ಈ ಬಾರಿ ಬಿಗ್ ಬಾಸ್ ಮನೆಗೆ ಹೋಗ್ತಾರಾ ಕೌಸಲ್ಯ ಸುಪ್ರಜಾ ರಾಮ ನಾಯಕಿ ಬೃಂದಾ ಆಚಾರ್ಯ..?
ವರ್ಷಾನುವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಆಚೀಚೆ, ಈ ಬಾರಿ ಮನೆಯಲ್ಲಿ ಯಾರನ್ನೆಲ್ಲ ಕಣ್ತುಂಬಿಕೊಳ್ಳಬಹುದು ಎನ್ನುವ ಚಿಂತೆ ಕೆಲವರನ್ನು ಕಾಡಲು ಶುರುಮಾಡುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲು ಇನ್ನೂ ಒಂದೆರಡು ತಿಂಗಳು ಬಾಕಿ ಇರುವಾಗಲೇ ಕೆಲ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸದ್ದು ಮಾಡಲು ಶುರು ಮಾಡುತ್ತವೆ.
ಈ ಬಾರಿ ಕೂಡ ಇದೇ ತರಹದ ವಾತಾವರಣ ಇದೆ. ಬೃಂದಾವನ ಖ್ಯಾತಿಯ ವರುಣ್ ಆರಾಧ್ಯ.. ಯೂಟ್ಯೂಬರ್ ವರ್ಷಾ ಕಾವೇರಿ.. ತುಕಾಲಿ ಸಂತು ಅವರ ಪತ್ನಿ ಮಾನಸಾ.. ಸುನಿಲ್ ರಾವ್.. ಮೋಕ್ಷಿತಾ ಪೈ.. ರೀಲ್ಸ್ ರೇಷ್ಮಾ.. ಹೀಗೆ ಕೆಲ ಹೆಸರುಗಳು ಈ ಬಾರಿಯ ಕನ್ನಡ ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ. ಇವರಲ್ಲಿ ನಿಜಕ್ಕೂ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇನ್ನೊಂದು ಮೂರು ನಾಲ್ಕು ದಿನದಲ್ಲಿ ಸಿಗಲಿದೆಯಾದರೂ ಸದ್ಯಕ್ಕೆ ಬೃಂದಾ ಆಚಾರ್ಯ ಹೆಸರು ಕೂಡ ಬಿಗ್ ಬಾಸ್ ಸ್ಫರ್ಧಿಗಳ ಲಿಸ್ಟ್‌ನಲ್ಲಿ ಸೇರಿಕೊಂಡಿದೆ.

ಹೌದು, ಬೃಂದಾ ಆಚಾರ್ಯ .. ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಬೆಳಕಿಗೆ ಬಂದು ಆ ನಂತರ ಜ್ಯೂಲಿಯೆಟ್ 2, ಕೌಸಲ್ಯ ಸುಪ್ರಜಾ ರಾಮ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಬೃಂದಾ ಸದ್ಯಕ್ಕೆ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೇರಬೇಕೆಂದುಕೊಂಡಿದ್ದಾರೆ. ಆ ದಿಸೆಯಲ್ಲಿ ಹೆಜ್ಜೆ ಹಾಕುತ್ತಾ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆ ಪೈಕಿ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಮತ್ತು X & Y ಬಿಡುಗಡೆಗೆ ಸಿದ್ಧವಾಗುತ್ತಿವೆ.
ಹೀಗಿರುವಾಗ ಅದ್ಯಾರೋ ಬೃಂದಾ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪುಕಾರು ಹಬ್ಬಿಸಿದ್ದಾರೆ. ಇದಕ್ಕೀಗ ಖುದ್ದು ಬೃಂದಾ ಆಚಾರ್ಯ ಉತ್ತರವನ್ನು ನೀಡಿದ್ದಾರೆ. ನಾನು ಈ ಆಟಕ್ಕಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಹೌದು, ಸಿನಿ ಚಿಂತಕ ಜೊತೆ ಮಾತನಾಡಿರುವ ಬೃಂದಾ ಆಚಾರ್ಯ, ನನಗೆ ಪ್ರತಿ ವರ್ಷ ಬಿಗ್ ಬಾಸ್ ಮನೆಯಿಂದ ಕರೆ ಬರುತ್ತೆ. ಈ ವರ್ಷ ಕೂಡ ಬಂದಿತ್ತು. ಆದರೆ ನಾನು ಹೋಗಲ್ಲ ಎಂದು ಹೇಳಿದ್ದಾರೆ. ನಾನು ನೆಮ್ಮದಿಯಿಂದ ಕುಳಿತು ಆ ಮನೆಯ ಆಟವನ್ನು ನೋಡ್ತೇನೆ ಆದರೆ ನನಗೆ ಚೆನ್ನಾಗಿ ಆಡಲು ಬರಲ್ಲ ಎಂದು ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವವರಿಗೆಲ್ಲ ಆಲ್ ದ್ ಬೆಸ್ಟ್ ಎಂದು ಕೂಡ ಹೇಳಿದ್ದಾರೆ ಬೃಂದಾ ಆಚಾರ್ಯ.
ಅಂದ್ಹಾಗೇ ಈ ಬಾರಿ ಬಿಗ್ ಬಾಸ್ ನಲ್ಲಿ ಬದಲಾವಣೆ ಮಾಡಲಾಗಿದೆ. ಸ್ವರ್ಗ ಮತ್ತು ನರಕ ಎಂದು ಎರಡು ತಂಡಗಳನ್ನಾಗಿ ವಿಗಂಡಿಸಿ ಮನೆಯೊಳಗೆ ಮೊದಲೇ ಕಳುಹಿಸಲಾಗುತ್ತಿದೆ. ಹೀಗಾಗಿ ಕಾರ್ಯಕ್ರಮ ಆರಂಭವಾಗುವ ಒಂದು ದಿನದ ಮುನ್ನವೇ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಫರ್ಧಿಗಳ ಹೆಸರನ್ನು ಬಹಿರಂಗ ಮಾಡಲು ಈ ಬಾರಿ ಬಿಗ್ ಬಾಸ್ ತಂಡ ನಿರ್ಧಾರ ಮಾಡಿದೆ. ಈ ಮೂಲಕ ಯಾರು ಸ್ವರ್ಗಕ್ಕೆ ಹೋಗಬೇಕು, ಯಾರು ನರಕಕ್ಕೆ ಹೋಗಬೇಕು ಎನ್ನುವುದನ್ನು ಮತದಾನದ ಮೂಲಕ ನೀವೇ ನಿರ್ಧಾರ ಮಾಡಿ ಎಂಬ ಆಯ್ಕೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಉಳಿದಂತೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಈ ಸೆಪ್ಟೆಂಬರ್ 29ರಿಂದ ಅದ್ದೂರಿಯಾಗಿ ಶುರುವಾಗಲಿದೆ. ಪ್ರತಿ ದಿನ ರಾತ್ರಿ 09-30ರಿಂದ ನೀವು ಈ ಕಾರ್ಯಕ್ರಮವನ್ನು ನೋಡಬಹುದು.


Click it and Unblock the Notifications











