ಶೂಟಿಂಗ್ ನೋಡಲು ಹೋಗಿದ್ದವರಿಗೆ ಒಲಿದ ಅವಕಾಶ; ಈ ನಟೀಗ ಕಿರುತೆರೆಯಲ್ಲಿ ಬ್ಯುಸಿ.. ಯಾರೀ ಕಾಫಿ ನಾಡಿನ ಕುವರಿ?
ಮೊದಲ ಧಾರಾವಾಹಿಯಲ್ಲಿಯೇ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಈಕೆ ಕಾಫಿ ನಾಡಿನ ಕುವರಿ. ಮುಂದೆ ಖಳನಾಯಕಿಯಾಗಿ ಭಡ್ತಿ ಪಡೆದ ಈಕೆ ಇದೀಗ ಕಿರುತೆರೆಯ ಖಳನಾಯಕಿಯರಲ್ಲೊಬ್ಬರು. ಅಂದ ಹಾಗೇ ನಾವಿಂದು ಮಾತಾಡುತ್ತಿರುವುದು ನಟಿ ಆರೋಹಿ ನೈನಾ ಬಗ್ಗೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀಗೌರಿ' ಧಾರಾವಾಹಿಯಲ್ಲಿ ನಾಯಕ ಅಪ್ಪು ತಂಗಿ ಅರ್ಚನಾ ಪಾತ್ರದಲ್ಲಿ ನಟಿಸುತ್ತಿರುವ ಆರೋಹಿ ನೈನಾ ಅಚಾನಕ್ ಆಗಿ ನಟನೆಯ ನಂಟು ಬೆಳೆಸಿಕೊಂಡವರು.
ಚಿಕ್ಕಮಗಳೂರಿನ ಚೆಲುವೆ ಆರೋಹಿ ನೈನಾ ಇಂದು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ ನಿಜ. ಆದರೆ ಅವರೆಂದೂ ಕೂಡಾ ನಟಿಯಾಗಬೇಕು ಎಂದು ಅಂದುಕೊಂಡವರಲ್ಲ. ಅಸಲಿಗೆ ಅದು ಅವರಿಗೆ ಆಕಸ್ಮಿಕವಾಗಿ ದೊರೆತಂತಹ ಅವಕಾಶ ಎಂದೂ ಹೇಳಬಹುದು. ಹೌದು, ಚಿಕ್ಕಮಗಳೂರಿನ ಎಸ್ಟೇಟ್ ಒಂದರಲ್ಲಿ ನಡೆಯುತ್ತಿದ್ದ ಶೂಟಿಂಗ್ ನೋಡಲಿ ಹೋಗಿದ್ದ ಆರೋಹಿಗೆ ಅದುವೇ ತನ್ನ ಬದುಕನ್ನು ಬದಲಾಯಿಸುತ್ತದೆ ಎಂದು ತಿಳಿದಿರಲಿಲ್ಲ.

ಶೂಟಿಂಗ್ ನೋಡಲು ಹೋಗಿದ್ದ ಆರೋಹಿ ಅವರನ್ನು ಕಂಡ ಮ್ಯಾನೇಜರ್ ನೀವು ಕೂಡಾ ಯಾಕೆ ನಟಿಸಬಾರದು ಎಂದು ಕೇಳಿದರು. ಅವಕಾಶ ಸಿಕ್ಕರೆ ಬೇಡ ಎನ್ನದೇ ಒಪ್ಪಿಕೊಳ್ಳಿ ಎನ್ನುವ ಕಿವಿಮಾತನ್ನು ಕೂಡಾ ಹೇಳಿದ್ದರು. ಮ್ಯಾನೇಜರ್ ಹೇಳಿದ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಈಕೆ ಆಡಿಶನ್‌ಗಳಲ್ಲಿ ಭಾಗವಹಿಸುವ ನಿರ್ಧಾರವನ್ನು ಮಾಡಿದರು.
ಒಂದಷ್ಟು ಆಡಿಶನ್ ಗಳಿಗೆ ಹೋದ ಬಳಿಕ 'ಇವಳು ಸುಜಾತಾ' ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. 'ಇವಳು ಸುಜಾತಾ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಕಾಫಿ ನಾಡಿನ ಕುವರಿ ನಂತರ ಬದಲಾಗಿದ್ದು ಶೋಭಾಳಾಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ಕಾರ್ಪೋರೆಟರ್ ಕಾವೇರಿ ಸೊಸೆ, ನಾಯಕಿ ಲಹರಿಯ ಅತ್ತಿಗೆ ಶೋಭಾ ಆಗಿ ನಟಿಸಿ ಸೈ ಎನಿಸಿಕೊಂಡರು ಆರೋಹಿ ನೈನಾ.
ಮೊದಲ ಬಾರಿಗೆ ಪ್ರಮುಖ ಪಾತ್ರ ದೊರಕಿದ್ದರೂ, ವಯಸ್ಸಿಗೂ ಮೀರಿದ ಪಾತ್ರವಾದ ಕಾರಣ ನಟಿಸಲು ಸಾಧ್ಯವಾ ಎಂಬ ಭಯ ಸಹಜವಾಗಿ ಮೂಡಿತ್ತು. ಏನಾದರಾಗಲೀ ಪಾತ್ರವನ್ನು ಬಿಡುವ ಮಾತಿಲ್ಲ ಎಂದು ನಿರ್ಧರಿಸಿದ ಆಕೆ ಶೋಭಾ ಆಗಿ ನಟಿಸಿದರು. ಮಾತ್ರವಲ್ಲ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು.

ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡ ಈಕೆ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಹೌದು, ಸಾನಿಯಾ ಆಗಿ ಅಭಿನಯಿಸುತ್ತಿದ್ದ ರಮೋಲಾ ಇದ್ದಕ್ಕಿದ್ದಂತೆ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಆಯ್ಕೆಯಾದವರೇ ಆರೋಹಿ. ಮೊದಲ ಬಾರಿಗೆ ಖಳನಾಯಕಿಯಾಗಿ ಈಕೆ ನಟಿಸಿದ್ದರೂ ಉತ್ತಮವಾಗಿ ನಟಿಸಿದರು.
ಖಡಕ್ ವಿಲನ್ ಆಗಿ ತೆರೆ ಮೇಲೆ ಮಿಂಚಿದ ಆರೋಹಿ ವೀಕ್ಷಕರ ಮೆಚ್ಚುಗೆಗೂ ಪಾತ್ರರಾದರು. ಇದೀಗ 'ಶ್ರೀಗೌರಿ' ಧಾರಾವಾಹಿಯಲ್ಲಿಯೂ ಅರ್ಚನಾ ಎನ್ನುವ ನೆಗೆಟಿವ್ ರೋಲ್‌ನಲ್ಲಿ ನಟಿಸುತ್ತಿರುವ ಈಕೆ ಆ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಈಕೆ ಸಮಯ ಸಿಕ್ಕಾಗಲೆಲ್ಲಾ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಾ ನೆಟ್ಟಿಗರ ಮನ ಸೆಳೆಯುತ್ತಿರುತ್ತಾರೆ.


Click it and Unblock the Notifications











