Madhumathi ; ಶಾಲೆಗೆ ಚಕ್ಕರ್ ಹೊಡೆದು ಶೂಟಿಂಗ್ ಸ್ಪಾಟ್ ಗಳಲ್ಲಿ ಅಟೆಂಡೆನ್ಸ್ ಹಾಕುತ್ತಿದ್ದ ನಟಿ ಮಧುಮತಿ .!
ಯೂಟ್ಯೂಬ್ ನಲ್ಲಿ ಪ್ರಸಾರವಾದ ಕಾಮಿಡಿ ಸಿರೀಸ್ ಗಳಲ್ಲಿ ನಟಿಸುವ ಮೂಲಕ ಎಲ್ಲರನ್ನೂ ನಗಿಸುತ್ತಿರುವ ನಟಿ ಮಧುಮತಿ ಅವರು, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಇತ್ತೀಚೆಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಮಧುಮತಿ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕಿ ಪಾರ್ವತಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕಳೆದ ಏಳೆಂಟು ವರ್ಷಗಳಿಂದ ಬಣ್ಣದ ಲೋಕದಲ್ಲಿರುವ ನಟಿ ಮಧುಮತಿ ಅವರಿಗೆ ನಟಿಯಾಗುವ ಆಸೆ ಇಂದು ನಿನ್ನೆಯದಲ್ಲ. ತಾವು ಶಾಲೆಗೆ ಹೋಗುವಾಗಲೇ ನಟಿಯಾಗಬೇಕು ಎಂದು ಆಸೆ ಪಟ್ಟಿದ್ದರಂತೆ.

ಶಾಲೆಗೆ ಚಕ್ಕರ್ ಶೂಟಿಂಗ್ ಗೆ ಹಾಜರ್
ನಟಿ ಮಧುಮತಿ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರೇ ಆದರೂ, ಅವರ ತಾಯಿ ಕುದುರೆ ಮುಖದಲ್ಲಿ ಇದ್ದಿದ್ದರಿಂದ ಇವರು ತಮ್ಮ ದೊಡ್ಡಮ್ಮನ ಮನೆಯಲ್ಲೇ ಇರಬೇಕಾಗಿತ್ತಂತೆ. ಮಧುಮತಿ ಅವರಿಗೆ ಬುದ್ಧಿ ಬರುವವರೆಗೂ ದೊಡ್ಡಮ್ಮನೇ ತನ್ನ ಹೆತ್ತ ತಾಯಿ ಎಂದು ನಂಬಿದ್ದರಂತೆ. ಬುದ್ಧಿ ಬಂದ ಬಳಿಕ ತಮ್ಮ ತಾಯಿ ಯಾರು ಎಂಬುದು ತಿಳಿದ ಬಳಿಕ ಅಮ್ಮನ ಜೊತೆಗೆ ಇರಲು ಬಯಸಿ ಕುದುರೆಮುಖಕ್ಕೆ ತೆರಳಿದರಂತೆ. ಕುದುರೆ ಮುಖದಲ್ಲಿ ಹೆಚ್ಚು ಶೂಟಿಂಗ್ ಗಳು ನಡೆಯುತ್ತಿದ್ದಾಗ ಮಧುಮತಿ ಅವರು ಕೂಡ ಶಾಲೆಗೆ ಚಕ್ಕರ್ ಹೊಡೆದು ಶೂಟಿಂಗ್ ನೋಡಲು ಹೊರಟು ಬಿಡುತ್ತಿದ್ದರಂತೆ. ಒಮ್ಮೆ ನಟ ರಮೇಶ್ ಅರವಿಂದ್ ಅವರ ಬಳಿ ಹೋಗಿ ತಾವೂ ನಟಿಯಾಗಬೇಕು ಎಂದಾಗ, ರಮೇಶ್ ಅವರು ಮೊದಲು ಓದು ಮುಗಿಸಿ ಬಳಿಕ ನಟಿಯಾಗು ಎಂದು ಹೇಳಿದ್ದರಂತೆ.
ನನಸಾಯ್ತು ನಟಿಯಾಗುವ ಕನಸು
ಮಧುಮತಿ ಅವರು ನಟಿಯಾಗುವ ಆಸೆಯನ್ನು ಮನದಲ್ಲೇ ಇಟ್ಟು ಪೋಷಿಸುತ್ತಾ ಬಂದಿದ್ದರು. ಮದುವೆಯಾದ ಬಳಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಇವರು ಕಳೆದ ಏಳೆಂಟು ವರ್ಷಗಳ ಹಿಂದೆ ಇನ್ನು ಹೀಗೆ ಇದ್ದರೆ ಆಗದು ಎಂದು ಹೇಲಿ ಪತಿಯ ಸಹಾಯ ಪಡೆದು ನಟನೆಗೆ ಧುಮುಕಿದರಂತೆ. ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದ ಜೀವ ಹೂವಾಗಿದೆ ಧಾರಾವಾಹಿ ಮೂಲಕ ಪೋಷಕ ನಟಿಯಾಗಿ ಕಾಣಿಸಿಕೊಂಡರು. ಇದಾದ ಬಳಿಕ ಮಧುಮತಿ ಅವರು ಉದಯ ಟಿವಿಯಲ್ಲಿ ಸುಂದರಿ ಧಾರಾವಾಹಿಯಲ್ಲಿ ನಟಿಸಿದರು.
ಟೊಮೆಟೋ ಮುಂಡೆ ಡೈಲಾಗ್ ಫೇಮಸ್
ಬಳಿಕ ಕನ್ನಡತಿ ಮತ್ತು ದೊರೆಸಾನಿ ಎಂಬ ಧಾರಾವಾಹಿಗಳಲ್ಲೂ ನಟಿಸಿದರು. ಧಾರಾವಾಹಿಗಳಲ್ಲಿ ನಟಿಸುತ್ತಲೇ ಜೆಆರ್ ಎಂ ಸ್ಟುಡಿಯೋ ಸೇರಿದಂತೆ ಕೆಲ ಯೂಟ್ಯೂಬ್ ಚಾನೆಲ್ ಗಳಲ್ಲಿ ಮೂಡಿ ಬರುತ್ತಿದ್ದ ಕಾಮಿಡಿ ಶಾರ್ಟ್ ಮೂವೀಸ್ ಗಳಲ್ಲಿ ನಟಿಸುವ ಮೂಲಕ ವೀಕ್ಷಕರ ಹೊಟ್ಟೆಯನ್ನು ಹುಣ್ಣಾಗಿಸಲು ಶುರು ಮಾಡಿದರು. ಇಂದಿಗೂ ಮಧುಮತಿ ಅವರು ಟೊಮೆಟೊ ಮುಂಡೆ ಎಂಬ ಡೈಲಾಗ್ ನಿಂದಲೇ ಫೇಮಸ್ ಆಗಿದ್ದಾರೆ. ಯೂಟ್ಯೂಬ್ ನಲ್ಲಿರುವ ಅಮೃತಾಂಜನ್, ಲೋ ಬಜೆಟ್ ಗೃಹಪ್ರವೇಶ, ಸೋಡಾಬುಡ್ಡಿ, ಸಡನ್ ಆಗಿ ಲವ್ ಆದ್ರೆ ಏನಾಗುತ್ತೆ ಸೇರಿದಂತೆ ಹಲವು ಕಾಮಿಡಿ ಶಾರ್ಟ್ ಮೂವೀಸ್ ಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಮೈನಸ್ 18 ಪ್ಲಸ್ ಎಂಬ ವೆಬ್ ಸಿರೀಸ್ ನಲ್ಲಿ ಹಾಸ್ಯಭರಿತ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆಯನ್ನು ಪಡೆದಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಮಧುಮತಿ
ಇನ್ನು ಮಧುಮತಿ ಅವರು ಟಿ ಎನ್ ಸೀತಾರಾಂ ಅವರ ನಿರ್ದೇಶನದ ಮತ್ತೆ ಮಾಯಾಮೃಗ ಹಾಗೂ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲೂ ನಟಿಸಿದ್ದು, ಸದ್ಯ ಅಣ್ಣಯ್ಯ ಸೀರಿಯಲ್ ನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕೆಲ ಸಿನಿಮಾಗಳಿಗೂ ಬಣ್ಣ ಹಚ್ಚಿರು ನಟಿ ಮಧುಮತಿ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಧುಮತಿ ಅವರಿಗೆ ಸಹಕಲಾವಿದರು ವಿಶ್ ಮಾಡಿ ಶುಭ ಕೋರಿದ್ದಾರೆ.


Click it and Unblock the Notifications











