Priyanka Chincholi ; ಬೆಂಗಳೂರಿನಲ್ಲಿ ತನ್ನ ಕನಸಿನ ಮನೆಗೆ ಕಾಲಿಟ್ಟ ಪ್ರಿಯಾಂಕಾ ಚಿಂಚೋಳಿ..!
ಪೌರಾಣಿಕ ಪಾತ್ರಗಳಿಂದ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚಿಂಚೋಳಿ ಅವರಿಗೆ ಈಗಲೂ ಪೌರಾಣಿಕ ಪಾತ್ರಗಳೆಂದರೆ ಬಹಳ ಇಷ್ಟವಂತೆ. ಆದರೆ ಪಶುವೈದ್ಯೆ ಆಗುವ ಕನಸು ಕಂಡಿದ್ದ ಗುಳಿಕೆನ್ನೆ ರಾಣಿ, ಅದು ಹೇಗೋ ನಟನೆಯ ಹಾದಿಯನ್ನು ಹಿಡಿದು ಬಿಟ್ಟರು.
ಆದರೆ ಗುಲ್ಬರ್ಗಾದಿಂದ ಬೆಂಗಳೂರಿಗೆ ಬಂದು ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಅವರ ದಾರಿ ಸುಲಭವಾಗಿರಲಿಲ್ಲ. ಓದಲು ಬೆಂಗಳೂರಿಗೆ ಬಂದು ಪ್ರಿಯಾಂಕಾ ಅವರು ಮಾಡೆಲ್ ಆದರು. ಮಾಡೆಲಿಂಗ್ ಲೋಕದಲ್ಲಿ ಮಿಂಚಿ ಗೆದ್ದ ಪ್ರಿಯಾಂಕಾ ಚಿಂಚೋಳಿ ಈಗ ಪ್ರೇಕ್ಷಕರ ನೆಚ್ಚಿನ ನಟಿ. ಪೌರಾಣಿಕ ಪಾತ್ರಗಳಿಗೂ ಸೈ, ಸಾಮಾಜಿಕ ಪಾತ್ರಕ್ಕೂ ಜೈ ಎನ್ನುತ್ತಾರೆ ಪ್ರಿಯಾಂಕಾ ಚಿಂಚೋಳಿ.

ನಟಿ ಪ್ರಿಯಾಂಕ ವ್ಯಾಸಂಗ
ನಟಿ ಪ್ರಿಯಾಂಕಾ ಚಿಂಚೋಳಿ ಅವರು ಎರಡು ವರ್ಷಗಳ ಹಿಂದೆ ರಾಕೇಶ್ ಎಂಬುವರನ್ನು ಮದುವೆಯಾಗಿದ್ದಾರೆ. ಅವರೇನಾದರೂ ಬೆಂಗಳೂರಿಗೆ ಬಂದು ನಟನೆಯನ್ನು ಆರಿಸಿಕೊಂಡಿರಲಿಲ್ಲ ಎಂದಿದ್ದರೆ ಮನೆಯಲ್ಲಿ ಯಾವಾಗಲೋ ಮದುವೆ ಮಾಡುತ್ತಿದ್ದರು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಚಿಂಚೋಳಿ ಅವರು ಮೂಲತಃ ಗುಲ್ಬರ್ಗಾದವರು. ಅಲ್ಲಿಯೇ ಪ್ರಿಯಾಂಕಾ ಅವರ ಮನೆ, ಆಸ್ತಿ ಇದೆ. ಇನ್ನು ಇವರ ತಂದೆ ಚಿಕ್ಕವಯಸ್ಸಿನಲ್ಲೇ ತೀರಿಕೊಂಡಿದ್ದಾರೆ. ಅಮ್ಮ ಮಾತ್ರ ಇರುವುದು. ಬಿಸಿಎ ಓದಿರುವ ಪ್ರಿಯಾಂಕಾ ಎಂಟೆಕ್ ಮೂರನೇ ಸೆಮಿಸ್ಟರ್ ವರೆಗೂ ಓದು ಮುಗಿಸಿದ್ದಾರೆ.

ನಟನೆಗೆ ಬಂದದ್ದು ಹೇಗೆ..?
ಖಾಸಗಿ ವಾಹಿನಿಯಲ್ಲಿ ನಿರೂಪಣೆ ಮಾಡಲು ಪ್ರಿಯಾಂಕಾ ಅವರು ಬಂಗಳೂರಿಗೆ ಬಂದಿದ್ದರು. ಆ ನಂತರ ಮಾಡೆಲಿಂಗ್ ಲೋಕಕ್ಕೆ ಹೆಜ್ಜೆ ಇಟ್ಟರು. ನಂತರ 2011ರಲ್ಲಿ ಮಿಸ್ ಗುಲ್ಬರ್ಗಾ ಸ್ಪರ್ಧೆಯಲ್ಲಿ ಗೆದ್ದರು. ಆಮೇಲೆ ಅಂದರೆ 2013ರಲ್ಲಿ ಮಿಸ್ ವಿವೆಲ್ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು.
ಮರು ವರ್ಷ 2014ರಲ್ಲಿ ಮಿಸ್ ಕರ್ನಾಟಕ ಆದರು. ನಂತರ 2017ರಲ್ಲಿ ಪ್ರಿಯಾಂಕಾ ಅವರು ಮಿಸ್ ಸೌತ್ ಇಂಡಿಯಾ ಆಗಿ ಹೊರಹೊಮ್ಮಿದರು. ಹೀಗೆ ಮಾಡೆಲಿಂಗ್ ನಲ್ಲಿದ್ದ ಚಿಂಚೋಳಿ ಅವರಿಗೆ ಮಜಾ ಟಾಕೀಸ್ ನಲ್ಲಿ ನಟಿಸುವ ಆಸೆ ಇತ್ತು. ಆಗ ಸ್ನೇಹಿತರೊಬ್ಬರು ಹರ ಹರ ಮಹಾದೇವ ಧಾರಾವಾಹಿಯ ಆಡಿಷನ್ ನಲ್ಲಿ ಸ್ಪರ್ಧಿಸುವಂತೆ ಹೇಳಿದರು. ಪರಿಣಾಮ ಸತಿ ಪಾತ್ರಕ್ಕೆ ಪ್ರಿಯಾಂಕ ಆಯ್ಕೆ ಆದರು.

ಪೌರಾಣಿಕ ಧಾರಾವಾಹಿಗಳೇ ಹೆಚ್ಚು
ಮೊದಮೊದಲು ಧಾರಾವಾಹಿಯಲ್ಲಿ ನಟಿಸಲು ಹಾಗೂ ಡೈಲಾಗ್ ಹೇಳಲು ಪ್ರಿಯಾಂಕ ಪರದಾಡುತ್ತಿದ್ದರು. ನಂತರ ಸಲೀಸಾಗಿ ಅಭಿನಯದ ಪಟ್ಟುಗಳನ್ನ ಕಲಿತ ಪ್ರಿಯಾಂಕಾ ಅವರ ಪಾರ್ವತಿ ವೇಷ ಕಂಡು ಅವರ ತಾಯಿ ಖುಷಿ ಪಟ್ಟಿದ್ದರಂತೆ. ನಂತರ ಜೈ ಹನುಮಾನ್ ಧಾರಾವಾಹಿಯಲ್ಲಿ ಅಂಜನಾ ದೇವಿ ಪಾತ್ರಕ್ಕೆ ಪ್ರಿಯಾಂಕಾ ಅವರು ಬಣ್ಣ ಹಚ್ಚಿದ್ದರು.
ಕಿರುತೆರೆಗೆ ಪಾದಾರ್ಪಣೆ ಮಾಡಿದ ಕೂಡಲೇ ಬ್ಯಾಕ್ ಟು ಬ್ಯಾಕ್ ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಇವರಿಗೆ ಮನಸಾರೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿ ಬಂತು. ಮನಸಾರೆ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ಪ್ರಿಯಾಂಕಾ ಚಿಂಚೋಳಿ ಅವರಿಗೆ ಪೌರಾಣಿಕ ಪಾತ್ರಗಳೇ ಇಷ್ಟವಂತೆ. ಪಾರ್ವತಿ ಹಾಗೂ ದ್ರೌಪದಿ ಪಾತ್ರ ಮಾಡುವ ಆಸೆಯನ್ನು ಇಟ್ಟುಕೊಂಡಿದ್ದಾರೆ.
ಮನೆ ಗೃಹಪ್ರವೇಶ ನೆರವೇರಿಸಿದ ನಟಿ
ಇನ್ನು ಪ್ರಿಯಾಂಕಾ ಚಿಂಚೋಳಿ ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಮಯದ ಗೊಂಬೆ, ಜೀವನದ ಜೋಕಾಲಿ, ಕೌಟಿಲ್ಯ, ರೆಮೋ ಹಾಗೂ ಅಲೆವ ಮೋಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲೆವ ಮೋಡ ಚಿತ್ರದಲ್ಲಿ ಪ್ರಿಯಾಂಕಾ ಚಿಂಚೋಳಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮನಸೆಲ್ಲಾ ನೀನೆ ಧಾರಾವಾಹಿಯ ಬಳಿಕ ಪ್ರಿಯಾಂಕಾ ಅವರು ತಮ್ಮ ಪತಿ ಜೊತೆ ಲಂಡನ್ ಗೆ ಹಾರಿದ್ದರು. ಇದೀಗ ಪತಿ-ಪತ್ನಿ ಇಬ್ಬರೂ ಆಗಮಿಸಿದ್ದು, ಬೆಂಗಳೂರಿನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಸಾಧಿಸುವುದು ಇನ್ನೂ ಇದೆ ಎಂದು ಬರೆದುಕೊಂಡಿದ್ದಾರೆ. ಗೃಹಪ್ರವೇಶದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ.


Click it and Unblock the Notifications











