'ಬಿಗ್ ಬಾಸ್'ಗೆ ರವಿ ಬೆಳಗೆರೆ; ಹಬ್ಬಿದ ಸುದ್ದಿಯೂ, ಕುತೂಹಲ ಮೂಡಿಸಿದ ಪ್ರತಿಕ್ರಿಯೆಯೂ...
ಇನ್ನು ಕೆಲವೇ ದಿನಗಳಲ್ಲಿ ಮೂರು ತಿಂಗಳ ಮನೋರಂಜನಾ ಕಾರ್ಯಕ್ರಮ 'ಬಿಗ್ ಬಾಸ್' ಶುರು ಆಗುತ್ತಿದೆ. ಆರು ಸೀಸನ್ ಗಳ ನಂತರ ಏಳನೇ ಆವೃತ್ತಿಗೆ ಎಲ್ಲ ತಯಾರಿಗಳು ನಡೆಯುತ್ತಿದೆ. ಇದರ ಜೊತೆ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸ್ಪರ್ಧಿಗಳ ಬಗ್ಗೆ ಕೆಲವು ಸುದ್ದಿ ಹರಿದಾಡುತ್ತಿದೆ.
ಈ ಬಾರಿ 'ಬಿಗ್ ಬಾಸ್' ಮನೆಗೆ ಹೋಗುವ ಸ್ಪರ್ಧಿಗಳ ಪೈಕಿ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕೂಡ ಒಬ್ಬರು ಎನ್ನುವ ಸುದ್ದಿಯೊಂದು ಈಗ ಹೊರಬಿದ್ದಿದೆ. ಕಾರ್ಯಕ್ರಮಕ್ಕೆ ಬರುವ ಸ್ಪರ್ಧಿಗಳ ಜೊತೆಗೆ ಈಗಾಗಲೇ ಮಾತುಕತೆಗಳು ನಡೆಯುತ್ತಿದ್ದು, ರವಿಬೆಳಗೆರೆಗೆ ಜೊತೆಗೂ ಚರ್ಚೆಗಳು ನಡೆದಿವೆ, ಒಂದು ವಾರದ ಮಟ್ಟಿಗೆ ಹಿರಿಯ ಪತ್ರಕರ್ತ ಬಿಗ್ ಬಾಸ್ ಮನೆಯ ಕ್ಯಾಮೆರಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಆಪ್ತ ಮೂಲಗಳು ನೀಡುವ ಮಾಹಿತಿ.

'ಬಿಗ್ ಬಾಸ್' ಆಟದಲ್ಲಿ ರವಿ ಬೆಳಗೆರೆ
ಜನಪ್ರಿಯತೆ, ವಿವಾದ, ಜಗಳ, ಟೀಕೆ, ನಿಂದನೆ, ಗಾಸಿಪ್‌ಗಳಿಗೆ ಮನರಂಜನೆ ಮುಸುಗು ತೊಡಿಸಿ ಜನರಿಗೆ ಉಣಬಡಿಸುವ 'ಬಿಗ್ ಬಾಸ್' ಶೋಗೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಹೋಗುತ್ತಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಬೆಳೆಗೆರೆ ಜೊತೆಗೆ ಮಾತನಾಡಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ವೈಲ್ಡ್ ಕಾರ್ಡ್ ಎಂಟ್ರಿ
ಹಾಗಂತ ಬೆಳಗೆರೆ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಡುತ್ತಿಲ್ಲವಂತೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಡ ಮನೆಗೆ ಪ್ರವೇಶ ಪಡೆಯುವ ರವಿ ಬೆಳಗೆರೆ, ಒಂದು ವಾರ ಮಾತ್ರ ಶೋನಲ್ಲಿ ಇರಲಿದ್ದಾರೆ. ಏಳು ದಿನಗಳ ಕಾಲ ಮಾತ್ರ ಮನೆಯಲ್ಲಿ ಇರಲಿದ್ದಾರೆ ಎಂಬುದು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ.

ಪ್ರಬಲ ಸ್ಪರ್ಧಿಗಳ ಅಗತ್ಯ ವಾಹಿನಿಗೂ ಇದೆ
'ಬಿಗ್ ಬಾಸ್' ಕಾರ್ಯಕ್ರಮ ಕಳೆದ ಎರಡ್ಮೂರು ಸೀಸನ್ ಗಳು ಹಿನ್ನಡೆ ಅನುಭವಿಸಿವೆ. ಹಿಂದಿನ ಆವೃತ್ತಿಗಳಲ್ಲಿ ಪ್ರಬಲವಾದ ಸ್ಪರ್ಧಿಗಳ ಕೊರತೆ ಕಾಡುತ್ತಿತ್ತು. ಟಿ ಆರ್ ಪಿ ಕಡಿಮೆ ಆಗಲು ಇದು ಕೂಡ ಒಂದು ಕಾರಣ ಆಗಿತ್ತು. ಹೀಗಾಗಿ ಈ ಬಾರಿ ರವಿ ಬೆಳಗೆರೆ ತರಹದ ಖ್ಯಾತಿಗಳಿಸಿರುವ ವ್ಯಕ್ತಿಗಳ ಅವಶ್ಯಕತೆ ಕಾರ್ಯಕ್ರಮಕ್ಕೂ ಇದೆ. ಆ ಕಾರಣ ಇಂತಹ ಪ್ರಯತ್ನಕ್ಕೆ ವಾಹಿನಿ ಮುಂದಾಗಿರಬಹುದು ಎಂಬುದು ಮಾರುಕಟ್ಟೆಯ ವಿಶ್ಲೇಷಣೆ.

ಸೀಸನ್ 3 ನಲ್ಲಿ ಭಾಗಿಯಾಗಿದ್ರು ರವಿ ಬೆಳಗೆರೆ ಪುತ್ರಿ
'ಬಿಗ್ ಬಾಸ್ ಕಾರ್ಯಕ್ರಮದ ಸೀಸನ್ 3' ನಲ್ಲಿ ರವಿ ಬೆಳೆಗೆರೆ ಪತ್ರಿ ಭಾವನ ಬೆಳಗೆರೆ ಭಾಗಿಯಾಗಿದ್ದರು. ಮಾಸ್ಟರ್ ಆನಂದ್, ರೆಹಮಾನ್, ಪೂಜಾ ಗಾಂಧಿ, ಚಂದನ್ ಜೊತೆಗೆ ಸ್ಪರ್ಧಿಗೆ ಇಳಿದಿದ್ದರು. ಕಾರ್ಯಕ್ರಮದ 10ನೇ ವಾರ ಭಾವನೆ ಬೆಳೆಗೆರೆ ಹೊರ ಬಂದಿದ್ದರು.

ಅಕ್ಟೋಬರ್ 20 ರಿಂದ ಶುರು
'ಬಿಗ್ ಬಾಸ್ ಸೀಸನ್ 7' ಕಾರ್ಯಕ್ರಮ ಅಕ್ಟೋಬರ್ 20 ರಿಂದ ಶುರು ಆಗುತ್ತಿದೆ. ಈ ಬಾರಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಲಾಗಿಲ್ಲ. ಸುದೀಪ್ ಸಾರಥ್ಯ ಈ ಬಾರಿಯೂ ಮುಂದುವರೆದಿದೆ. ಕಲರ್ಸ್ ಸೂಪರ್ ನಿಂದ ಕಲರ್ಸ್ ವಾಹಿನಿಗೆ ಬಿಗ್ ಬಾಸ್ ಮರೆಳಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೊಗಳು ಬಿಡುಗಡೆಯಾಗಿವೆ.

ಮಾಹಿತಿ ನಿರಾಕರಣೆ
ಈ ಕುರಿತು ಫಿಲ್ಮಿಬೀಟ್ ರವಿ ಬೆಳಗೆರೆ ಅವರನ್ನು ಸಂಪರ್ಕಿಸಿದಾಗ, "ಅಂತಹ ಯಾವ ಆಲೋಚನೆಯೂ ಇಲ್ಲ,'' ಎಂದರು. ಈ ಕುರಿತು ಕಳುಹಿಸಿದ ಸಂದೇಶಕ್ಕೆ 'ಇಲ್ಲ' ಎಂಬ ಪ್ರತಿಕ್ರಿಯೆ ಅವರ ಕಡೆಯಿಂದ ಬಂದಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯುವ ಸ್ಪರ್ಧಿಗಳ ಹೆಸರನ್ನು ಅಂತಿಮ ಕ್ಷಣದವರೆಗೂ ಗೌಪ್ಯವಾಗಿಟ್ಟುಕೊಳ್ಳುವ ಪ್ರಯತ್ನ ನಡೆಯುತ್ತದೆ. ಒಂದು ವೇಳೆ ಪಟ್ಟಿ ಹೊರಬಿದ್ದರೆ ಕುತೂಹಲವೂ ತಣಿಯುತ್ತದೆ ಎಂಬುದು ಇದಕ್ಕೆ ಕಾರಣ. ಇದೀಗ, ರವಿ ಬೆಳಗೆರೆ ವೈಲ್ಡ್ ಕಾರ್ಡ್ ಎಂಟ್ರಿ ಸುತ್ತ ಎದ್ದಿದ್ದ ಸುದ್ದಿಗೆ ಖುದ್ದು ಅವರೇ ತೆರೆ ಎಳೆದಿದ್ದಾರೆ. ಹೀಗಾಗಿ, ಬಿಸ್ ಬಾಸ್ ಈ ಸೀಸನ್‌ನಲ್ಲಿ ಯಾರ್ಯಾರನ್ನು ಮನೆಯೊಳಗೆ ಕರೆತರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











