ಬಿಗ್ ಬಾಸ್ ಗೆಲ್ಲದಿದ್ದರೂ ಲಕ್ಷ ಲಕ್ಷ ಸಂಪಾದಿಸಿದ ಕನ್ನಡತಿ ; ವಿನ್ನರ್‌ಗಿಂತ ಹೆಚ್ಚಿನ ಹಣ ಗಳಿಸಿದ ತನುಜಾ
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು ಹಲವರು ಕನಸು ಕಾಣಲು ಇದು ಕೂಡ ಪ್ರಮುಖ ಕಾರಣ.
ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಈಗ ಇನ್ನೊಮ್ಮೆ ಶುರುವಾಗಿದೆ. ಮಲಯಾಳಂ, ಹಿಂದಿಯಲ್ಲಿ ಈಗಾಗಲೇ ಮುಕ್ತಾಯವೂ ಆಗಿದೆ. ಇಷ್ಟೇ ಅಲ್ಲ ನಿನ್ನೆ (ಡಿಸೆಂಬರ್ 21 ) ತೆಲುಗಿನಲ್ಲೂ ಕೂಡ ''ಬಿಗ್ ಬಾಸ್'' ಮನೆಗೆ ಬೀಗ ಹಾಕಲಾಗಿದೆ. ಮನೆಯ ಒಳಗಡೆ ಕಾಮನ್ ಮ್ಯಾನ್ ಆಗಿ ಪ್ರವೇಶ ಮಾಡಿದ್ದ ಕಲ್ಯಾಣ್ ಪಡಾಲ ಅವರಿಗೆ ಈ ಬಾರಿ ''ಬಿಗ್ ಬಾಸ್'' ಟ್ರೋಫಿ ಒಲಿದಿದೆ. ವಿಶೇಷ ಅಂದರೆ ''ಬಿಗ್ ಬಾಸ್'' ಗೆದ್ದ ಕಲ್ಯಾಣ ಪಡಾಲ ಅವರಿಗಿಂತ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಕನ್ನಡತಿ ತನುಜಾ ಪುಟ್ಟಸ್ವಾಮಿ ಅವರೇ ಈ ಕಾರ್ಯಕ್ರಮದ ಮೂಲಕ ಹೆಚ್ಚಿನ ಹಣ ಸಂಪಾದಿಸಿದ್ದಾರೆ. ಅಚ್ಚರಿಯಾದರೂ ಇದು ನಿಜಾ.

ಹೌದು, ತನುಜಾ.. ಬೆಂಗಳೂರಿನ ಚೆಲುವೆ. ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ತನುಜಾ ಕನ್ನಡದ ಬ್ಲಾಕ್‌ಬಸ್ಟರ್ ಚಿತ್ರ ''6-5=2'' ಚಿತ್ರದ ಮೂಲಕ ವೃತ್ತಿ ಬದುಕನ್ನು ಶುರು ಮಾಡಿದರು.
ಆ ನಂತರ ''ಮುದ್ದ ಮಂದಾರಂ'' ಧಾರಾವಾಹಿಯಲ್ಲಿ ಆಕ್ಟ್ ಮಾಡಿದರು. ಈ ಮೂಲಕ ತೆಲುಗು ಕಿರುತೆರೆಯ ಪಾಲಾದರು. ಹತ್ ಹತ್ರ 1,500 ಕ್ಕೂ ಹೆಚ್ಚಿನ ಸಂಚಿಕೆ ಪ್ರಸಾರವಾದ ಧಾರಾವಾಹಿ ಇದು. ಈ ಧಾರಾವಾಹಿ ಮೂಲಕ ಆಂಧ್ರದೆಲ್ಲೆಡೆ ಪಾರ್ವತಿ ಎಂದೇ ಮನೆ ಮಾತಾದರು ತನುಜಾ. ತಮಿಳಿನ ''ಶಿವ ಮನಸುಲ ಶಕ್ತಿ'' ಮತ್ತು ತೆಲುಗಿನ ''ಅಗ್ನಿ ಪರೀಕ್ಷಾ'' ಧಾರಾವಾಹಿಯಲ್ಲಿ ಕೂಡ ತನುಜಾ ಅಭಿನಯಿಸಿದ್ದಾರೆ.

ಇಂಥಾ ತನುಜಾ ಈ ಬಾರಿ ''ಬಿಗ್ ಬಾಸ್'' ಮನೆಗೆ ಹೋದಾಗ ಹಲವರು ತನುಜಾನೇ ಗೆಲ್ಲುವುದು ಎಂದು ಭವಿಷ್ಯ ಹೇಳಿದ್ದರು. ತನುಜಾ ಗೆಲ್ಲಬೇಕೆಂದು ಪ್ರಾರ್ಥನೆಯನ್ನು ಕೂಡ ಮಾಡಿದರು. ಇದರ ಫಲವಾಗಿ ತೆಲುಗು ''ಬಿಗ್ ಬಾಸ್''ನ ಕ್ಲೈಮ್ಯಾಕ್ಸ್‌ವರೆಗೆ ಬಂದರು. ಆದರೆ ತನುಜಾ ಅವರಿಗೆ ರನ್ನರ್ ಅಪ್ ಆಗಿದ್ದಕ್ಕೆ ಯಾವ ಹಣವೂ ಸಿಕ್ಕಿಲ್ಲ. ಆದರೂ ಕೂಡ ತನುಜಾ ಇದೇ ''ಬಿಗ್ ಬಾಸ್'' ಮನೆಯಿಂದ ತಮ್ಮ ಮನೆಗೆ ₹37.5 ಲಕ್ಷ ತೆಗೆದುಕೊಂಡು ಹೋಗಿದ್ದಾರೆ ಎಂದು ''ಸಿಯಾಸತ್.ಕಾಮ್'' ವರದಿ ಮಾಡಿದೆ.
ಹೌದು, ನಿಮಗೆ ಗೊತ್ತಿರಲಿ ''ಬಿಗ್ ಬಾಸ್'' ಟ್ರೋಫಿ ಮುಡಿಗೇರಿಸಿಕೊಂಡ ಕಲ್ಯಾಣ ಪಡಾಲಗೆ ಸಿಕ್ಕಿದ್ದು ಕೇವಲ ₹35 ಲಕ್ಷ ಮಾತ್ರ. ಈ ಹಣದ ಜೊತೆ SUV ಕಾರೊಂದು ಸಿಕ್ಕಿದೆ ಅಷ್ಟೇ. ಆದರೆ ಅದೇ ''ಬಿಗ್ ಬಾಸ್'' ಮನೆಯಲ್ಲಿ 15 ವಾರ ಇದ್ದಿದ್ದಕ್ಕೆ ತನುಜಾ ಪ್ರತಿ ವಾರ 2.5 ಲಕ್ಷ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದಿದ್ದಾರೆ ಎಂದು ''ಸಿಯಾಸತ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆ ಪ್ರಕಾರ 15 ವಾರದ ಲೆಕ್ಕ ಹಾಕಿದರೆ ₹37.5 ಲಕ್ಷ ಹಣವನ್ನು ತನುಜಾ ಪಡೆದಿದ್ದಾರೆ. ಈ ಮೂಲಕ ಸೋತರೂ ಕೂಡ ''ಬಿಗ್ ಬಾಸ್'' ವಿನ್ನರ್‌ಗಿಂತ ಹೆಚ್ಚಿನ ಹಣವನ್ನು ತನುಜಾ ಸಂಪಾದಿಸಿದ್ದಾರೆ.

ಇನ್ನು 33 ವರ್ಷದ ತನುಜಾ 1.5 ರಿಂದ 2 ಕೋಟಿಯ ಒಡತಿ ಎಂದು ''ನ್ಯೂಸ್ ಎಕ್ಸ್'' ವರದಿ ಮಾಡಿದೆ. ಸದ್ಯ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ತನುಜಾ ಅವರಿಗೆ ಹಲವರು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ಹೇಳುತ್ತಿದ್ದಾರೆ. ಅಭಿನಂದನೆ ಸಲ್ಲಿಸುತ್ತಿದ್ದಾರೆ. ತನುಜಾ ಕೂಡ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದವನ್ನು ಹೇಳಿದ್ದಾರೆ.


Click it and Unblock the Notifications











