಜೊತೆಗೆ ಮಗದೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ ಸ್ಟಾರ್ ಸುವರ್ಣ. ಹೌದು, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. 'ಶಾರದೆ' ಎನ್ನುವ ಹೊಸ ಧಾರಾವಾಹಿಯು ಅತೀ ಶೀಘ್ರದಲ್ಲಿ ಶುರುವಾಗಲಿದ್ದು, ಅದರ ಪ್ರೋವೋವನ್ನು ವಾಹಿನಿ ಬಿಡುಗಡೆ ಮಾಡಿದೆ. ಇನ್‌ಸ್ಟಾಗ್ರಾಂನಲ್ಲೂ ಈ ಧಾರಾವಾಹಿಯ ಪ್ರೋಮೋ ಹರಿದಾಡುತ್ತಿದ್ದು ಈಗಾಗಲೇ 11 ಸಾವಿರಕ್ಕೂ ಅಧಿಕ ಜನ ಇಷ್ಟಪಟ್ಟಿದ್ದಾರೆ. ಅದಕ್ಕಿಂತಲೂ ಆಶ್ಚರ್ಯದ ಸಂಗತಿಯೆಂದರೆ 200 ಕ್ಕೂ ಅಧಿಕ ಜನ ಅದನ್ನು ಶೇರ್ ಮಾಡಿದ್ದಾರೆ.

ಧಾರಾವಾಹಿಯ ಪ್ರೋಮೋದಲ್ಲಿ ಅಮ್ಮ, ಮಗಳು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವುದನ್ನು ತೋರಿಸಿದ್ದಾರೆ. ಬಸ್ಸಿನಲ್ಲಿರುವ ಸಹ ಪ್ರಯಾಣಿಕರು ಆ ಪುಟ್ಟ ಹುಡುಗಿಯ ನಿನ್ನ ಹೆಸರು ಏನು ಎಂದು ಕೇಳುತ್ತಾರೆ. ಆಗ ಆ ಪುಟ್ಟು ಹುಡುಗಿ ಹಾಡು ಹೇಳುತ್ತಾ ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಬಸ್ ಇಳಿದ ನಂತರ ಅಮ್ಮ ತನ್ನ ಮಗಳನ್ನು ಒಂದೆಡೆ ಕೂರಿಸಿ ತನ್ನ ಗಂಡನನ್ನು ಹುಡುಕಿಕೊಂಡು ಹೋಗುತ್ತಾಳೆ. ವಿಪರ್ಯಾಸವೆಂದರೆ ಅವನು ಮತ್ತೊಂದು ಮದುವೆಯಾಗಿರುತ್ತಾನೆ.
ಮನೆಗೆ ಬಂದ ಆಕೆಯನ್ನು ನೋಡಿದ ಆತ ನನಗೆ ನೀನು ಬೇಡ ಎಂದು ಸಿಟ್ಟಿನಿಂದ ಹೇಳಿ ಬಾಗಿಲು ಹಾಕಿ ಅವಳನ್ನು ಕಳಿಸುತ್ತಾನೆ. ನಂತರ ಮಗಳ ಬಳಿ ಬಂದ ತಾಯಿಯ ಹತ್ತಿರ ಮಗಳು ಅಮ್ಮ, ಅಪ್ಪ ಎಲ್ಲಿ? ಹಿಂದಿನಿಂದ ಬರ್ತಾ ಇದ್ದಾರಾ ಎಂದು ಕಾತರದಿಂದ ಕೇಳುತ್ತಾಳೆ. ಅಪ್ಪಾ, ಅಪ್ಪಾ ಎಂದು ಕೂಗುತ್ತಾಳೆ. ಆದರೆ ಅಪ್ಪ ಮಾತ್ರ ಬರುವುದಿಲ್ಲ. ಆಗ ಅಮ್ಮ ಇನ್ನು ಮುಂದೆ ಅಮ್ಮ, ಅಪ್ಪ ಎಲ್ಲ ನಾನೇ ಎನ್ನುತ್ತಾಳೆ. ಧಾರಾವಾಹಿಯ ಪ್ರೋಮೋ ಅದ್ಭುತವಾಗಿದ್ದು ಅದೊಂದು ಅಮ್ಮ ಮಗಳ ನಡುವಿನ ಕಥೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಇನ್ನು 'ಶಾರದೆ' ಧಾರಾವಾಹಿಯಲ್ಲಿ ಚೈತ್ರಾ ಸಕ್ಕರಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರಾ ಸಕ್ಕರಿ ಅವರು ಈ ಹಿಂದೆ 'ನಯನತಾರ' ಧಾರಾವಾಹಿಯಲ್ಲಿ ನಯನಾ ಆಗಿ ಅಭಿನಯಿಸಿದ್ದರು. ತದ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಈಕೆ ತಮಿಳು, ತೆಲುಗು ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ.
ಇನ್ನು ಚೈತ್ರಾ ಸಕ್ಕರಿ ಮಗಳಾಗಿ ಬಾಲನಟಿ ಸ್ಫೂರ್ತಿ ಬಣ್ಣ ಹಚ್ಚಿದ್ದಾರೆ. ಅಂದ ಹಾಗೇ ಸ್ಫೂರ್ತಿಗೆ ಇದು ಎರಡನೇ ಧಾರಾವಾಹಿ ಹೌದು. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಚುಕ್ಕಿತಾರೆ' ಧಾರಾವಾಹಿಯಲ್ಲಿ ಈಕೆ ಇಬ್ಬನಿಯಾಗಿ ಕಾಣಿಸಿಕೊಂಡಿದ್ದಳು. ತಮ್ಮ ಸಹಜ ನಟನೆಯ ಮೂಲಕ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನೆ, ಮನ ಸೆಳೆದ ಸ್ಫೂರ್ತಿ 'ಶಾರದೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದು ಕಿರುತೆರೆ ವೀಕ್ಷಕರು ಪ್ರೋಮೋ ಕಂಡು ಖುಷಿಪಟ್ಟಿದ್ದಾರೆ.
ಇನ್ನು ನಾಯಕಿಯ ಗಂಡನಾಗಿ ಕಿರುತೆರೆ ನಟ ರಾಜೇಶ್ ಧ್ರುವ ನಟಿಸಿದ್ದಾರೆ. ಪ್ರೋಮೋ ನೋಡಿದರೆ ರಾಜೇಶ್ ಧ್ರುವ ಅವರದ್ದು ನೆಗೆಟಿವ್ ಶೇಡ್ ಇರುವಂತಹ ಪಾತ್ರ ಎಂದೆನಿಸುತ್ತದೆ. ಮಗಳ ಮತ್ತು ಹೆಂಡತಿ ಎನ್ನುವ ಪ್ರೀತಿಯಿಲ್ಲದೇ ತನ್ನನ್ನು ಹುಡುಕಿಕೊಂಡು ಬಂದ ಆಕೆಯನ್ನು ಮನೆಯಿಂದ ಹೊರದಬ್ಬುತ್ತಾನೆ. ಒಟ್ಟಿನಲ್ಲಿ ಸಂಪೂರ್ಣ ಪಾತ್ರದ ಪರಿಚಯ ಧಾರಾವಾಹಿ ಶುರುವಾದ ಬಳಿಕವೇ ಆಗಬೇಕಷ್ಟೆ. ಒಟ್ಟಿನಲ್ಲಿ ಕಿರುತೆರೆ ವೀಕ್ಷಕರಿಗೆ ವಿಭಿನ್ನ ಮನರಂಜನೆ ನೀಡಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದ್ದು ವೀಕ್ಷಕರು ಖುಷಿಯಿಂದಲೇ ಮನರಂಜನೆಯ ರಸದೌತಣವನ್ನು ಸವಿಯಬಹುದು.


Click it and Unblock the Notifications











