ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿರುವ ನಂ.1 ನಟಿ ಯಾರು?
ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳ ಸಂಭಾವನೆ ಸಾಧಾರಣವಾಗಿ ಕೋಟಿಯ ಮೇಲೆಯೇ ಇರುತ್ತದೆ. ಇದಕ್ಕೆ ಹೀರೋಯಿನ್ಸ್ ಕೂಡ ಹೊರತಲ್ಲ. ಅದರಲ್ಲೂ ಕೆಲವು ಹೀರೋಯಿನ್ಸ್ ಸಂಭಾವನೆಯಲ್ಲಿ ಬಾಲಿವುಡ್‌ನ ಟಾಪ್ ಹೀರೋಗಳ ಜೊತೆಗೆ ಪೈಪೋಟಿಗೆ ನಿಲ್ಲುತ್ತಾರೆ. ಹಾಗಾದರೆ ಬಾಲಿವುಡ್‌ನಲ್ಲಿ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುವ ನಟಿಯರು ಯಾರೆಲ್ಲಾ? ಎಷ್ಟು ಸಂಪಾದಿಸುತ್ತಾರೆ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಚಿತ್ರರಂಗ ಎಂದು ಬಂದಾಗ ನಟರಿಗೆ ಹೆಚ್ಚು ಸಂಪಾದನೆ, ನಟಿಯರಿಗೆ ಕಡಿಮೆ ಸಂಭಾವನೆ ಈ ರೀತಿಯ ಮಾತುಗಳು ಸಾಧಾರಣವಾಗಿ ಕೇಳಿಬರುತ್ತಲೇ ಇರುತ್ತದೆ. ಇದು ವಾಸ್ತವ ಕೂಡ ಹೌದು. ಆದರೂ, ಕೆಲವು ನಟಿಯರು ತಮಗಿರುವ ನಟನಾ ಸಾಮರ್ಥ್ಯದೊಂದಿಗೆ ಅಗಾಧ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸಂಭಾವನೆಯೂ ಅಧಿಕವೇ ದೊರೆಯುತ್ತಿದೆ.

ಅಲ್ಲದೆ, ಇಂದಿನ ಕಾಲದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳೂ ಸಾಕಷ್ಟಿವೆ. ಪ್ರದರ್ಶನ ಕಂಡು ಗೆದ್ದ ಉದಾಹರಣೆಗಳು ಬೇಕಾದಷ್ಟಿವೆ. ಅದೇ ರೀತಿ ಹೀರೋಯಿನ್ಗಳಿಂದ ಚಿತ್ರಗಳಿಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುತ್ತಿರುವುದರಿಂದ ಹೀರೋಯಿನ್ಗಳಿಗೆ ಹೆಚ್ಚಿನ ಮೊತ್ತ ನೀಡಲು ನಿರ್ಮಾಪಕರೂ ತಯಾರಿದ್ದಾರೆ. ಅಂತಹ ಕೆಲವು ನಟಿಯರ ಸಂಭಾವನೆಯ ಕುರಿತಾದ ಮಾಹಿತಿ ಇಲ್ಲಿದೆ.
ದೀಪಿಕಾ ಪಡುಕೋಣೆ
ಸದ್ಯ ಟ್ರೆಂಡ್‌ನಲ್ಲಿರೋ ಹೀರೋಯಿನ್ಗಳ ಪೈಕಿ ದೀಪಿಕಾ ಪಡುಕೋಣೆ ಮಂಚೂಣಿಯಲ್ಲಿದ್ದಾರೆ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಇವರು ಇತ್ತೀಚೆಗಷ್ಟೇ ಕಲ್ಕಿ ಸಿನಿಮಾದ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಪಾತ್ರಕ್ಕೂ ಸೈ ಎಂಬಂತೆ ನಟಿಸುವ ದೀಪಿಕಾ ಮೂಲತಃ ಕನ್ನಡತಿ. ಇವರು ಪ್ರತೀ ಚಿತ್ರಕ್ಕೆ 15ರಿಂದ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರಂತೆ. ಇತ್ತೀಚೆಗೆ ರಿಲೀಸ್ ಆದ 'ಕಲ್ಕಿ 2898 ಎಡಿ' ಚಿತ್ರಕ್ಕೂ ಹೆಚ್ಚಿನ ಸಂಭಾವನೆಯು ಇವರಿಗೆ ದೊರೆತಿದೆ.

ಆಲಿಯಾ ಭಟ್
ದೀಪಿಕಾ ಅವರ ನಂತರ ಲಿಸ್ಟಿನಲ್ಲಿರುವ ಇನ್ನೊಂದು ಟಾಪ್ ಹೀರೋಯಿನ್ ಎಂದರೆ ಅದು ಆಲಿಯಾ ಭಟ್. ಈ ಲಿಸ್ಟ್ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಕೊನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡದ್ದು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ. ಇವರ ಮುಂದಿನ ಚಿತ್ರ ಯಶ್ ರಾಜ್ ಫಿಲ್ಮ್ಸ್ನ ಸ್ಪೈ ಯೂನಿವರ್ಸ್ ಸಿನಿಮಾ. ವಿಶೇಷವೆಂದರೆ, ತಮ್ಮ ಮುಂದಿನ ಸಿನಿಮಾದಲ್ಲಿ ಆಲಿಯಾ ಆಕ್ಷನ್ ಸನ್ನಿವೇಶದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ಮಾತ್ರವಲ್ಲದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ ಅಂಡ್ ವಾರ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ಕರೀನಾ ಕಪೂರ್
ಇವರು ಒಂದು ರೀತಿಯಲ್ಲಿ ಈಗಿನ ಹೊಸ ಜನರೇಶನ್ ಹೀರೋಯಿನ್ ಅಲ್ಲ. ಆದರೆ, ಸರ್ವಕಾಲಕ್ಕೂ ಒಪ್ಪುವಂತೆ ನಟನೆ ಮಾಡುವುದರಲ್ಲಿ, ಟ್ರೆಂಡಿಂಗ್ ನಲ್ಲಿ ಉಳಿದುಕೊಳ್ಳುವುದರಲ್ಲಿ ಕರೀನಾ ಯಶಸ್ವಿಯಾಗಿದ್ದಾರೆ. ಕರೀನಾ ಕಪೂರ್ ಅವರಿಗೆ ಈ ಮೊದಲಿನಷ್ಟು ಬೇಡಿಕೆ ಇಲ್ಲದಿದ್ದರೂ ಇತ್ತೀಚೆಗೆ ತೆರೆಕಂಡ ಅವರ 'ಕ್ರ್ಯೂ' ಸಿನಿಮಾ ಮೆಚ್ಚುಗೆಯನ್ನು ಪಡೆದಿದೆ. ಪ್ರತಿ ಚಿತ್ರಕ್ಕೆ 8 ರಿಂದ 11 ಕೋಟಿ ರೂಪಾಯಿ ಪಡೆದುಕೊಳ್ಳುವ ನಟಿ ಇಂದಿಗೂ ಬಾಲಿವುಡ್‌ನಲ್ಲಿ ಟಾಪ್ ನಟಿಯರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಕತ್ರಿನಾ ಕೈಫ್/ಶ್ರದ್ಧಾ ಕಪೂರ್
ಕತ್ರಿನಾ ಕೈಫ್ ಹಾಗೂ ಶ್ರದ್ಧಾ ಕಪೂರ್ ಅವರು ಒಂದೇ ರೀತಿಯ ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗುತ್ತದೆ. ಪ್ರತಿ ಚಿತ್ರಕ್ಕೆ 8 ರಿಂದ10 ಕೋಟಿ ರೂಪಾಯಿ ತನಕ ಸಂಭಾವನೆಯನ್ನು ಪಡೆದುಕೊಳ್ಳುವ ಇವರು ಹಲವಾರು ಉತ್ತಮ ಚಿತ್ರಗಳನ್ನು ಭಾರತ ಚಿತ್ರರಂಗಕ್ಕೆ ನೀಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಶ್ರದ್ಧಾ ಕಪೂರ್ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದು ಕೂಡ ಟ್ರೆಂಡಿಂಗ್‌ನಲ್ಲಿತ್ತು.
ಇವರನ್ನು ಹೊರತುಪಡಿಸಿ ಕಿಯಾರಾ ಅಡ್ವಾಣಿ, ಕೃತಿ ಸನೋನ್, ಕಂಗನಾ ರಣಾವತ್, ತಾಪ್ಸೀ ಪನ್ನು ಸೇರಿದಂತೆ ಕೆಲವರೆಲ್ಲಾ ಪ್ರತೀ ಸಿನಿಮಾಗೆ 5 ರಿಂದ 8 ಕೋಟಿ ರೂ.ವರೆಗೂ ಸಂಭಾವನೆಯನ್ನು ಪಡೆಯುತ್ತಾರೆ.


Click it and Unblock the Notifications











