Swapna Deekshith ; ನಟಿ ಸ್ವಪ್ನಾ ದೀಕ್ಷಿತ್ ಹೊಸ ಪ್ರಾಜೆಕ್ಟ್ : ಶಾರ್ವರಿ ಪಾತ್ರ ಬದಲಾವಣೆ
ಕಿರುತೆರೆಯಲ್ಲಿ ನಾಯಕ ನಾಯಕಿಯರಿಗೆ ಎಷ್ಟು ಬೇಡಿಕೆ ಇರುತ್ತದೋ, ಪೋಷಕ ಪಾತ್ರಗಳು ಕೂಡ ಅಷ್ಟೇ ಗಮನ ಸೆಳೆಯುತ್ತಿರುತ್ತವೆ. ಪೋಷಕ ಪಾತ್ರಗಳ ಅಭಿನಯದ ಮೇಲೆ ನಾಯಕ-ನಾಯಕಿಯರು ಹಿಟ್ ಆಗುವುದು.ನಾಯಕ-ನಾಯಕಿಯರ ತಂದೆ, ತಾಯಿ ಪಾತ್ರ ನಿರ್ವಹಿಸಿರುವವರು ತಮ್ಮ ಅಭಿನಯದಿಂದಲೇ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿರುತ್ತಾರೆ. ಇಂತಹ ಹಲವು ಪೋಷಕ ಪಾತ್ರಗಳು ದಶಕಗಳಿಂದಲೂ ಕಿರುತೆರೆಯಲ್ಲಿ ಇವೆ. ಇನ್ನು ಹೆಚ್ಚು ಕಡಿಮೆ ಪೋಷಕ ಪಾತ್ರಗಳು ಬದಲಾಗುವುದು ಸರ್ವೇ ಸಾಮಾನ್ಯವಾಗಿದೆ. ಬೇರೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಪಾತ್ರಕ್ಕಿಂತಲೂ ಉತ್ತಮ ಪಾತ್ರ ಹಾಗೂ ಸಂಭಾವನೆ ಸಿಕ್ಕಾಗ ಪಾತ್ರಧಾರಿಗಳು ತಂಡದಿಂದ ಹೊರ ನಡೆಯುತ್ತಾರೆ.
ಶ್ರೀರಸ್ತು ಶುಭಮಸ್ತು ಧಾರಾವಾಹಿ ಪಾತ್ರ ಬದಲಾವಣೆ
ಆಗ ಆ ಪಾತ್ರಕ್ಕೆ ಬರುವ ಮತ್ತೊಬ್ಬ ನಟ-ನಟಿಯ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಹಿಂದಿನ ಕಲಾವಿದರಿಗಿಂತಲೂ ಹೆಚ್ಚು ವೀಕ್ಷಕರಿಗೆ ಇಷ್ಟವಾಗುವಂತೆ ನಟಿಸಬೇಕಾಗುತ್ತದೆ. ಇದೀಗ ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿ ನೇತ್ರಾ ಜಾಧವ್ ಅವರು ನಟಿಸುತ್ತಿದ್ದರು. ಧಾರಾವಾಹಿ ಶುರುವಾದಾಗಿನ ಇಂದಲೂ ನಟಿ ನೇತ್ರಾ ಅವರು ಶಾರ್ವರಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದರು. ಹಲವು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ನೇತ್ರಾ ಜಾಧವ್ ಹಿಂದಿರುಗಿದರು ಎಂದು ವೀಕ್ಷಕರು ಖುಷಿ ಪಟ್ಟಿದ್ದರು. ಆದರೆ, ಈಗ ಕಾರಣ ತಿಳಿಸದೇ ನೇತ್ರಾ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಶಾರ್ವರಿ ಪಾತ್ರಕ್ಕೆ ಜೀವ ತುಂಬಿ ಈಗ ಅರ್ಧಕ್ಕೆ ಬಿಟ್ಟು ಹೋಗಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹಾಗೆಯೇ ಹೊಸ ಪಾತ್ರಧಾರಿಗೆ ಬೆಸ್ಟ್ ಆಫ್ ಲಕ್ ಕೂಡ ತಿಳಿಸಿದ್ದಾರೆ.

ಶಾರ್ವರಿ ಪಾತ್ರದಲ್ಲಿ ಸ್ವಪ್ನಾ ದೀಕ್ಷಿತ್
ಶಾರ್ವರಿ ಪಾತ್ರವನ್ನು ಈಗ ನಟಿ ಸ್ವಪ್ನಾ ದೀಕ್ಷಿತ್ ಅವರು ನಡೆಸಿಕೊಡುತ್ತಿದ್ದಾರೆ. ಈ ಹಿಂದೆ ಇದೇ ಜೀ ಕನ್ನಡ ವಾಹಿನಿಯಲ್ಲಿ ಕಮಲಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಪತಿ ಜೊತೆಗೆ ಭಾಗವಹಿಸಿದ್ದರು. ನಂತರ ತೆಲುಗು ಧಾರಾವಾಹಿ ಸುಂದರಿ ಹಾಗೂ ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲೂ ನಟಿ ಸ್ವಪ್ನಾ ಅವರು ಕಾಣಿಸಿಕೊಂಡಿದ್ದಾರೆ. ಇದೀಗ ಶಾರ್ವರಿಯಾಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ.
ನಟಿ ಸ್ವಪ್ನಾ ಅವರ ವೈಯಕ್ತಿಕ ವಿಚಾರ
ನಟಿ ಸ್ವಪ್ನಾ ದೀಕ್ಷಿತ್ ಅವರದ್ದು ಕಿರುತೆರೆ ಪ್ರೇಕ್ಷಕರಿಗೆ ಹಲವು ವರ್ಗಳಿಂದ ಚಿರಪರಿಚಿತ ಮುಖ. ತಮ್ಮ ಮನೋಜ್ಞ ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದಿರುವ ಸ್ವಪ್ನಾ ಅವರು ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸ್ವಪ್ನಾ ದೀಕ್ಷಿತ್ ಹಾಗೂ ಅವರ ಪತಿ ಅಶ್ವಿನ್ ದೀಕ್ಷಿತ್ ಇಬ್ಬರೂ ಕಾಲೇಜ್ ನಲ್ಲಿ ಓದುವಾಗಲೇ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಗೆ ತೃಷಾ ದೀಕ್ಷಿತ್ ಎಂಬ ಮುದ್ದಾದ ಮಗಳಿದ್ದು, ಸವಿರುಚಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಸ್ವಪ್ನಾ ಅವರ ನಟನೆಯ ಹಿನ್ನೆಲೆ
ಸೇವಂತಿ, ಮನೆಯೊಂದು ಮೂರು ಬಾಗಿಲು, ಇತಿಹಾಸ, ಗಿರಿಜಾ ಕಲ್ಯಾಣ, ಅಂಜಲಿ, ಮಾಂಗಲ್ಯ, ಬೆಳ್ಳಿತೆರೆ, ಮಧುರ ಸಂಗಮ, ಇಂತಿ ನಿಮ್ಮ ಆಶಾ, ಕಮಲಿ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರ, ಖಳ ನಾಯಕಿಯಾಗಿಯೂ ಬಣ್ಣ ಹಚ್ಚಿದ್ದಾರೆ. ಇನ್ನು ಸಿನಿಮಾಗಳಲ್ಲೂ ನಟಿಸಿರುವ ಸಪ್ನಾ ದೀಕ್ಷಿತ್ ಅವರು ಪಾಂಡುರಂಗ ವಿಠಲ, ದಂಡ ಪಿಂಡಗಳು, ಸಂಪಿಗೆ ಪರಿಮಳ, ಪುರುಷೋತ್ತಮ, ಪದ್ಮಾವತಿ, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲದೇ, ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ.


Click it and Unblock the Notifications











