ಸುದೀಪ್ ಬರ್ತ್‌ಡೆಯಂದು ಸಿಗಲಿದೆಯಾ ಎಲ್ಲರೂ ಕಾತುರದಿಂದ ಕಾಯುತ್ತಿರುವ 'ಬಿಗ್' ನ್ಯೂಸ್
ಸುದೀಪ್ .. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದ ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು.ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಅತ್ಯುತ್ತಮ ನಿರೂಪಕ ಕೂಡ ಹೌದು.
ಇಂಥಾ ಸುದೀಪ್ ಈ ವರ್ಷ ಸೆಪ್ಟೆಂಬರ್ 2ಕ್ಕೆ 52ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸಹಜವಾಗಿ ಅವತ್ತು ಹತ್ತು ಹಲವು ಉಡುಗೊರೆಗಳು ಅಭಿಮಾನಿಗಳಿಗೆ ಸಿಗಲಿವೆ. ಆದರೆ.. ಅವತ್ತು ಕನ್ನಡಿಗರು ಕಾತುರದಿಂದ ಕಾಯುತ್ತಿರುವ 'ಬಿಗ್' ನ್ಯೂಸ್‌ನ ಸುದೀಪ್ ನೀಡುತ್ತಾರಾ..? ಎನ್ನುವ ಪ್ರಶ್ನೆ ಈಗ ಹಲವರಲ್ಲಿದೆ. ಅವತ್ತು 'ಬಿಗ್' ನ್ಯೂಸ್ ಸಿಗುವ ನಿರೀಕ್ಷೆ ಕೂಡ ಇದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಈಗಾಗಲೇ ಪ್ರತಿ ವರ್ಷದಂತೆ ಈ ವರ್ಷ ಕೂಡ ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಕಲರವ ಆರಂಭವಾಗಿದೆ. ಮರಾಠಿ ಮತ್ತು ತಮಿಳು ಹೊರತು ಪಡಿಸಿದರೆ ಎಲ್ಲಾ ಭಾಷೆಯಲ್ಲಿ ''ಬಿಗ್ ಬಾಸ್'' ಭಜನೆ ಶುರುವಾಗಿದೆ.
ಮೋಹನ್ ಲಾಲ್ ಸಾರಥ್ಯದಲ್ಲಿ ''ಮಲಯಾಳಂ''ನಲ್ಲಿ ಈಗಾಗಲೇ ''ಬಿಗ್ ಬಾಸ್'' ಆರಂಭವಾಗಿದ್ದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಹಿಂದಿಯಲ್ಲಿ ಕಳೆದ ಆಗಸ್ಟ್ 24ರಿಂದ ''ಸಲ್ಮಾನ್ ಖಾನ್'' ಮುಂದಾಳತ್ವದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಿದೆ. ತೆಲುಗಿನಲ್ಲಿ ''ನಾಗಾರ್ಜುನ'' ನೇತೃತ್ವದಲ್ಲಿ ಈ ಸೆಪ್ಟೆಂಬರ್ 7ರಿಂದ ''ಬಿಗ್ ಬಾಸ್'' ಆರಂಭವಾಗಲಿದೆ. ಆದರೆ.. ಕನ್ನಡದಲ್ಲಿ..?
ಕನ್ನಡದಲ್ಲಿ ಮಾತ್ರ ಈ ಕಾರ್ಯಕ್ರಮದ ಸುಳಿವು ಇಲ್ಲ.ಕಾರ್ಯಕ್ರಮದ ಪ್ರಸಾರದ ದಿನಾಂಕ ಬಹಿರಂಗವಾಗಿಲ್ಲ. ಇಲ್ಲಿಯವರೆಗೆ ಒಂದೇ ಒಂದು ಪ್ರೋಮೋ ಕೂಡ ಹೊರ ಬಂದಿಲ್ಲ. ಈ ಬಾರಿಯ ಕಾರ್ಯಕ್ರಮದ ಥೀಮ್ ಏನು ಎನ್ನುವುದು ಕೂಡ ಗೊತ್ತಾಗಿಲ್ಲ. ಕೇವಲ ಲೋಗೋ ಮಾತ್ರ ಬಿಡುಗಡೆಯಾಗಿದೆ.
ಹೀಗಾಗಿ ಕನ್ನಡದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಎಂದಿನಿಂದ ಶುರುವಾಗಲಿದೆ ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿದೆ. ಇವೆಲ್ಲ ಪ್ರಶ್ನೆಗಳಿಗೆ ಈ ಸೆಪ್ಟೆಂಬರ್ 2ರಂದು ಉತ್ತರ ಸಿಗುವ ನಿರೀಕ್ಷೆ ಇದೆ.

ಹೌದು, ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ, ಕನ್ನಡದ ''ಬಿಗ್ ಬಾಸ್'' ಸುತ್ತ ಇರುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವು ಸಾಧ್ಯತೆ ಇದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಕೂಡ ಆಗಿದ್ದು ಅವತ್ತು ಉಡುಗೊರೆಯ ರೂಪದಲ್ಲಿ ನಯಾ ''ಬಿಗ್ ಬಾಸ್''ನ ಚೊಚ್ಚಲ ಪ್ರೋಮೋವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಕನ್ನಡ ''ಬಿಗ್ ಬಾಸ್''ನ ಪ್ರೋಮೋದ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದು, ಈ ಬಾರಿಯ ಪ್ರೋಮೋ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂಬ ಸುದ್ದಿ ಇದ್ದು, ಸೆಪ್ಟೆಂಬರ್ 2ರಂದು ಪ್ರೋಮೋ ಬಿಡುಗಡೆಯಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ.. ಬಿಡುಗಡೆಯಾಗಲಿರುವ ಈ ಪ್ರೋಮೋ ಈ ಬಾರಿಯ ಕಾರ್ಯಕ್ರಮದ ಥೀಮ್‌ನ್ನು ಒಳಗೊಂಡಿರುತ್ತಾ..? ಕಾರ್ಯಕ್ರಮದ ಪ್ರಸಾರದ ದಿನಾಂಕವನ್ನು ಕೂಡ ಅವತ್ತೇ ಬಹಿರಂಗಗೊಳಿಸಲಾಗುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನುಳಿದಂತೆ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ಬೆಂಗಳೂರಿನ ದೊಡ್ಡ ಆಲದ ಮರದಿಂದ ಬೆಂಗಳೂರಿನ ಹೊರ ವಲಯದಲ್ಲಿರುವ ಅಂದಿನ 'ಇನ್ನೋವೇಟಿವ್ ಫಿಲ್ಮ್ ಸಿಟಿ' ಆಗಿದ್ದ ಇಂದಿನ 'ಜಾಲಿವುಡ್'ಗೆ ಸ್ಥಳಾಂತರ ಮಾಡಲಾಗಿದೆ. ಈ ಬಾರಿ ಮನೆ ಹೇಗಿರಲಿದೆ..? ಮನೆಗೆ ಯಾರೆಲ್ಲಾ ಬರಲಿದ್ದಾರೆ..? ಎನ್ನುವ ಕುತೂಹಲ ಕೂಡ ಹಲವರಲ್ಲಿದೆ.


Click it and Unblock the Notifications











