ಸೊಸೆಯೊಂದಿಗೆ ತನ್ನ ಜಾತಕ ಹೊಂದಾಣಿಕೆಯಾದ ಬಳಿಕ ಮಗನ ಮದುವೆಗೆ ಓಕೆ ಎಂದರಂತೆ ನಟಿ ಚಂದನಾ ಅತ್ತೆ
ಮದುವೆ ಮಾಡುವ ಮುನ್ನ ಗಂಡು ಮತ್ತು ಹೆಣ್ಣಿನ ಜಾತಕ ಹೊಂದಾಣಿಕೆಯಾಗುತ್ತದೆಯಾ ಎಂದು ನೋಡಿ, ಬಳಿಕವಷ್ಟೇ ಸಂಬಂಧ ಮುಂದುವರೆಸುವುದು ಸಾಮಾನ್ಯ. ಆದರೆ, ಈಗ ಗಂಡು ಮತ್ತು ಹೆಣ್ಣಿನ ಜಾತಕವನ್ನು ನೋಡುವುದು ಔಟ್ ಡೇಟೆಡ್. ಅತ್ತೆ ಹಾಗೂ ಸೊಸೆಯ ಜಾತಕ ನೋಡಿ, ಅವರಿಬ್ಬರಿಗೂ ಹೊಂದಾಣಿಕೆಯಾಗುತ್ತದೆ ಎಂದರೆ ಮಾತ್ರವೆ ಮದುವೆಗೆ ಓಕೆ ಮಾಡಬೇಕು ಎನ್ನುವುದು ಹೊಸ ಟ್ರೆಂಡಿಂಗ್ ವಿಚಾರ. ಯಾಕೆಂದರೆ, ಆ ಕಾಲದಿಂದಲೂ ಮದುವೆಯ ಬಳಿಕ ಸೊಸೆ ಮತ್ತು ಅತ್ತೆ ನಡುವೆ ಜಗಳ ಆಗುವುದು ಸರ್ವೇ ಸಾಮಾನ್ಯವಾಗಿದ್ದಂತಹ ವಿಚಾರ. ಏನೇ ಜಗಳವಾದರೂ, ಎಷ್ಟೇ ಹಿಂಸೆಯಾದರೂ ಸೊಸೆ ಸಹಿಸಿಕೊಂಡು ಬಾಳುತ್ತಿದ್ದಳು.
ಎರಡು ಜಡೆ ಸೇರಿದ ಕಡೆ ಸಮಸ್ಯೆ ಹೆಚ್ಚು
ಆದರೆ, ಈಗ ಕಾಲ ಬಹಳಷ್ಟು ಬದಲಾಗಿದೆ. ಅತ್ತೆ, ಮಾವ, ಗಂಡ ಯಾರೇ ಹಿಂಸೆ ಕೊಟ್ಟರೂ ಸಹಿಸದ ಈಗಿನ ಕಾಲದ ಹೆಣ್ಣು ಮಕ್ಕಳು ಒಂದಾ ಗಂಡನಿಗೆ ಡಿವೋರ್ಸ್ ಕೊಡುತ್ತಾರೆ. ಇಲ್ಲವೇ ಅತ್ತೆ-ಮಾವನ ಸಹವಾಸವೇ ಬೇಡ ಎಂದು ಬೇರೆ ಮನೆ ಮಾಡಿಕೊಂಡು ಗಂಡನ ಜೊತೆಗೆ ಸಂಸಾರ ಮಾಡಲು ಶುರು ಮಾಡುತ್ತಾರೆ. ಎರಡು ಜಡೆ ಸೇರಿದರೆ ಅಲ್ಲಿ ಜಗಳ ಆಗುವುದು ನಿಶ್ಚಿತ. ಆದರೆ, ಈಗ ಅದು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಗಂಡ ಹೆಂಡತಿ ಬೇರೆಯಾಗುವುದು ಒಂದು ವರ್ಗವಾದರೆ, ಮದುವೆಯ ಬಳಿಕ ಅತ್ತೆ-ಮಾವನನ್ನು ಬಿಟ್ಟು ಗಂಡನ ಜೊತೆಗೆ ಹೊಸ ಸಂಸಾರ ಶುರು ಮಾಡುವ ವರ್ಗ ಮತ್ತೊಂದು ಕಡೆ ಇದೆ. ಹಾಗಾಗಿ ಈಗ ಗಂಡು-ಹೆಣ್ಣಿನ ಜಾತಕ ನೋಡುವ ಬದಲು ಅತ್ತೆ-ಸೊಸೆಯ ಜಾತಕ ನೋಡಿ, ಅವರಿಬ್ಬರಿಗೆ ಹೊಂದಾಣಿಕೆಯಾದರೆ, ಮದುವೆಯ ಬಳಿಕ ಸಂಸಾರ ಸೂಪರ್ ಎಂಬ ಮಾತಿದೆ.

ಅತ್ತೆ-ಸೊಸೆ ಜಾತಕ ಹೊಂದಬೇಕು
ಇದಕ್ಕೆ ತಕ್ಕಂತೆಯೇ ಇತ್ತೀಚಗಷ್ಟೇ ಮದುವೆಯಾಗಿರುವ ನಟಿ ಚಂದನಾ ಅನಂತಕೃಷ್ಣ ಅವರ ಅತ್ತೆ ಹೊಸ ವಿಚಾರವನ್ನು ಹೇಳಿ ನಟಿಯ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಮಗ ಪ್ರತ್ಯಕ್ಷ್ ನ ಮದುವೆ ಮಾಡಲು ಚಂದನಾ ಅವರ ಪ್ರೊಫೈಲ್ ಬಂದಾಗ ಮೊದಲು ತಮ್ಮ ಹಾಗೂ ಚಂದನಾಯ ಜಾತಕ ತೋರಿಸಿ, ಅತ್ತೆ ಮತ್ತು ಸೊಸೆಗೆ ಹೊಂದಾಣಿಕೆಯಾಗುತ್ತಾ ಎಂದು ಜಾತಕ ನೋಡಿದರಂತೆ. ಹೀಗೆಂದು ಸಂದರ್ಶನ ನೀಡುವಾಗ ತಮಾಷೆಯಾಗಿ ಹೇಳಿದ್ದಾರೆ. ನಮ್ಮಿಬ್ಬರಿಗೆ ಹೊಂದಾಣಿಕೆಯಾದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಅರಾಮವಾಗಿಯೇ ಇರುತ್ತದೆ ಎಂದು ಹೇಳಿದ್ದಾರೆ.
ಸೊಸೆಯನ್ನು ಹಾಡಿ ಹೊಗಳಿದ ಅತ್ತೆ
ನಟಿ ಚಂದನಾ ಅನಂತಕೃಷ್ಣ ಅವರು 2024ರ ನವೆಂಬರ್ ನಲ್ಲಿ ದಿವಂಗತ ನಟ ಉದಯ್ ಹುತ್ತಿನಗದ್ದೆ, ನಟಿ ಲಲಿತಾಂಜಲಿ ಅವರ ಪುತ್ರ ಪ್ರತ್ಯಕ್ಷ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ವಿವಾಹವಾಗಿ ಒಂದು ತಿಂಗಳು ಕಳೆದಿದ್ದು, ಮೊದಲ ಬಾರಿಗೆ ದಂಪತಿಯಾಗಿ ನಟಿ ಚಂದನಾ ಅವರು ಪತಿಯೊಂದಿಗೆ ಸಂದರ್ಶನವನ್ನು ನೀಡಿದ್ದಾರೆ. ಇದರಲ್ಲಿ ಮಾತನಾಡುವ ವೇಳೆ ಚಂದನಾ ಅವರ ಅತ್ತೆ ಲಲಿತಾಂಜಲಿ ಹುತ್ತಿನಗದ್ದೆ ಅವರು ಕೂಡ ಮಾತನಾಡಿದ್ದು, ಸೊಸೆಯನ್ನು ಹಾಡಿ ಹೊಗಳಿದ್ದಾರೆ.
ಅತ್ತೆಯನ್ನು ಎರಡನೇ ಅಮ್ಮ ಎಂದ ನಟಿ
ನಟಿ ಚಂದನಾ ನಮ್ಮ ಮನೆಗೆ ಸೊಸೆಯಾಗಿ ಬಂದಿಲ್ಲ. ಮಗಳಾಗಿ ಈ ಮನೆಗೆ ಆಗಮಿಸಿದ್ದಾಳೆ. ನನ್ನ ಸೊಸೆಗೆ ಬ್ಯೂಟಿಫುಲ್ ಸೋಲ್ ಇದೆ. ಒಳ್ಳೆಯ ಮನಸ್ಸಿನ ಹುಡುಗಿ, ಬಹಳ ಮೆಚ್ಯುರಿಟಿ ಇದೆ. ಇಂತಹ ಹೆಣ್ಣು ಮಗು ನಮ್ಮ ಮನೆಗೆ ಬಂದಿರುವುದಕ್ಕೆ ನಮಗೆ ಖುಷಿ ಇದೆ ಎಂದು ಹೇಳಿದ್ದಾರೆ. ಚಂದನಾ ಅವರು ಕೂಡ ತಮ್ಮ ಅತ್ತೆ ತಾಯಿಯಂತೆ ಇದ್ದು, ಅವರು ತಮಗೆ ಎರಡನೇ ಅಮ್ಮ ಎಂದು ಹೇಳಿದ್ದಾರೆ.


Click it and Unblock the Notifications