ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುತ್ತಾರಾ ಈ ಸ್ಟಾರ್ ? ಬಿಡುಗಡೆಯಾದ ಹೊಸ ಲೋಗೋದಲ್ಲಿದೆ ಸುಳಿವು..!
ಹಿಂದಿಯಲ್ಲಿ ಜನಪ್ರಿಯವಾದ ನಂತರ ಬಿಗ್ ಬಾಸ್ ದಕ್ಷಿಣದ ಭಾಷೆಗಳಲ್ಲಿ ಆರಂಭವಾಗಿತ್ತು.ಕನ್ನಡದ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೊಂದು ವರ್ಷದಿಂದ ಸುದೀಪ್ ವಹಿಸಿಕೊಂಡಿದ್ದರೆ ತೆಲುಗಿನಲ್ಲಿ ನಾಗಾರ್ಜುನ ಉಸ್ತುವಾರಿಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ಕಮಲ್ ಹಾಸನ್ ಕಳೆದ ವರ್ಷದಿಂದ ವಿಜಯ್ ಸೇತುಪತಿ ಅವರಿಗೆ ವಹಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.
ಇಂಥಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಳೆದ ವರ್ಷ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದರು. ಹನ್ನೊಂದು ವರ್ಷದ ಸಂಬಂಧ ಕಡಿದುಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸುದೀಪ್ ಬದಲು ಬಿಗ್ ಬಾಸ್ ನಿರೂಪಣೆಯನ್ನು ಯಾರು ಮಾಡುತ್ತಾರೆ ಎನ್ನುವ ಕುತೂಹಲ ಅನೇಕರಲ್ಲಿ ಸದ್ಯ ಇದೆ.

ಇದಕ್ಕೆ ಪೂರಕವಾಗಿ ರಿಷಭ್ ಶೆಟ್ಟಿ ಅವರಿಂದ ಹಿಡಿದು ಗೋಲ್ಡನ್ ಸ್ಟಾರ್ ಗಣೇಶ್‌ವರೆಗೆ ಕೆಲ ಹೆಸರುಗಳು ಕೇಳಿ ಬರುತ್ತಿವೆ. ಇದರ ನಡುವೆ ತೆಲುಗಿನಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮದ ಸಾರಥಿ ಈ ವರ್ಷ ಯಾರಾಗುತ್ತಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ. ತಮಿಳು ಮತ್ತು ಮಲಯಾಳಂನಲ್ಲಿ ಕೂಡ ಯಾರು ಬಿಗ್ ಬಾಸ್ ಹೋಸ್ಟ್ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಮಲಯಾಳಂನಲ್ಲಿ ಉತ್ತರವೂ ಕೂಡ ಸಿಕ್ಕಿದೆ.
ಹೌದು, ಅಸಲಿಗೆ ಈ ಬಾರಿ ಮಲಯಾಳಂನಲ್ಲಿ ಮೋಹನ್ ಲಾಲ್, ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಈ ಅನುಮಾನ ಈಗ ದೂರವಾಗಿದೆ. ಬಿಗ್ ಬಾಸ್ ಸೀಸನ್ 7ರ ಹೊಸ ಲೋಗೋವನ್ನು ಸದ್ಯ ಅನಾವರಣ ಮಾಡಲಾಗಿದ್ದು ಒಂದು ಬದಿಯಲ್ಲಿ 'ಎಲ್' ಅಂದರೆ ಲಾಲೆಟ್ಟನ್ { ಮೋಹನ್ ಲಾಲ್ } ಎಂಬರ್ಥದಲ್ಲಿ ವಿನ್ಯಾಸ ಮಾಡಲಾಗಿದೆ. ಮತ್ತೊಂದು ಬದಿಯಲ್ಲಿ ಈ ಬಾರಿಯ್ ಬಿಗ್ ಬಾಸ್ 7ನೇ ಆವೃತ್ತಿ ಎನ್ನುವಂತೆ ಸಂದೇಶವನ್ನು ಕೂಡ ನೀಡಲಾಗಿದೆ.
ಸದ್ಯ ಈ ಚಿಕ್ಕ ಪ್ರೋಮೋ ಮಲಯಾಳಂ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕೂಡ ಸಂಚಲನ ಸೃಷ್ಟಿಸಿದೆ. ಬಿಗ್ ಬಾಸ್ ನಿರೂಪಕರಾಗಿ ಮೋಹನ್ ಲಾಲ್ ಮುಂದುವರೆಯುವ ಮನಸು ಮಾಡಿದ್ದಕ್ಕೆ ಅನೇಕರು ತಮ್ಮ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಸಾಮಾನ್ಯವಾಗಿ ಬಿಗ್ ಬಾಸ್‌ನ ಕಲವರ ಪ್ರತಿ ಬಾರಿ ಜೂನ್ ಅಂತ್ಯಕ್ಕೆ ಶುರುವಾಗುತ್ತೆ. ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಕಾಣಸಿಗಲಿದ್ದಾರೆ ಎಂದು ಒಂದು ವರ್ಗ ಅಂತೆ ಕಂತೆಯ ಸಂತೆಯಲ್ಲಿ ಆ ನಂತರ ಮಾತನಾಡುತ್ತೆ. ಆದರೆ ಈ ಬಾರಿ ಬಿಗ್ ಬಾಸ್ ಮಲಯಾಳಂನಲ್ಲಿ ಬಹುಬೇಗ ಶುರುವಾಗುವ ಲಕ್ಷಣ ಕಂಡು ಬರುತ್ತಿದೆ. ತೆಲುಗು ಬಿಗ್ ಬಾಸ್ ಆರಂಭವಾಗುವ ಮುನ್ನವೇ ಮಲಯಾಳಂನಲ್ಲಿ ಬಿಗ್ ಬಾಸ್ ಶುರುವಾಗುವ ಸಾಧ್ಯತೆಗಳಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಸ್ಫರ್ಧಿಗಳ ಆಯ್ಕೆಯನ್ನು ಈಗಾಗಲೇ ಕೇರಳದಲ್ಲಿ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಒಟ್ನಲ್ಲಿ ಸದ್ಯ ಬಿಗ್ ಬಾಸ್‌ಗೆ ಎಲ್ಲ ಭಾಷೆಗಳಲ್ಲಿ ವೇದಿಕೆ ಸಜ್ಜಾಗುತ್ತಿದ್ದು ಮಲಯಾಳಂನಲ್ಲಿ ಈ ಬಾರಿ ಕೂಡ ಮೋಹನ್ ಲಾಲ್ ಬಿಗ್ ಬಾಸ್ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಕೂಡ ಈ ಸಲ ಬಿಗ್ ಬಾಸ್ ನಿರೂಪಕ ಬದಲಾಗಲಿದ್ದಾರೆ ಎನ್ನುವ ಸುದ್ದಿ ಇದ್ದು ಕನ್ನಡದಲ್ಲಿ ಸುದೀfಪ ಅವರ ಬದಲು ಯಾರು ನಿರೂಪಣೆ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಉತ್ತರ ಶೀಘ್ರದಲ್ಲಿಯೇ ಗೊತ್ತಾಗಲಿದೆ. ಮಲಯಾಳಂ ಬಿಗ್ ಬಾಸ್‌ನ ಆರಂಭದ ದಿನ ಕೂಡ ಶೀಘ್ರದಲ್ಲಿಯೇ ರಿವೀಲಾಗಲಿದೆ.


Click it and Unblock the Notifications











