ಮನೆಗೆ ಮರಳಿದ ಶರತ್ ಪದ್ಮನಾಭ್, 'ಆತ್ಮ'ಕಥೆಯಲ್ಲಿ ಪಾರು ನಟ..!
ಇದೇ ತಿಂಗಳು 27ರಿಂದ ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರುವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ನಾ ನಿನ್ನ ಬಿಡಲಾರೆ ಧಾರಾವಾಹಿ ಪ್ರಸಾರವಾಗಲಿದೆ. ಈ ಹಿಂದೆಯೂ ನಾ ನಿನ್ನ ಬಿಡಲಾರೆ ಎಂಬ ಹೆಸರಿನಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ಅದೂ ಕೂಡ ಆತ್ಮದ ಕಥೆಯಾಗಿತ್ತು. ಈಗ ಶುರುವಾಗುತ್ತಿರುವ ಕಥೆಯೂ ಅಮ್ಮನ ಆತ್ಮದ ಕಥೆಯಾಗಿದೆ. ತಾನು ತನ್ನ ಸಂಸಾರ ಹಾಗೂ ಮಗಳು ಎಂದು ಖುಷಿಯಾಗಿದ್ದ ತಾಯಿಯೊಬ್ಬಳ ಬಾಳಲ್ಲಿ ಬಿರುಗಾಳಿ ಬೀಸಿದ್ದು, ಪ್ರಾಣವನ್ನೇ ಬಿಟ್ಟಿದ್ದಾಳೆ. ಆದರೆ, ಆ ತಾಯಿಯ ಪ್ರಾಣ ಹೋಗಲು ಕಾರಣ ಏನು ಎಂಬುದು ನಿಗೂಢವಾಗಿದೆ.
ಕಂದನಿಗಾಗಿ ಮಿಡಿಯುತ್ತಿರುವ ತಾಯಿಯ ಆತ್ಮ
ಇನ್ನು ಆ ತಾಯಿ ಆತ್ಮವೂ ಮಗಳಿಗಾಗಿ ಮಿಡಿಯುತ್ತಿದ್ದು, ಮಗುವಿನ ಸುತ್ತಲೇ ಸುತ್ತಾಡುತ್ತಿದೆ. ತನ್ನ ಮಗಳಿಗೆ ಏನೂ ಆಗಬಾರದು ಎಂದು ಸದಾ ಕಾಯಲು ಯತ್ನಿಸುತ್ತಿದ್ದಾಳೆ. ಕರುಳ ಬಳ್ಳಿಯ ರಕ್ಷಣೆಗಾಗಿ ಒದ್ದಾಡುತ್ತಿರುವ ಆತ್ಮಕ್ಕೆ ಜೀವವೊಂದು ಜೊತೆಯಾಗಿದೆ. ಪ್ರಾಣ ಕಳೆದುಕೊಂಡು ಎಲ್ಲರಿಂದ ದೂರಾಗಿರುವ ಆತ್ಮಕ್ಕೆ ಸಹಾಯ ಮಾಡಲು ಜೊತೆಯಾಗಿರುವ ಹುಡುಗಿಯೊಬ್ಬಳಿದ್ದಾಳೆ. ಹೌದು ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿ ನೀತಾ ಅಶೋಕ್ ನಟಿಸುತ್ತಿದ್ದು, ನೀತಾ ಆತ್ಮವಾಗಿದ್ದಾಳೆ. ಇವರಿಗೆ ಜೊತೆಯಾಗಿ ಎರಡನೇ ನಾಯಕಿಯಾಗಿ ರಿಷಿಕಾ ಕಾಣಿಸಿಕೊಂಡಿದ್ದಾರೆ. ಇನ್ನು ಧಾರಾವಾಹಿಯಲ್ಲಿ ನಟಿ ವೀಣಾ ಸುಂದರ್, ಬಾಲನಟಿ ಮಹತಿಯೂ ಇದ್ದಾರೆ. ಇವರನ್ನು ಹೊರತು ಪಡಿಸಿ ನಾಯಕನ ಪಾತ್ರವನ್ನು ನಟ ಶರತ್ ಪದ್ಮನಾಭ್ ನಿರ್ವಹಿಸುತ್ತಿದ್ದಾರೆ.

ನೀತಾ ಜೋಡಿಯಾಗಿರುವ ಶರತ್
ಪಾರು ಧಾರಾವಾಹಿಯ ಬಳಿಕ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ಶರತ್ ಅವರು ಇದೀಗ ಪುನಃ ಕಿರುತೆರೆಗೆ ಮರಳಿದ್ದಾರೆ. ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ನೀತಾ ಅವರ ಜೋಡಿಯಾಗಿದ್ದು, ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಶರತ್ ಅವರು ಪಾರು ಧಾರಾವಾಹಿಯಲ್ಲಿ ಆದಿತ್ಯನ ಪಾತ್ರದ ಮೂಲಕ ಮಿಂಚಿದ್ದರು. ಪಾರು ಮುಗಿಯುವ ಮುನ್ನವೇ ಮದುವೆ, ಸಿನಿಮಾ ಎಂದು ಬ್ಯುಸಿಯಾಗಿದ್ದರು. ದಿಲಿಪ್ ರಾಜ್ ಪ್ರೊಡಕ್ಷನ್ಸ್ ಮೂಲಕ ಬಣ್ಣದ ಲೋಕದ ಪ್ರಯಾಣ ಬೆಳೆಸಿದ್ದರು. ಬಳಿಕ ಪುಟ್ಮಲ್ಲಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
ಕೆಲಸ ಬಿಟ್ಟು ನಟನೆಗೆ ಬಂದ ಶರತ್
ಶರತ್ ಪದ್ಮನಾಭ್ ಅವರು ಬೆಂಗಳುರಿನವರೇ ಆಗಿದ್ದು, ಇಂಜಿನಿಯರ್ ಓದಿ ಕೆಲಸ ಮಾಡುತ್ತಿದ್ದರು. ನಟನೆಯ ಆಸೆಯಿಂದ ಐಟಿ ಸೆಕ್ಟರ್ ಅನ್ನು ಬಿಟ್ಟು ಬಂದರು. ಮೊದಮೊದಲು ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಅಲ್ಲದೇ, ಶೂಟಿಂಗ್ ಗಳಲ್ಲಿ ಅಗತ್ಯ ಬಿದ್ದಾಗ ಇಂಜಿನಿಯರಿಂಗ್ ಕೆಲಸಗಳನ್ನು ಕೂಡ ಮಾಡುತ್ತಿದ್ದರು. ಪುಟ್ಮಲ್ಲಿ ಮೂಲಕ ಕ್ಯಾಮಾರಾ ಎದುರಿಗೆ ಬಂದ ಶರತ್ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಈ ಧಾರಾವಾಹಿ ಮುಗಿದ ಬಳಿಕ ಅನಿಮಾ ಎಂಬ ಚಿತ್ರದಲ್ಲಿ ನಾಯಕನಾಗಿ ಶರತ್ ಪದ್ಮನಾಭ್ ಅವರು ನಟಿಸಿದ್ದರು.
ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ನಟ
ಇನ್ನು ಶರತ್ ಪದ್ಮನಾಭ್ ಅವರು ತಮ್ಮ ಫಿಟ್ನೆಸ್ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದಾರೆ. ಹೀಗಾಗಿ ರಕ್ಷಿತ್ ಶೆಟ್ಟಿಯವರಿಗೂ ಫಿಟ್ನೆಸ್ ಟ್ರೇನರ್ ಆಗಿರುವ ಶ್ರೀನಿವಾಸ್ ಬಳಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಿತ್ಯ ವರ್ಕೌಟ್ ಮಾಡುವುದನ್ನು ಮಿಸ್ ಮಾಡುವುದಿಲ್ಲ. ನಟನಾ ಲೋಕದಲ್ಲಿ ಕನಸು ಕಟ್ಟಿಕೊಂಡು ಬಂದಿರುವ ಶರತ್ ಅವರು ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹು ಕಾಲದ ಗೆಳತಿ ದಿವ್ಯಶ್ರೀ ಎಂಬುವರನ್ನೇ ನಟ ಶರತ್ ಅವರು ವಿವಾಹವಾದರು. ಸದ್ಯ ನಾ ನಿನ್ನ ಬಿಡಲಾರೆ ಧಾರಾವಾಹಿಯ ಮೂಲಕ ಮತ್ತೆ ಕಿರುತರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.


Click it and Unblock the Notifications











