ಮದುವೆಯ ನಂತರ ಸೀರಿಯಲ್‌ಗೆ ಗುಡ್ ಬೈ ಹೇಳಿ ವಿದೇಶದಲ್ಲಿ ಠಿಕಾಣಿ ಹೂಡುತ್ತಾರಾ ವೈಷ್ಣವಿ ಗೌಡ ? ಇಲ್ಲಿದೆ ಉತ್ತರ
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ.ವೈಷ್ಣವಿ ಗೌಡ ಅವರಿಗೆ ಈ ತರಹದ ಅನುಭವ ಅನೇಕ ಬಾರಿಯಾಗಿದೆ.
ಖುದ್ದು ವೈಷ್ಣವಿ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದು ಇದೆ. ಮದುವೆಯ ಕುರಿತು ಪ್ರಶ್ನೆಗಳನ್ನು ಎದುರಿಸಿ ಸಾಕಾಗಿದೆ ಎಂದು ಹೇಳಿದ್ದು ಇದೆ. ಆದರೆ ಈಗ ವೈಷ್ಣವಿ ಗೌಡ ಅವರಿಗೆ ಈ ಮಾತು ಕೇಳುವಂತೆ ಇಲ್ಲ. ಯಾಕೆಂದರೆ ವೈಷ್ಣವಿ ಗೌಡ ಸದ್ಯ ಅನುಕೂಲ್ ಅವರಿಗೆ ತಮ್ಮ ಹೃದಯದಲ್ಲಿ ಜಾಗ ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ನಿಶ್ಚಿತಾರ್ಥವನ್ನು ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಮತ್ತು ಹಿತೈಶಿಗಳಿಗೆ ಸಿಹಿ ಸುದ್ದಿಯನ್ನು ಕೂಡ ನೀಡಿದ್ದಾರೆ.

ಇಂಥಾ ವೈಷ್ಣವಿ ಗೌಡ ಸದ್ಯ ತಮ್ಮ ಮತ್ತು ಅನುಕೂಲ್ ನಡುವೆ ಪ್ರೇಮಾಂಕುರವಾಗಿದ್ಹೇಗೆ ಎನ್ನುವದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮುಂದಿನ ನಡೆ ಯೋಚನೆ ಯೋಜನೆಯ ಕುರಿತು ಕೂಡ ಸವಿಸ್ತಾರವಾಗಿ ಮಾತನಾಡಿದ್ದಾರೆ.
ಹೌದು, ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ವೈಷ್ಣವಿ ಗೌಡ ಮನ ಬಿಚ್ಚಿ ಮಾತನಾಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಸುತ್ತ ಮುತ್ತ ಎದ್ದ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ನಮ್ಮದು ಲವ್ ಮ್ಯಾರೇಜ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್ ಎನ್ನುವುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವೈಷ್ಣವಿ ಗೌಡ ಎಲ್ಲರು ಅಂದುಕೊಂಡಂತೆ ನಮ್ಮದು ಲವ್ ಮ್ಯಾರೇಜ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಇಬ್ಬರ ಸಂಬಂಧಕ್ಕೆ ಮ್ಯಾಟ್ರಿಮೋನಿ ಕಂಪನಿ ವೇದಿಕೆಯಾಯ್ತು ಎಂದು ಹೇಳಿರುವ ವೈಷ್ಣವಿ ಗೌಡ, ಮ್ಯಾಟ್ರಿಮೋನಿಯಲ್ಲಿ ನಮ್ಮ ಜಾತಕ ಅದಲು ಬದಲಾದ ನಂತರ ಅಪ್ಪ- ಅಮ್ಮ ನೋಡಿದರು ಆ ನಂತರ ಅವರಿಗೂ ಇಷ್ಟವಾಗಿ ಮದುವೆಯನ್ನು ನಿಶ್ಚಯಿಸಿದರು ಎಂದು ಹೇಳಿದ್ದಾರೆ.
ನಾವು ಇಬ್ಬರು ಪರಿಚಯವಾಗಿ ಸುಮಾರು ಒಂದು ವರ್ಷವಾಯ್ತು, ಅಲ್ಲಿಂದ ಇಲ್ಲಿಯವರೆಗೆ ಟೈಮ್ ತಗೆದುಕೊಂಡು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿರುವ ವೈಷ್ಣವು ಗೌಡ ಸದ್ಯ ಮದುವೆಯ ತಯಾರಿಗಳು ನಡೆಯುತ್ತಿವೆ, ಶೀಘ್ರದಲ್ಲಿಯೇ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.
ಇನ್ನು ವೈಷ್ಣವಿ ಗೌಡ ಎಂಗೇಜ್ ಆಗುತ್ತಿದ್ದಂತೆಯೇ ಅನೇಕರು ವೈಷ್ಣವಿ ಕಿರುತೆರೆಗೆ ಗುಡ್ ಬೇ ಹೇಳಲಿದ್ದಾರೆ, ಮದುವೆಯ ನಂತರ ವಿದೇಶದಲ್ಲಿಯೇ ಠಿಕಾಣಿ ಹೂಡಲಿದ್ದಾರೆ ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಸಹಜವಾಗಿ ಈ ಸುದ್ದಿಯನ್ನು ಕೇಳಿ ಓದಿ ವೈಷ್ಣವಿ ಗೌಡ ಅವರ ಅಭಿಮಾನಿಗಳಿಗೆ ನಿರಾಸೆ ಕೂಡ ಆಗಿದೆ. ಈ ಕುರಿತು ಕೂಡ ಪ್ರತಿಕ್ರಿಯೆಯನ್ನು ನೀಡಿರುವ ವೈಷ್ಣವಿ ಗೌಡ ಮದುವೆಯ ಬಳಿಕ ಕೂಡ ನಾನು ಅಭಿನಯಿಸುತ್ತೇನೆ, ಅದಕ್ಕೆ ಅನುಕೂಲ್ ಕಡೆಯಿಂದ ಅಥವಾ ಅವರ ಮನೆಯವರ ಕಡೆಯಿಂದ ಯಾವುದೇ ತಕರಾರು ಇಲ್ಲ ಎಂದು ಹೇಳಿದ್ದಾರೆ.
ನನ್ನ ಸೀರಿಯಲ್ ಬಗ್ಗೆ ನನಗೆ ಕೆಲ ವಿಚಾರ ಗೊತ್ತಿರಲ್ಲ ಅವರಿಗೆ ಎಪಿಸೋಡ್‌ನಲ್ಲಿ ಏನೇನಾಯ್ತು ಎನ್ನುವುದು ಗೊತ್ತಿರುತ್ತೆ ಅಷ್ಟೊಂದು ಅಪ್‌ಡೇಟ್ ಅವರು ಇದ್ದಾರೆ ಎಂದು ಹೇಳಿರುವ ವೈಷ್ಣವಿ ನನ್ನ ಧಾರಾವಾಹಿಯನ್ನು ಅವರು ದಿನಾ ತಪ್ಪದೇ ನೋಡುತ್ತಾರೆ ಎಂದು ಕೂಡ ಹೇಳಿದ್ದಾರೆ.
ಅನುಕೂಲ್ ಬೆಂಗಳೂರಿನಲ್ಲೇ ಇರುವುದರಿಂದ ಮದುವೆಯ ನಂತರ ಕೂಡ ನಾನು ಇಲ್ಲಿಯೇ ಇರುತ್ತೇನೆ ಎಂದು ಪುನರುಚ್ಚಿಸಿರುವ ವೈಷ್ಣವಿ ಗೌಡ, ನನ್ನ ಮದುವೆ ವಿಚಾರ ಅಮೂಲ್ಯ ಸೇರಿ ಕೆಲವರಿಗೆ ಮಾತ್ರ ಗೊತ್ತಿತ್ತು ಎಂದು ಹೇಳಿದ್ದಾರೆ. ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವುದನ್ನು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಕೊರೊನಾ ಎರಡನೇ ಅಲೆ ಎದ್ದಾಗ ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಕೊರೊನಾ ಹಿನ್ನೆಲೆ ಈ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. 42 ದಿನಗಳ ನಂತರ ಮರುಚಾಲನೆಯನ್ನು ನೀಡಲಾಗಿತ್ತು. ಈ 42 ದಿನಗಳ ಅಂತರದಲ್ಲಿ ವೈಷ್ಣವಿ ಗೌಡ ಅವರಿಗೆ ಭರ್ಜರಿ ಮದುವೆ ಪ್ರಪೋಸಲ್‌ಗಳು ಕೂಡ ಬಂದಿದ್ದವು.
ಈ ಕುರಿತು ವೇದಿಕೆಯ ಮೇಲೆ ಕಿಚ್ಚ ಸುದೀಪ್, ವೈಷ್ಣವಿ ಗೌಡ ಅವರಿಗೆ 43 ದಿನ ಹೊರಗಡೆ ಇದ್ರೀ,ಅಂದಾಜು ಎಷ್ಟು ಪ್ರಪೋಸಲ್ ಬಂದಿರಬಹುದು ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಆಗಿರಬಹುದು ಸರ್, 200-300 ಬಂದಿರಬಹುದು ಎಂದು ವೈಷ್ಣವಿ ಗೌಡ ಹೇಳಿದ್ದರು. ಅದರಲ್ಲಿ ಯಾವುದು ಇಷ್ಟವಾಗಿಲ್ವಾ ಎಂದು ಸುದೀಪ್ ಪ್ರಶ್ನೆ ಮಾಡಿದ್ದರು. ಆಗ ಒಂದು ನೋಡಬೇಕು ಅಂತಲೇ ಅನ್ನಿಸಲಿಲ್ಲ ಸರ್, ಯಾಕೆಂದರೆ ನಾನು ಯಾವಾಗಲೂ ನನ್ನ ಮನಸಿನ ಮಾತು ಕೇಳುತ್ತೇನೆ, ಹೀಗಾಗಿ ಯಾವುದು ನನಗೆ ಕನೆಕ್ಟ್ ಆಗಲೇ ಇಲ್ಲ ಎಂದು ವೈಷ್ಣವಿ ಗೌಡ ಹೇಳಿದ್ದರು. ನೋಡದೇ ಇದ್ದರೆ ಹೇಗೆ ಕನೆಕ್ಟ್ ಆಗುತ್ತೆ ಎಂಬ ಸುದೀಪ್ ಪ್ರಶ್ನೆಗೆ ಪ್ರೀತಿ ಮೂಡಬೇಕು ಅಂದರೆ ಮುಖನೇ ನೋಡಬೇಕು ಅಂತಿಲ್ಲ ಎಂದು ಹೇಳಿದ್ದರು.
ಹೀಗೆ ಅವತ್ತು ಮಾತನಾಡಿದ್ದ ಮಾತನ್ನು ಕೂಡ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿರುವ ವೈಷ್ಣವಿ ಗೌಡ 300 ಪ್ರಪೋಸಲ್ ಬಂದರೂ ಕೂಡ ನನಗೆ ಇಷ್ಟ ಆಗಿಲ್ಲ ಅಂತ ಸುದೀಪ್ ಸರ್ ಬಳಿ ನಾನು ಹೇಳಿದ್ದೆ, ಯೋಚನೆ ಮಾಡಿ ಇವರು ಎಂಥಾ ಹುಡುಗ ಅಂತ. ನಾನು ಎಂಥಾ ಹುಡುಗ ಸಿಗ್ಬೇಕು ಅಂತ ಬಯಸಿದ್ನೋ ಅದೇ ಥರ ಹುಡುಗ ಇವರು ಎಂದು ತಮ್ಮ ಭಾವಿ ಪತಿಯ ಬಗ್ಗೆ ವೈಷ್ಣವಿ ಗೌಡ ಮಾತನಾಡಿದ್ಧಾರೆ.
ಇನ್ನು ತಮ್ಮ ಕನಸಿನ ರಾಜಕುಮಾರ ಸಿಕ್ಕ ಖುಷಿಯಲ್ಲಿ ಮನ ಬಿಚ್ಚಿ ಮಾತನಾಡಿರುವ ವೈಷ್ಣವಿ ಗೌಡ ನಾನು ಅವರನ್ನು ಹೆಸರಿಂದನೇ ಕರೆಯುತ್ತೇನೆ ಅವರು ನನಗೆ ವೈಶ್ ಎಂದು ಕರೆಯುತ್ತಾರೆ ಎಂದು ಹೇಳಿರುವ ವೈಷ್ಣವಿ ಗೌಡ ಇದೇ ಸಮಯದಲ್ಲಿ ಕೆಲ ಟ್ರೋಲ್ ಪೇಜ್‌ಗಳ ವಿರುದ್ಧ, ಯೂಟ್ಯೂಬ್ ಚಾನೆಲ್‌ಗಳ ವಿರುದ್ದ ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕಿದ್ದಾರೆ.
ಹೌದು, ಅಸಲಿಗೆ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸುದ್ದಿ ಹೊರ ಬರುತ್ತಿದ್ದಂತೆಯೇ ಧಾವಂತಕ್ಕೆ ಬಿದ್ದ ಅನೇಕರು ಅನುಕೂಲ್ ಅವರ ಹೆಸರನ್ನು ಅಕಾಯ್ ಎಂದು ಹೇಳಿದ್ದರು. ಇನ್ನು ಕೆಲವರು ಬೇಕು ಬೇಕಂತಲೇ ಬೇರೆ ರಾಜ್ಯದವರನ್ನು ಮದುವೆಯಾಗುತ್ತಿರುವುದಕ್ಕೆ ಟ್ರೋಲ್ ಕೂಡ ಮಾಡಿದ್ದರು. ಈ ಕುರಿತು ಕೂಡ ಮಾತನಾಡಿರುವ ವೈಷ್ಣವಿ ಗೌಡ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳದೇ ತಪ್ಪು ತಪ್ಪು ಮಾಹಿತಿಗಳನ್ನು ನೀಡಿವುದು ತಪ್ಪು ಎಂದು ಹೇಳಿದ್ದಾರೆ. ನಾವು ಹೇಳುವವರೆಗೆ ಕಾಯುವುದಿಲ್ಲ, ಕ್ರಾಸ್ ಚೆಕ್ ಕೂಡ ಮಾಡಿಕೊಳ್ಳುವುದಿಲ್ಲ, ಮನಸಿಗೆ ಬಂದಂತೆ ಏನೇನೋ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಹೆಸರು ಅಕಾಯ್ ಅಲ್ಲ ಅನುಕೂಲ್ ದಯವಿಟ್ಟು ಏನೇನೋ ವಿಡಿಯೋಗಳನ್ನು ಮಾಡಬೇಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಹೀಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿರುವ ವೈಷ್ಣವಿ ಗೌಡ, ಸದ್ಯದಲ್ಲಿಯೇ ಮದುವೆಯ ದಿನಾಂಕವನ್ನು ತಮ್ಮ ಅಭಿಮಾನಿಗಳಿಗೆ ಹೇಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿಯೇ ಇವರ ಮದುವೆ ಅದ್ಧೂರಿಯಾಗಿ ನೆರವೇರುವ ಸಾಧ್ಯತೆ ಇದೆ.


Click it and Unblock the Notifications











