ದಿಢೀರ್ ಬಿಗ್‌ಬಾಸ್ ವಿನ್ನರ್ ಹನುಮಂತ ಲಮಾಣಿ ವಿಕಿಪಿಡಿಯ ಪೇಜ್ ಓಪನ್
ರಾಜ್ಯದಲ್ಲಿ ಈಗ ಬಹಳ ಸುದ್ದಿಯಲ್ಲಿ ಇರುವುದು ಉತ್ತರ ಕರ್ನಾಟಕದ ಪ್ರತಿಭೆ ಹನುಮಂತ ಲಮಾಣಿ. ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತ. ಬರೋಬ್ಬರಿ 5 ಕೋಟಿಗೂ ಅಧಿಕ ಮತಗಳನ್ನು ಪಡೆದು ಹನುಮಂತ ಟ್ರೋಫಿ ಎತ್ತಿ ಹಿಡಿದಿದ್ದಾನೆ. ಅದರ ಬೆನ್ನಲ್ಲೇ ಆತನ ವಿಕಿಪಿಡಿಯ ಪೇಜ್ ಸಹ ಓಪನ್ ಆಗಿಬಿಟ್ಟಿದೆ.
ಜೀ ಕನ್ನಡ ಹುಡುಕಿ ತಂದೆ ಪ್ರತಿಭೆ ಹನುಮಂತ ಲಮಾಣಿ. ಮೂಲತಃ ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದ ಹೈದ. ಚಿಕ್ಕಂದಿನಿಂದಲೂ ಹಾಡುವುದನ್ನು ಕಲಿತಿದ್ದ ಹನುಮಂತ ಕುರಿಗಾಹಿಯಾಗಿದ್ದರು. ತಮ್ಮ ಗಾಯನದಿಂದ ಹುಟ್ಟೂರಲ್ಲಿ ಜನಪ್ರಿಯರಾಗಿದ್ದವರು. ಜೀ ಕನ್ನಡ ಸರಿಗಮಪ 15ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಭಜನೆ ಗೀತೆಗಳು, ಜಾನಪದ ಗೀತೆಗಳನ್ನು ಹಾಡಿ ಮೋಡಿ ಮಾಡಿದ್ದರು. ಸೀಸನ್ ರನ್ನರ್ ಅಪ್ ಸಹ ಆಗಿದ್ದರು.

ಬಳಿಕ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯನ್ನು ಹನುಮಂತ ಏರಿದ್ದರು. ಇದೀಗ ಕಲರ್ಸ್ ಕನ್ನಡ ವಾಹಿನಿಯ ಬಿಗ್‌ಬಾಸ್ ಶೋನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಗೆದ್ದು ಬೀಗಿದ್ದಾರೆ. 21 ದಿನಗಳ ಬಳಿಕ ಮನೆಯೊಳಗೆ ಹೋದ ಹನುಮಂತ 15 ಜನ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದಾರೆ. 50 ಲಕ್ಷ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಹನುಮಂತ ಓದಿದ್ದು 10ನೇ ತರಗತಿವರೆಗೆ ಮಾತ್ರ. ಬಳಿಕ ಕುರಿ ಕಾಯುವುದೇ ಕಾಯಕವಾಗಿತ್ತು. ಕುರಿ ಮೇಯಿಸುವಾಗ ಹಾಡುಗಳನ್ನು ಹಾಡುತ್ತಿದ್ದರು. ಅದು ಜೀ ಕನ್ನಡದ ಸರಿಗಮಪ ವೇದಿಕೆವರೆಗೂ ಕರೆದುಕೊಂಡು ಬಂತು. ಇದೀಗ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ವಿಜೇತನಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮುಗ್ಧತೆ, ನ್ಯಾಯಯುತ ಆಟದಿಂದ ಉಳಿದ ಸ್ಪರ್ಧಿಗಳನ್ನೆಲ್ಲಾ ಹಿಂದಿಕ್ಕಿ ವಿನ್ನರ್ ಆಗಿದ್ದಾರೆ.
ಸದ್ಯ ಹನುಮಂತನ ಬಗ್ಗೆ ಬಿಗ್‌ಬಾಸ್ ಎರಡನೇ ರನ್ನರ್ ರಜತ್ ಮಾತನಾಡಿರುವ ಮಾತು ವೈರಲ್ ಆಗುತ್ತಿದೆ. "ಹನುಮಂತ ಮುಂದೆ ಕರ್ನಾಟಕದಲ್ಲಿ ಗಾಂಧೀಜಿ ನಿಂತುಕೊಂಡ್ರು ಹನುಮಂತನ ಗೆಲ್ಲೋದು, ಇನ್ನು ನಮ್‌ತರ ಊ ಆ ಎನ್ನುವವರು ಹೇಗೆ ಗೆಲ್ತಾರೆ" ಎಂದು ಅವರು ಹೇಳಿದ್ದಾರೆ. ಇದು ಕೊಂಚ ಅತಿಶಯೋಕ್ತಿ ಎನಿಸಿದರೂ ನಿಜ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಇದ್ದಕ್ಕಿದಂತೆ ಹನುಮಂತ ಲಮಾಣಿ ವಿಕಿಪಿಡಿಯ ಪೇಜ್ ಓಪನ್ ಆಗಿದೆ. ಅಂತರ್ಜಾಲದಲ್ಲಿ ಮಾಹಿತಿಗೆ ಸಾಕಷ್ಟು ಜನ ವಿಕಿಪಿಡಿಯದಲ್ಲಿ ಹುಡುಕಾಡುತ್ತಾರೆ. ಖ್ಯಾತನಾಮರ, ಸೆಲೆಬ್ರೆಟಿಗಳ, ದೇಶ, ನಗರ, ಪ್ರಾಣಿ, ಕ್ರೀಡೆಗಳು ಹೀಗೆ ಜನಪ್ರಿಯ ವಿಚಾರಗಳ, ವ್ಯಕ್ತಿಗಳ ಬಗ್ಗೆ ವಿಕಿಪಿಡಿಯ ಪೇಜ್‌ಗಳಿವೆ. ಅದಕ್ಕೆ ವಿಕಿಪಿಡಿಯ ಸದಸ್ಯರು ಮಾಹಿತಿ ಅಪ್‌ಡೇಟ್ ಮಾಡುತ್ತಿರುತ್ತಾರೆ. ಯಾರ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ, ಅವರ ಬಗ್ಗೆ ಮಾಹಿತಿ ತಿಳಿಯಲು ಹುಡುಕಾಡುತ್ತಾರೆ ಅಂತವರ ವಿಕಿಪಿಡಿಯ ಪೇಜ್‌ಗಳು ಶುರುವಾಗುತ್ತದೆ. ಸದ್ಯ ಹನುಮಂತ ಬಿಗ್‌ಬಾಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಆತನ ಹೆಸರಿನಲ್ಲಿ ಪೇಜ್ ತೆರೆಯಲಾಗಿದೆ.
ಹನುಮಂತ ಲಮಾಣಿ ಹೆಸರಿನಲ್ಲಿ ಓಪನ್ ಆಗಿರುವ ವಿಕಿಪಿಡಿಯ ಪೇಜ್‌ನಲ್ಲಿ ಆತನ ಹಿನ್ನೆಲೆ, ಸಾಧನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಅಕ್ಟೋಬರ್ 7, 1993ರಂದು ಹಾವೇರಿಯಲ್ಲಿ ಹುಟ್ಟಿದ ಹನುಮಂತ ಮುಂದೆ ತನ್ನ ಗಾಯನದಿಂದ ಹೆಸರು ಮಾಡಿದ್ದ, ಸರಿಗಮಪ-15 ವೇದಿಕೆ ಏರಿದ್ದು ಬಳಿಕ ಈಗ ಬಿಗ್‌ಬಾಸ್ ಟ್ರೋಫಿ ಗೆದ್ದಿದ್ದು ಹೀಗೆ ಎಲ್ಲಾ ಮಾಹಿತಿ ಅದರಲ್ಲಿದೆ. ಈಗಾಗಲೇ ಸಾಕಷ್ಟು ಜನ ಈ ಪೇಜ್ ಓಪನ್ ಮಾಡಿ ಹನುಮಂತನ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಕೂಡ ಹಾಡು ಹಾಡುವ ಕನಸು ಆತನಿಗಿದೆ.


Click it and Unblock the Notifications











