Chandana Mahalingaiah ; ಮತ್ತೆ ನಟನೆಗೆ ಮರಳಿದ ನಟಿ ಚಂದನಾ ಮಹಾಲಿಂಗಯ್ಯ
ಸೀತಾರಾಮ ಧಾರಾವಾಹಿಯಲ್ಲಿ ಸಿಹಿಗೆ ಅಪ್ಪ-ಅಮ್ಮನ ನೆರಳು ಜೊತೆಯಾಗಿದೆ. ಇದರಿಂದ ಸೀತಾಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಮೇಘಶ್ಯಾಮ್ ಮತ್ತು ಶಾಲಿನಿ ಸಿಹಿ ನಿಜವಾದ ಪೋಷಕರು. ಆದರೆ, ಈ ಬಗ್ಗೆ ಡಾ.ಅನಂತಲಕ್ಷ್ಮೀಗೆ ಬಿಟ್ಟರೆ ಮತ್ಯಾರಿಗೂ ಗೊತ್ತಿಲ್ಲ. ಹಾಗಿದ್ದರೂ ಕೂಡ ಸಿಹಿ ಸಹಜವಾಗಿಯೇ ಎಲ್ಲರನ್ನು ಹಚ್ಚಿಕೊಂಡಂತೆ ಮೇಘಶ್ಯಾಮ್ ಮತ್ತು ಶಾಲಿನಿಗೆ ಹತ್ತಿರವಾಗಿದ್ದಾಳೆ. ಇದು ಸೀತಾಳ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ತನ್ನ ಜೊತೆಗಿರುತ್ತಿದ್ದ ಸಿಹಿ ಈಗ ಇನ್ನೊಬ್ಬರ ತೆಕ್ಕೆಯಲ್ಲಿ ಸುಖವಾಗಿ ನಲಿಯುತ್ತಿರುವುದನ್ನು ನೋಡಲು ಹಿಂಸೆ ಪಟ್ಟಿದ್ದಾಳೆ.
ಶಾಲಿನಿ ಲುಕ್ ನಲ್ಲಿ ಚಂದನಾ ನಟನೆ
ಅಷ್ಟಕ್ಕೂ ಮೇಘಶ್ಯಾಮ್ ಮತ್ತು ಶಾಲಿನಿ ಸೀತಾಳಿಂದ ಸಿಹಿಯನ್ನು ಪಡೆಯಲು ಮುಂದಾಗಿದ್ದರು. ಆದರೆ, ಮಗು ಇಷ್ಟವಿಲ್ಲದ ಕಾರಣ ಶಾಲಿನಿ ಸುಳ್ಳು ಹೇಳಿ ಶ್ಯಾಮ್ ನನ್ನು ಯಾಮಾರಿಸಿದ್ದಳು. ಆದರೆ, ಈಗ ಶ್ಯಾಮ್ ತನ್ನ ಮಗುವಿನ ಹುಡುಕಾಟದಲ್ಲಿದ್ದಾನೆ. ಸತ್ಯ ತಿಳಿದರೆ, ಸೀತಾ ಬಾಳಲ್ಲಿ ದೊಡ್ಡ ಬಿರುಗಾಳಿ ಬೀಸುತ್ತದೆ. ಶಾಲಿನಿಗೆ ಈಗಲೂ ಮಗು ಇಷ್ಟವಿಲ್ಲ. ಆದರೆ, ಸಿಹಿಯ ಅತೀಯಾದ ಮಾತುಗಳು, ಒಡನಾಟ ಶಾಲಿನಿಯಲ್ಲಿ ಸಣ್ಣ ಬದಲಾವಣೆಯನ್ನು ತಂದಿದೆ. ತುಂಬಾ ಮುಜುಗರದಿಂದ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಶಾಲಿನಿ ನಿಜಕ್ಕೂ ಯಾರು ಎಂದು ಹಲವರಿಗೆ ಗೊತ್ತಿರದು. ಮುಖ ಚಿರಪರಿಚಿತವಿದ್ದರೂ, ಯಾರು ಎಂಬ ಸಂದೇಹವಿದ್ದೇ ಇರುತ್ತದೆ. ಯಾಕೆಂದರೆ, ಶಾಲಿನಿ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಎರಡು ವರ್ಷಗಳ ಬ್ರೇಕ್ ಪಡೆದು ವಾಪಸ್ ಆಗಮಿಸಿದ್ದಾರೆ.

ಕಿರುತೆರೆಯಿಂದ ದೂರ ಸರಿದಿದ್ದ ನಟಿ
ಶಾಲಿನಿಯ ನಿಜವಾದ ಹೆಸರು ಚಂದನಾ ಮಹಾಲಿಂಗಯ್ಯ. ಈ ಹಿಂದೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದಿದ್ದ ನಟಿ ಚಂದನಾ ಮಹಾಲಿಂಗಯ್ಯ ಇದೀಗ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ನಾಗಕನ್ನಿಕೆ, ಸೀತಾವಲ್ಲಭ, ಪುಟ್ಟಕ್ಕನ ಮಕ್ಕಳು ಧಾರಾವಾಹಿಗಳಲ್ಲಿ ಈ ಹಿಂದೆ ಚಂದನಾ ಮಹಾಲಿಂಗಯ್ಯ ನಟಿಸಿದ್ದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಚಂದನಾ ಅವರು ಇದ್ದಕ್ಕಿದ್ದ ಹಾಗೆಯೇ ನಟನೆಯಿಂದ ದೂರ ಉಳಿದರು. ಬಳಿಕ ಮತ್ತೆ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು. ಎರಡು ವರ್ಷಗಳ ಬಳಿಕ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ.
ನಟನೆಯನ್ನು ಬಯಸಿ ಬಂದ ಚಂದನಾ
ಚಿಕ್ಕವರಿದ್ದಾಗಿನಿಂದಲೂ ನಟಿಸಲು ಬಯಸಿದ್ದ ಚಂದನಾ ಮಹಾಲಿಂಗಯ್ಯ ಅವರು ನಾಟಕ, ಡ್ಯಾನ್ಸ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇಂಜಿನಿಯರಿಂಗ್ ಪದವಿ ಪಡೆದು, ನಟಿಯಾಗುವ ನಿರ್ಧಾರ ಮಾಡಿ ನಟನೆಯನ್ನು ಕಲಿತರು. ಕನಸು ನಾಟಕದ ಮೂಲಕ ಬಣ್ಣ ಹಚ್ಚಲು ಶುರುವಿಟ್ಟರು. ಬಳಿಕ ಕಿರುತೆರೆಗೆ ಆಗಮಿಸಿ ಖಳನಾಯಕಿಯಾಗಿಯೂ ಮಿಂಚಿದರು. ಇನ್ನು ತೆಲುಗು ಧಾರಾವಾಹಿ ವೈದೇಹಿ ಪರಿಣಯಂನಲ್ಲೂ ನಟಿಸಿ ಅಭಿಮಾನಿಗಳ ಮನ ಗೆದ್ದರು.

ಚಂದನಾ ಅವರ ಪತಿ ಕೂಡ ನಟ
ಇನ್ನು ನಟಿ ಚಂದನಾ ಮಹಾಲಿಂಗಯ್ಯ ಅವರು ಕಿರುತೆರೆ ನಟನೊಂದಿಗೆ ಸಪ್ತಪದಿ ತುಳಿದಿದ್ದು, ನಟನ ಹೆಸರು ದೀಪಕ್ ಮಹಾದೇವ್ ನಾ ನಿನ್ನ ಬಿಡಲಾರೆ, ನಾಯಕಿ, ನಿನ್ನಿಂದಲೇ, ನಾಗಿಣಿ, ಮರಳಿ ಮನಸಾಗಿದೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ದೀಪಕ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನಟನಾಗಿ ಗುರುತಿಸಿಕೊಂಡ ಬಳಿಕ ಇದೀಗ ನಿರ್ಮಾಣ ನಿರ್ವಹಣೆಯ ಮೂಲಕ ಕಿರುಪರದೆಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಕಲರ್ಸ್ ಕನ್ನಡದ ಕರಿಮಣಿ ಧಾರಾವಾಹಿಯನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಗಂಗೆ-ಗೌರಿ ಧಾರಾವಾಹಿಯನ್ನು ನಿರ್ವಹಣೆ ಮಾಡಿದ್ದರು. ಇನ್ನು ನಟಿ ಚಂದನಾ ಮಹಾಲಿಂಗಯ್ಯ ಮತ್ತು ದೀಪಕ್ ಮಹಾದೇವ್ ಅವರು 2021ರಲ್ಲಿ ವಿವಾಹವಾಗಿದ್ದಾರೆ. ಇಬ್ಬರೂ ಸಮಯ ಸಿಕ್ಕಾಗಲೆಲ್ಲಾ ಸುತ್ತಾಡಲು ಬಯಸುತ್ತಾರೆ. ಹಿಮಾಚಲ ಪ್ರದೇಶ, ಬಾಲಿ ಸೇರಿದಂತೆ ಹಲವು ಕಡೆಗಳಿಗೆ ಇಬ್ಬರೂ ಭೇಟಿಕೊಟ್ಟಿದ್ದಾರೆ.


Click it and Unblock the Notifications











