'ಅಣ್ಣಾವ್ರ' ಜೊತೆ ಅಭಿನಯಿಸಿದ್ದ ಈ 'ಕಲಾವಿದ'ನ ಮನೆಗೆ 'ಸೊಸೆ'ಯಾಗಿ ಹೋಗಲಿದ್ದಾರೆ 'ಲಕ್ಷ್ಮೀ ನಿವಾಸ'ದ ಚಿನ್ನು ಮರಿ..!
ಚುಕ್ಕಿ ಎಂದು ಖ್ಯಾತಿ ಪಡೆದು ಈಗ ಎಲ್ಲರಿಗೂ ಚಿನ್ನುಮರಿಯಾಗಿರುವ ನಟಿ ಚಂದನಾ ಅನಂತಕೃಷ್ಣ ಅವರು ಈಗ ಜೀವನ ಸಂಗಾತಿಯ ಚಿಟ್ಟೆಯಾಗಲಿದ್ದಾರೆ.ಈ ಹಿಂದೆಯೇ ಒಮ್ಮೆ ನಟಿ ಚಂದನಾ ಅನಂತಕೃಷ್ಣ ಅವರ ಕೈ ಹಿಡಿಯುವ ಹುಡುಗ ಯಾರಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಕೆಲವರಂತೂ ಒಂದಷ್ಟು ಗಾಯಕರು, ನಟರ ಹೆಸರನ್ನು ಹೇಳುವ ಮೂಲಕ ಇವರಿಬ್ಬರ ಜೋಡಿ ಸೂಪರ್ ಎಂದು ಹೇಳಿದ್ದರು. ಆದರೆ, ನಟಿ ಚಂದನಾ ಈಗ ಅದಕ್ಕೆಲ್ಲಾ ಬ್ರೇಕ್ ಹಾಕಿದ್ದಾರೆ.
ಹಸೆಮಣೆ ಏರಲು ಸಜ್ಜಾದ ನಟಿ
ಸೈಲೆಂಟ್ ಚಿನ್ನುಮರಿ ಈಗ ಮೆಲ್ಲಗೆ ಪತಿರಾಯನನ್ನು ಆರಿಸಿಕೊಂಡಿದ್ದಾರೆ. ಕುಟುಂಬದವರೇ ನೋಡಿ ಒಪ್ಪಿರುವ ಹುಡುಗನ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ಹೇಳದಿದ್ದರೂ, ಇದೇ ನವೆಂಬರ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ಸ್ನೇಹಿತರು, ಸಂಬಂಧಿಕರು ಹಾಗೂ ಕಲಾವಿದರು ನಟಿ ಚಂದನಾ ಅವರ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಚಂದನಾ ಅವರು ಕೈ ಹಿಡಿಯಲು ಹೊರಟಿರುವ ಹುಡುಗ ಪ್ರತ್ಯಕ್ಷ್ ಉದಯ್. ಇವರ ಬಗ್ಗೆ ಹೆಚ್ಚು ಯಾರಿಗೂ ಗೊತ್ತಿಲ್ಲ. ಉದ್ಯಮಿಯಾಗಿರುವ ಪ್ರತ್ಯಕ್ಷ್ ಅವರ ಪೋಷಕರು ಕೂಡ ಬಣ್ಣದ ಲೋಕದವರೇ ಅನ್ನೋದು ವಿಶೇಷ.

ಯಾರಿರಬಹುದು ಪ್ರತ್ಯಕ್ಷ್ ಉದಯ್..?
ಡಾ ರಾಜ್ ಕುಮಾರ್ ಅವರ ಜೊತೆಗೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ದಿ.ಉದಯ್ ಹುತ್ತಿನಗದ್ದೆ ಪ್ರತ್ಯಕ್ಷ್ ಅವರ ತಂದೆ. ಇವರು ಆರಂಭ, ಜಯಭೇರಿ, ಅಗ್ನಿಪರ್ವ, ಉದ್ಭವ, ಅಮೃತ ಬಿಂದು, ಶುಭಮಿಲನ, ಕ್ರಮ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಪ್ರತ್ಯಕ್ಷ್ ಅವರ ತಾಯಿ ಲಲಿತಾಂಬ ಅವರು ಕೂಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಪ್ರತ್ಯಕ್ಷ್ ಅವರ ತಂದೆ ಸಿನಿಮಾ ಹೊರತುಪಡಿಸಿ, ಕಾಫಿ ಎಸ್ಟೇಟ್ ಅನ್ನು ಹೊಂದಿದ್ದರು. ಭಾಗಶಃ ಪ್ರತ್ಯಕ್ಷ್ ಅವರು ಇದೇ ಉದ್ಯಮವನ್ನು ಮುಂದುವರೆಸಿರಬಹುದು ಎಂದು ಊಹಿಸಲಾಗಿದೆ. ಆದರೆ, ಹೆಚ್ಚಿನ ಮಾಹಿತಿಯನ್ನು ನಟಿ ಚಂದನಾ ಅವರೇ ನೀಡಬೇಕಿದೆ.
ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿ ನಟಿ ಚಂದನಾ
ತುಮಕೂರಿನ ತುಂಟ ಹುಡುಗಿ ಚಂದನಾ ಅನಂತಕೃಷ್ಣ ಅವರು ಬಿಕಾಂ ಓದಿದ್ದಾರೆ. ಚಂದನಾ ಅನಂತಕೃಷ್ಣ ಅವರು ಮಲ್ಟಿ ಟ್ಯಾಲೆಂಟೆಡ್ ಹುಡುಗಿ. ರಂಗಭೂಮಿ ಕಲಾವಿದೆಯಾಗಿರುವ ಚಂದನಾ ಕಿರುತೆರೆಯಲ್ಲೂ ಮಿಂಚಿದವರು. ರಾಜಾ ರಾಣಿ, ಮುದ್ದು ಮಣಿಗಳು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿಯಾಗಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ನಟನೆಗಷ್ಟೇ ಸೀಮಿತವಾಗಿರದ ಚಂದನಾ ನಿರೂಪಣೆಯನ್ನು ಮಾಡಿದ್ದಾರೆ. ಹಾಡು ಕರ್ನಾಟಕ ಎಂಬ ಕಾರ್ಯಕ್ರಮವನ್ನು ಚಂದನಾ ಅವರು ಅದ್ಭುತವಾಗಿ ನಡೆಸಿಕೊಟ್ಟಿದ್ದರು.
ಸಿನಿಮಾಗಳಲ್ಲೂ ನಟಿಸಿರುವ ಚಂದನಾ
ನಟಿ ಚಂದನಾ ಅವರು ನಟನೆ, ನಿರೂಪಣೆ, ಡ್ಯಾನ್ಸ್ ಜೊತೆಗೆ ಸಿಂಗರ್ ಕೂಡ ಆಗಿದ್ದಾರೆ. ಈ ಹಿಂದೆ ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದರು. ಸಕಲಕಲಾವಲ್ಲಭೆಯಾಗಿರುವ ಚಂದನಾ ತಮ್ಮಲ್ಲಿರುವ ಯಾವ ಟ್ಯಾಲೆಂಟ್ ಅನ್ನು ನೆಗಲೆಕ್ಟ್ ಮಾಡುವುದಿಲ್ಲ. ಭರತನಾಟ್ಯದಲ್ಲಿ ಪರ್ಫಾರ್ಮಿಂಗ್ ಆರ್ಟ್ ನಲ್ಲಿ ಸ್ನಾತ್ತಕೋತರ ಪದವಿಯನ್ನು ಪಡೆದಿದ್ದಾರೆ. ಇನ್ನು ಜಾಲಿ ಬ್ಯಾಚುಲರ್ಸ್ ಎಂಬ ಸಿನಿಮಾದಲ್ಲಿ ನಟಿಸಿ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ತತ್ಸಮ ತದ್ಭವ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ನ ಮುದ್ದು ಹೆಂಡತಿ ಚಿನ್ನುಮರಿಯಾಗಿ ಕಾಣಿಸಿಕೊಂಡಿದ್ದು, ಈಗ ಮದುವೆಯಾಗುತ್ತಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ.


Click it and Unblock the Notifications











