BBK12: ಸ್ಪಂದನಾಗೆ ವೋಟ್ ಹಾಕ್ತಿರೋದ್ಯಾರು? ಇನ್ನು ಬಿಗ್‌ಬಾಸ್ ಮನೆಯಲ್ಲಿ ಕಳ್ಳೆಪುಟ್ಟಿ ಇರೋದು ಹೇಗೆ?
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್, ಕಾಮೆಂಟ್ ಮಾಡುತ್ತಾರೆ. ವೋಟ್ ಮಾಡಿ ಮನೆಯಲ್ಲೇ ಉಳಿಸುವ ಪ್ರಯತ್ನ ಮಾಡುತ್ತಾರೆ. ಸದ್ಯ ಗಿಲ್ಲಿ ಬಗ್ಗೆ ಕ್ರೇಜ್ ಜೋರಾಗಿದೆ.
ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಕೂಡ ವೀಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಆಗಿದ್ದಾರೆ. 90 ದಿನಗಳ ಕಾಲ ದೊಡ್ಮನೆಯಲ್ಲಿ ಉಳಿದುಕೊಂಡಿದ್ದಾರೆ. 100 ದಿನಗಳ ಕಾಲ ಮನೆಯಲ್ಲಿದ್ದು ಫಿನಾಲೆ ಟಿಕೆಟ್ ಪಡೆದರೂ ಅಚ್ಚರಿ ಪಡಬೇಕಿಲ್ಲ. ಆದರೆ ಸ್ಪಂದನಾ ಅಷ್ಟೇನು ಚೆನ್ನಾಗಿ ಆಡುತ್ತಿಲ್ಲ. ಆಕೆಗಿಂತ ಸಮರ್ಥರಾಗಿದ್ದವರು ಎಲಿಮಿನೇಟ್ ಆಗಿದ್ದಾರೆ, ಅದು ಹೇಗೆ ಸ್ಪಂದನಾ ಇನ್ನು ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

"ಸ್ಪಂದನಾ ಹಾಗೂ ಕಾವ್ಯಾಗಿಂತ ಸೂರಜ್, ಮಾಳು, ಸುಧಿ, ಜಾಹ್ನವಿ ಡಮ್ಮಿ ಆಗಿರೋದಕ್ಕೆ ಸಾಧ್ಯವಿಲ್ಲ" ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆಕೆ ಕಲರ್ಸ್ ಕನ್ನಡ ದತ್ತು ಪುತ್ರಿನಾ? ಎಂದು ವ್ಯಂಗ್ಯವಾಡುತ್ತಿದ್ದಾರೆ. ಇದೇ ವಿಚಾರವನ್ನು ಪ್ರಸ್ತಾಪಿಸಿ ಮಾಳು ಪತ್ನಿ ಬಿಗ್‌ಬಾಸ್ ಶೋವನ್ನು ಟ್ರೋಲ್ ಮಾಡಿದ್ದಾರೆ. ಸ್ಪಂದನಾಗೆ ಭಾರೀ ಅಭಿಮಾನಿ ಬಳಗ ಇದ್ಯಾ? ಆಕೆಗೆ ಯಾರು ವೋಟ್ ಹಾಕುತ್ತಾರೆ? ಎನ್ನುವವರಿಗೆ ಮಹಿಳಾ ಅಭಿಮಾನಿಯೊಬ್ಬರು ಉತ್ತರಿಸಿದ್ದಾರೆ. ಸ್ಪಂದನಾ ಇನ್ನು ಯಾಕೆ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ವೀಡಿಯೋ ಮಾಡಿ ಮಾತನಾಡಿದ್ದಾರೆ.
ಸ್ಪಂದನಾ ಮಳವಳ್ಳಿಯಿಂದ ಬಂದವಳು. ಮಳವಳ್ಳಿ, ಮಂಡ್ಯದವರು ನಮ್ಮೂರ ಹುಡುಗಿ ಎಂದು ವೋಟ್ ಯಾಕೆ ಹಾಕಿರಬಾರದು ಎಂದು ಸ್ಪಂದನಾ ಅಭಿಮಾನಿ ಪ್ರಶ್ನಿಸಿದ್ದಾರೆ. "ಆಕೆ ಬಹಳ ಮುದ್ದಾಗಿ ನೋಡೋಕೆ ಚೆನ್ನಾಗಿದ್ದಾಳೆ. ಚೆನ್ನಾಗಿ ಡ್ರೆಸ್, ಮೇಕಪ್ ಮಾಡ್ಕೊತ್ತಾಳೆ. ಯಾರೊಟ್ಟಿಗೂ ಜಗಳ ಆಡಲ್ಲ. ಕೂಗುಮಾರಿಯಲ್ಲ. ತನ್ನೊಟ್ಟಿಗೆ ಚೆನ್ನಾಗಿ ಇಲ್ಲದವರ ಬಗ್ಗೆ ಕೂಡ ಕೆಟ್ಟದಾಗಿ ಮಾತಾಡಲ್ಲ. ಫುಟೇಜ್‌ಗಾಗಿ ಜಗಳ ಮಾಡಲ್ಲ. ರಕ್ಷಿತಾ, ಧ್ರುವಂತ್ ಕಂಡ್ರೆ ಸ್ಪಂದನಾಗೆ ಆಗಲ್ಲ, ಆದರೂ ಚೆನ್ನಾಗಿಯೇ ಮಾತನಾಡುತ್ತಾಳೆ" ಎಂದು ಮಹಿಳೆ ವಿವರಿಸಿದ್ದಾರೆ.
ಸ್ಪಂದನಾಳದ್ದು ಮೃಧು ವ್ಯಕ್ತಿತ್ವ. ಕನ್ನಡ ಸ್ಪಷ್ಟವಾಗಿದೆ. ಇತ್ತೀಚೆಗೆ ಅಡುಗೆ ಮನೆಗೂ ಹೋಗ್ತಿದ್ದಾಳೆ. ಜೋಗಿ ಪ್ರೇಮ್ ಬಂದಾಗ 'ಸೆಟ್ ಆಗಲ್ಲ ಹೋಗೆ ನಂಗು ನಿಂಗು' ಅಂತ ಧ್ರುವಂತ್ ಜೊತೆ ಚೆನ್ನಾಗಿ ಡ್ಯಾನ್ಸ್ ಮಾಡಿದ್ಲು, ಗಿಲ್ಲಿ-ಕಾವ್ಯಾಗಿಂತ ಅವರಿಬ್ಬರ ಡ್ಯಾನ್ಸ್ ಚೆನ್ನಾಗಿತ್ತು. ಟಾಸ್ಕ್ ಬುಕ್‌ನ ಸ್ಪಂದನಾ ಚೆನ್ನಾಗಿ ಓದುತ್ತಾಳೆ. ಮಾಳುಗೂ ಅಷ್ಟು ಚೆನ್ನಾಗಿ ಓದಲು ಬರಲ್ಲ. ಮಾಳು, ರಕ್ಷಿತಾ ಜೊತೆ ಕ್ಲೋಸ್ ಆಗಿರೋದು, ಸೂರಜ್- ರಾಶಿಕಾ ಜೊತೆ ಟ್ರ್ಯಾಕ್ ಓಪನ್ ಮಾಡಿದ್ದಾರೆ. ಸ್ಪಂದನಾ ಯಾರೊಟ್ಟಿಗೆ ಟ್ರ್ಯಾಕ್ ಓಪನ್ ಮಾಡಿಲ್ಲ, ಹಾಗಾಗಿ ಜನ ಯಾಕೆ ಆಕೆಗೆ ವೋಟ್ ಮಾಡಿ ಸೇವ್ ಮಾಡಿರಬಾರದು" ಎಂದು ಆಕೆ ಕೇಳಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.
ಮೇಲ್ನೋಟಕ್ಕೆ ಸ್ಪಂದನಾ ಸ್ಟ್ರಾಂಗ್ ಕಂಟೆಸ್ಟೆಂಟ್ ಅನ್ನಿಸುತ್ತಿಲ್ಲ. ಕಳೆದ ವೀಕೆಂಡ್ ಕೂಡ ಆಕೆ ಎಲಿಮಿನೇಟ್ ಆಗುತ್ತಾಳೆ ಎಂದೇ ಸಾಕಷ್ಟು ಜನ ಭಾವಿಸಿದ್ದರು. ಅಚ್ಚರಿ ಅಂದರೆ ಸೂರಜ್ ಹಾಗೂ ಮಾಳು ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ. ಸದ್ಯ 9 ಮಂದಿ ಮಾತ್ರ ಮನೆ ಒಳಗೆ ಉಳಿದುಕೊಂಡಿದ್ದಾರೆ. ಈ ವಾರ ಒಬ್ಬರು ಎಲಿಮಿನೇಟ್ ಆಗುವ ನಿರೀಕ್ಷೆಯಿದೆ. ಸ್ಪಂದನಾ ಮನೆಯಿಂದ ಹೊರ ಬಂದರೂ ಅಚ್ಚರಿ ಪಡಬೇಕಿಲ್ಲ.
17ನೇ ಸ್ಪರ್ಧಿಯಾಗಿ ಸ್ಪಂದನಾ ಸೋಮಣ್ಣ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. 'ಕರಿಮಣಿ' ಎಂಬ ಧಾರಾವಾಹಿಯಲ್ಲಿ ನಟಿಸಿ ಮೋಡಿ ಮಾಡಿದ್ದ ಚೆಲುವೆ ದೊಡ್ಮನೆ ಒಳಗೆ ಹೋಗಿದ್ದು ವೀಕ್ಷಕರ ಗಮನ ಸೆಳೆದಿತ್ತು.


Click it and Unblock the Notifications











