Mahati Bhat ; ಬಾಲ ನಟಿಯಿಂದ ನಾಯಕಿಯಾಗಿ ಬಡ್ತಿ ಪಡೆದ ಮಹತಿ ವೈಷ್ಣವಿ ಭಟ್
ಇಷ್ಟು ದಿನ ಬಾಲ ನಟಿಯಾಗಿ ಅಭಿನಯಿಸುತ್ತಾ ಎಲ್ಲರನ್ನೂ ರಂಜಿಸುತ್ತಿದ್ದ ಮಹತಿ ವೈಷ್ಣವಿ ಭಟ್ ಇನ್ಮುಂದೆ ನಾಯಕಿಯಾಗಿ ವೀಕ್ಷಕರ ಎದುರು ಕಮಾಲ್ ಮಾಡಲಿದ್ದಾರೆ.ಹೌದು ನಟಿ ಮಹತಿ ಅವರು ಈಗಾಗಲೇ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಆ ಪಾತ್ರಕ್ಕಾಗಿ ಮಹತಿ ಅವರು ಸಾಕಷ್ಟು ತಯಾರಿಗಳನ್ನೂ ನಡೆಸಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟು ಪುಟಾಣಿ ಮಹತಿ ಈಗ ಕಿರುತೆರೆಯ ಧಾರಾವಾಹಿಯೊಂದರಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
ಅಂಜಲಿ ಪಾತ್ರದಲ್ಲಿ ಮೋಡಿ ಮಾಡಿದ ನಟಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ಸೀಸನ್ 1 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ತಮ್ಮ ಸಹಜ ಅಭಿನಯದ ಮೂಲಕ ತೀರ್ಪುಗಾರರ ಹಾಗೂ ಕಿರುತೆರೆ ವೀಕ್ಷಕರ ಮೆಚ್ಚುಗೆಗೂ ಕೂಡಾ ಮಹತಿ ಪಾತ್ರರಾಗಿದ್ದರು. ನಂತರ ಧಾರಾವಾಹಿಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡರು.

ಸಿಂಧೂರ ಎಂಬ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಮೊದಲು ನಟಿಸಿದ ಮಹತಿ ಬಳಿಕ ಗಟ್ಟಿಮೇಳ ಧಾರಾವಾಹಿಯಲ್ಲಿ ಮೂವರು ಅಕ್ಕಂದಿರ ಮುದ್ದಿನ ತಂಗಿ ಅಂಜಲಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದರು. ತಮ್ಮ ಅಮೋಘ ನಟನೆಯ ಮೂಲಕ ಮೋಡಿ ಮಾಡಿದ ಮಹತಿ ಬಹು ಕಡಿಮೆ ಅವಧಿಯಲ್ಲಿಯೇ ಸೀರಿಯಲ್ ಪ್ರಿಯರ ಮನೆ ಮನ ಸೆಳೆದುಬಿಟ್ಟಿದ್ದರು. ಚಿಕ್ಕ ವಯಸ್ಸಿಗೆ ಮಹತಿ ಅವರು ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಉತ್ತಮ ಸಹೋದರಿ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡರು.
ನಟನೆಯೊಂದಿಗೆ ಓದಿನಲ್ಲೂ ಮುಂದು
ಮಹತಿ ಓದಿನ ಜೊತೆಗೆ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಈಗಷ್ಟೇ ಪಿಯುಸಿ ಮುಗಿಸಿರುವ ಮಹತಿ ಅವರು ಸಿಇಟಿ ಪರೀಕ್ಷೆ ಬರೆದು ರಿಸಲ್ಟ್ ಗಾಗಿ ಕಾಯುತ್ತಿದ್ದಾರೆ. ನಟನೆ ಮಾಡಿಕೊಂಡೇ ಟಾಪರ್ ಆಗಿರುವ ಮಹತಿ ಅವರು ಎಸ್ಎಸ್ಎಲ್ಸಿ ನಲ್ಲಿ 95% ಗಳಿಸಿದ್ದರು. ಈಗ ಪಿಯುಸಿ ಪರೀಕ್ಷೆಯಲ್ಲೂ 98% ಗಳಿಸಿದ್ದಾರೆ. ಇನ್ನು ನಟನೆಯ ಹೊರತಾಗಿ ಮಹತಿ ಅವರು ಸಂಗೀತಗಾರ್ತಿಯೂ ಹೌದು. ತಮ್ಮ ತಾಯಿ ಸುಚಿತ್ರಾ ಅವರ ಬಳಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ನವರಸ ಕಲಾವಿದೆ, ಅಭಿನಯ ಕಿಶೋರಿ, ಅಭಿನಯ ರಾಣಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮಹತಿ ಇನ್ಮುಂದೆ ಬಾಲ ನಟಿಯಲ್ಲಿ ನಾಯಕಿ
ಇನ್ನು ಇದೀಗ ಮಹತಿ ಅವರು ಬಾಲ ನಟಿಯಿಂದ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಧೋ ಉಧೋ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ನಾಯಕಿ ರೇಣುಕೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಾಯಕಿ ಪಾತ್ರಕ್ಕಾಗಿ ಮಹತಿ ಅವರು ಬಿಲ್ ವಿದ್ಯೆ, ಕುದುರೆ ಸವಾರಿ ಸೇರಿದಂತೆ ಪಾತ್ರಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಈ ಧಾರಾವಾಹಿ ಮೂಲಕ ಮಹತಿ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸೋಣ


Click it and Unblock the Notifications











