ದೊಡ್ಮನೆಯಲ್ಲಿ 'ಡೆವಿಲ್' ಟ್ರೈಲರ್ ಯಾಕೆ ಹಾಕ್ಲಿಲ್ಲ, ಗಿಲ್ಲಿಗೆ ಅನ್ಯಾಯವಾಯ್ತಾ? ರಜತ್ ಹೇಳಿದ್ದೇನು?
ಬಿಗ್‌ಬಾಸ್ ಸೀಸನ್ 12 ಹಲವು ಕಾರಣಗಳಿಂದ ಸುದ್ದಿ ಆಗುತ್ತಿದೆ. ಕೆಲ ವಿವಾದಗಳು ಕೂಡ ಸುತ್ತಿಕೊಂಡಿತ್ತು. ಇನ್ನು ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಕಾಮಿಡಿಗೆ ವೀಕ್ಷಕರು ಮನ ಸೋತಿದ್ದಾರೆ. ಆದರೆ ಅದೊಂದು ವಿಚಾರದಲ್ಲಿ ಗಿಲ್ಲಿಗೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿಗಳು ನಟನೆಯ ಸಿನಿಮಾ ಟ್ರೈಲರ್, ಸಾಂಗ್ ಅವರು ಮನೆಯೊಳಗೆ ಇದ್ದಾಗ ಪ್ರಸಾರ ಮಾಡಿ ಶುಭ ಕೋರಿದ್ದರು. ಕಳೆದ ಸೀಸನ್‌ನಲ್ಲಿ ಉಗ್ರಂ ಮಂಜು ನಟಿಸಿದ್ದ 'ಮ್ಯಾಕ್ಸ್' ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ್ದರು. ಇತ್ತೀಚೆಗೆ ರಾಶಿಕಾ ನಟನೆಯ 'ಪ್ಯಾರ್' ಚಿತ್ರದ ಸಾಂಗ್ ರಿಲೀಸ್ ಮಾಡಲಾಗಿತ್ತು. ಅದಕ್ಕಾಗಿ ನಟ ರವಿಚಂದ್ರನ್ ಮನೆ ಒಳಗೆ ಹೋಗಿದ್ದರು.

ಗಿಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿರುವ 'ಡೆವಿಲ್' ಸಿನಿಮಾ ಬಿಡುಗಡೆ ಆಗಿದೆ. ಚಿತ್ರದ ಟ್ರೈಲರ್ ಅನ್ನು ಬಿಗ್‌ಬಾಸ್ ಮನೆಯಲ್ಲಿ ಯಾಕೆ ಪ್ರದರ್ಶನ ಮಾಡಲಿಲ್ಲ. ಹೀಗೆ ಮಾಡಿದ್ದರೆ ಗಿಲ್ಲಿಗೂ ಖುಷಿ ಆಗುತ್ತಿತ್ತು. ಉಗ್ರಂ ಮಂಜು ಒಂದು ನ್ಯಾಯ, ಗಿಲ್ಲಿಗೆ ಒಂದು ನ್ಯಾಯ ಯಾಕೆ ಎಂದು ಕೆಲವರು ಕೇಳಿದ್ದರು. ಸುದೀಪ್ ಹಾಗೂ ದರ್ಶನ್ ನಡುವೆ ಸ್ನೇಹ ಇಲ್ಲ. ಇಬ್ಬರೂ ದೂರಾಗಿದ್ದಾರೆ. ಹಾಗಾಗಿ ಸುದೀಪ್ ನಿರೂಪಣೆಯ ಕಾರ್ಯಕ್ರಮದಲ್ಲಿ ದರ್ಶನ್ ನಟನೆಯ ಸಿನಿಮಾ ಟ್ರೈಲರ್ ಪ್ರಸಾರ ಮಾಡಲಿಲ್ಲವೇ? ಎಂದು ಕೆಲವರು ಕೇಳಿದ್ದರು.
ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ನಟನೆಯ ಸಿನಿಮಾ ಹಾಡುಗಳನ್ನು ಕೂಡ ಪ್ಲೇ ಮಾಡುವುದಿಲ್ಲ. ಅದೇ ರೀತಿ 'ಡೆವಿಲ್' ಟ್ರೈಲರ್ ಪ್ರಸಾರ ಮಾಡಲಿಲ್ಲ ಎಂದು ಕೆಲವರು ಆರೋಪಿಸಿದ್ದರು. ಈ ಬಗ್ಗೆ ಇದೀಗ ಬಿಗ್‌ಬಾಸ್ ಸ್ಪರ್ಧಿ ರಜತ್ ಮಾತನಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಒಳಗೆ ಹೋಗಿ ಚೆನ್ನಾಗಿ ಆಡಿದ್ದ ರಜತ್ ಈ ಬಾರಿ ಅತಿಥಿಯಾಗಿ ದೊಡ್ಮನೆಗೆ ಹೋಗಿ ಬಂದಿದ್ದಾರೆ.

ರಜತ್ ಕೂಡ ದರ್ಶನ್ ಅಭಿಮಾನಿ. ಈ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇನ್ನು ಬಿಗ್‌ಬಾಸ್ ಮನೆಯಲ್ಲಿ 'ಡೆವಿಲ್' ಟ್ರೈಲರ್ ಯಾರು ಪ್ರಸಾರ ಮಾಡಲಿಲ್ಲ ಎನ್ನುವ ಪ್ರಶ್ನೆಗೆ "ಚಿತ್ರತಂಡದವರು ಕೇಳಿಲ್ಲ. ಅದಕ್ಕೆ ಬಿಗ್‌ಬಾಸ್‌ನಲ್ಲಿ ಟ್ರೈಲರ್" ಹಾಕಿಲ್ಲ ಎಂದು ರಜತ್ ತಿಳಿಸಿದ್ದಾರೆ. ಒಂದ್ಕಾಲದಲ್ಲಿ ಬಿಗ್‌ಬಾಸ್ ವೇದಿಕೆಯಲ್ಲಿ ಸಿನಿಮಾಗಳ ಪ್ರಚಾರ ಮಾಡಲಾಗುತ್ತಿತ್ತು. ಬಳಿಕ ಅದು ನಿಂತಿತ್ತು. ಚಿತ್ರತಂಡ ಮನವಿ ಮಾಡಿಕೊಂಡಾಗ 'ಪ್ಯಾರ್' ಚಿತ್ರಕ್ಕೆ ಮಾಡಿದಂತೆ ಆಗೊಮ್ಮೆ ಈಗೊಮ್ಮೆ ಪ್ರಚಾರ ಮಾಡಲಾಗುತ್ತದೆ. 'ಡೆವಿಲ್' ಚಿತ್ರತಂಡ ಬಿಗ್‌ಬಾಸ್ ಆಯೋಜಕರನ್ನು ಸಂಪರ್ಕಿಸಿದ್ದರೆ ಟ್ರೈಲರ್ ಪ್ರಸಾರ ಮಾಡುತ್ತಿದ್ದರು ಅನ್ನಿಸುತ್ತದೆ ಎಂದು ರಜತ್ ಹೇಳಿದ್ದಾರೆ.
ಡಿಸೆಂಬರ್ 11ರಂದು ತೆರೆಕಂಡಿದ್ದ 'ಡೆವಿಲ್' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಫಸ್ಟ್ ವೀಕೆಂಡ್ ಭರ್ಜರಿ ಓಪನಿಂಗ್ ಪಡೆದಿದ್ದ ಸಿನಿಮಾ ವಾರದ ದಿನಗಳಲ್ಲಿ ಡಲ್ ಆಗಿತ್ತು. 2ನೇ ಭಾನುವಾರ ಸಿನಿಮಾ ಕಲೆಕ್ಷನ್‌ನಲ್ಲಿ ಚೇತರಿಕೆ ಕಂಡುಬಂದಿದೆ. 25 ಕೋಟಿ ರೂ. ನೆಟ್ ಕಲೆಕ್ಷನ್ ಸೇರಿ 35 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.
ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದ್ದಾರೆ. ಮಂಡ್ಯ, ರಾಮನಗರ, ದಾವಣಗೆರೆಗೆ ತೆರಳಿ ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಮತ್ತೊಂದು ಕಡೆ ಕಿಡಿಗೇಡಿಗಳು ಸಿನಿಮಾ ಪೈರಸಿ ಮಾಡಲು ಹವಣಿಸುತ್ತಿದ್ದು ಚಿತ್ರತಂಡ ಅದಕ್ಕೆ ತಿರುಗೇಟು ಕೊಡುತ್ತಿದೆ.


Click it and Unblock the Notifications











