ಈ ಬಾರಿ ಮನೆಗೆ ಬರುವಂತೆ ''ಜ್ಯೋತಿ ರೈ''ಗೆ ಆಹ್ವಾನ ನೀಡಿದ ಕನ್ನಡದ ''ಬಿಗ್ ಬಾಸ್''...!
ಅಭಿನಯ ಚಕ್ರವರ್ತಿ ಸುದೀಪ್ ಪಾಲಿಗೆ ಬಿಗ್ ಬಾಸ್ ಕೇವಲ ಸೈಡ್ ಪ್ರಾಜೆಕ್ಟ್ ಅಲ್ಲ. ಬದಲಿಗೆ ಅದು ಅವರ ಎರಡನೇ ಮನೆ. ಕಳೆದ ವರ್ಷ ಬಿಗ್ ಬಾಸ್ ನ ಹತ್ತನೇ ಸೀಸನ್ ಆರಂಭವಾಗುವ ಮುನ್ನ ಖುದ್ದು ಸುದೀಪ್ ಈ ಮಾತನ್ನು ಹೇಳಿದ್ದರು ಕೂಡ.
ಇಂಥಾ ಸುದೀಪ್ ಈ ಬಾರಿ ಬಿಗ್ ಬಾಸ್ ನಿರೂಪಣೆಯನ್ನು ಮಾಡ್ತಾರಾ, ಇಲ್ಲವಾ ಅನ್ನುವ ಅನುಮಾನ ಅನೇಕರಲ್ಲಿದೆ. ಸುದೀಪ್ ಬದಲು ಈ ಬಾರಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ನಿರೂಪಕರಾಗಬಹುದು ಎನ್ನುವ ಪುಕಾರು ಹಬ್ಬಿದೆ. ಹಬ್ಬಿರುವ ಈ ಸುದ್ದಿಯ ಸತ್ಯಾಸತ್ಯತೆಯನ್ನು ಖುದ್ದು 'ಬಿಗ್ ಬಾಸ್' ಹೇಳಬೇಕಾದರೂ ಸದ್ಯಕ್ಕೆ ಜ್ಯೋತಿ ರೈ ನಾನಂತೂ ಈ ಆಟಕ್ಕಿಲ್ಲ ಎಂದಿದ್ದಾರೆ.

ಹೌದು, ಅಸಲಿಗೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಿಗ್ ಬಾಸ್ ಆರಂಭಕ್ಕೂ ಮುನ್ನ ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಆ ಪೈಕಿ ಒಂದು ವರ್ಗ 'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಜ್ಯೋತಿ ರೈ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಕಣ್ತುಂಬಿಕೊಳ್ಳುವ ಆಸೆ ವ್ಯಕ್ತಪಡಿಸುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಅಪಪ್ರಚಾರಕ್ಕೊಳಗಾದ ನಂತರ ಜ್ಯೋತಿ ರೈ ಅವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿಯೂ ಇದೆ.
ಹೀಗಾಗಿಯೇ ಮೌನ ಮುರಿದಿರುವ ಜ್ಯೋತಿ ರೈ, ಕನ್ನಡ ಬಿಗ್ ಬಾಸ್‌ನಿಂದ ನನಗೆ ಕರೆ ಬಂದಿದ್ದು ನಿಜಾ. ಆದರೆ.. ನಾನು ಬಂದ ಈ ಅವಕಾಶವನ್ನು ಅಷ್ಟೇ ಗೌರವದಿಂದ ನಾನು ತಿರಸ್ಕರಿಸಿದ್ದೇನೆ ಎಂದಿದ್ಧಾರೆ. ಈಗಾಗಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳ ಬೆಂಬಲಕ್ಕೆ ಮತ್ತು ಬಿಗ್ ಬಾಸ್ ನೀಡಿದ ಅವಕಾಶಕ್ಕೆ ನಾನು ಚಿರಋಣಿ ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜ್ಯೋತಿ ರೈ ಬರೆದುಕೊಂಡಿದ್ದಾರೆ.

ಉಳಿದಂತೆ ಈ ಬಾರಿಯ ಬಿಗ್ ಬಾಸ್‌ನಲ್ಲಿ 'ಬೃಂದಾವನ' ಖ್ಯಾತಿಯ ವರುಣ್ ಆರಾಧ್ಯ.. ಯೂಟ್ಯೂಬರ್ ವರ್ಷಾ ಕಾವೇರಿ.. ತುಕಾಲಿ ಸಂತು ಅವರ ಪತ್ನಿ ಮಾನಸಾ.. ಸುನಿಲ್ ರಾವ್.. ಮೋಕ್ಷಿತಾ ಪೈ.. ರೀಲ್ಸ್ ರೇಷ್ಮಾ.. ಹೀಗೆ ಒಂದಿಷ್ಟು ಹೆಸರುಗಳು ಅಂತೆ-ಕಂತೆ ಸಂತೆಯಲ್ಲಿ ಕೇಳಿ ಬರುತ್ತಿವೆ. ಇವರಲ್ಲಿ ಯಾರೆಲ್ಲ ಬಿಗ್ ಬಾಸ್ ಮನೆಗೆ ಹೋಗ್ತಾರೆ ಅನ್ನುವುದಕ್ಕೆ ಉತ್ತರ ಕಾಲವೇ ನೀಡಲಿದೆ. ಅಂದ್ಹಾಗೇ ಬಿಗ್ ಬಾಸ್ ನ ಹನ್ನೊಂದನೇ ಸೀಸನ್ ಅಕ್ಟೋಬರ್‌ನಲ್ಲಿ ಶುರುವಾಗುತ್ತೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ತೆರೆ ಮರೆಯಲ್ಲಿ ತಯಾರಿ ಭರದಿಂದ ನಡೆಯುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಬಹುದು ಅನ್ನುವ ಕುತೂಹಲ ಕೂಡ ದಿನದಿಂದ ದಿನಕ್ಕೆ ಗರಿಗೆದರುತ್ತಿದೆ.


Click it and Unblock the Notifications











