BBK 11; ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆಯಾಗಬೇಕಿರುವ ವಿಚಾರಗಳಾವುವು..?
ಬಿಗ್ ಬಾಸ್ ಮನೆಯಲ್ಲಿ ಈಗ ಆರು ಜೋಡಿಗಳು ಆಟವಾಡುತ್ತಿದ್ದು, ಜೋಡಿಯಾಗಿದ್ದರೂ ಕೂಡ ಪ್ರತಿಯೊಬ್ಬರಲ್ಲು ಮನಸ್ತಾಪಗಳಿವೆ. ಹಾಗಿದ್ದರೂ ಟಾಸ್ಕ್ ಆಡಬೇಕೆಂದು ಸುಮ್ಮನಿದ್ದಾರೆ ಎನಿಸುತ್ತದೆ.ಬೂದಿ ಮುಚ್ಚಿದ ಕೆಂಡದಂತಿರುವ ಜೋಡಿಗಳು ಯಾವಾಗ ಈ ವಾರ ಮುಕ್ತಾಯಗೊಳ್ಳುತ್ತದೋ ಎಂದು ಕಾಯುತ್ತಿದ್ದಾರೆ. ಈ ವಾರದ ಟಾಸ್ಕ್ ಆಡುವುದರಲ್ಲೂ ಸ್ಪರ್ಧಿಗಳು ಸೋತಿದ್ದಾರೆ.ಗುಂಪುಗಾರಿಕೆ ಮಾಡಿಕೊಂಡು ತಮಗೆ ಬೇಕಾದಂತೆ ಆಟವನ್ನು ಆಡಿದ್ದಾರೆ. ಇದು ವೀಕ್ಷಕರ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ. ತಾವು ಗೆಲ್ಲಬೇಕು ಎಂದು ಆಡುವುದಕ್ಕಿಂತಲೂ ಎದುರಾಳಿಯನ್ನು ಸೋಲಿಸಬೇಕು ಎಂಬ ಛಲವೇ ಎಲ್ಲರಲ್ಲೂ ಇದೆ.
ಗೌತಮಿಯನ್ನು ಗೆಲ್ಲಿಸಿದ ಮಂಜು
ಈ ವಾರ ಹೇಗಾದರೂ ಮಾಡಿ ಗೌತಮಿ ಮತ್ತು ಹನುಮಂತು ಗೆಲ್ಲಬೇಕು ಎಂದು ಮಂಜು ಆಟವಾಡುವಾಗ ಬಹಳ ಚಾಲಾಕಿಯಿಂದ ಮಾತನಾಡಿದ್ದಾರೆ. ಬೇರೆ ಜೋಡಿಗಳನ್ನು ಟಾರ್ಗೆಟ್ ಮಾಡಿ ಗೌತಮಿ ಗೆಲ್ಲುವಂತೆ ನೋಡಿಕೊಂಡಿದ್ದಾರೆ. ತಾವು ಉಸ್ತುವಾರಿಯಾದಗಲೂ ಕೂಡ ಗೌತಮಿಯನ್ನು ಗೆಲ್ಲಿಸಿದ್ದಾರೆ. ಗೌತಮಿಗೆ ಹೆಚ್ಚು ಅಂಕಗಳು ಬರುವಂತೆ ನೋಡಿಕೊಂಡಿದ್ದಾರೆ. ಇದೆಲ್ಲವೂ ಎಲ್ಲರ ಕಣ್ಣಿಗೂ ಸ್ಪಷ್ಟವಾಗಿ ಕಂಡಿದೆ. ಪಾಸಿಟಿವ್ ಪಾಸಿಟಿವ್ ಎನ್ನುತ್ತಿದ್ದ ಗೌತಮಿ ಕಳೆದ ಎರಡು ವಾರಗಳಿಂದ ಕಂಪ್ಲೀಟ್ ಆಗಿ ಬದಲಾಗಿದ್ದು, ಈಗ ವೀಕ್ಷಕರಿಗೆ ಬೇಸರ ತರಿಸಿದ್ದಾರೆ. ಮೊದಲೆಲ್ಲಾ ಮೋಕ್ಷಿತಾ ಮತ್ತು ಗೌತಮಿ ಸೂಪರ್ ಎಂದು ಟ್ರೋಲ್ ಮಾಡುತ್ತಿದ್ದವರು, ಈಗ ಇಬ್ಬರ ಆಟವನ್ನು ಹೇಟ್ ಮಾಡುತ್ತಿದ್ದಾರೆ.

ಕಿಚ್ಚನಿಗೆ ಸಲಹೆ ಕೊಟ್ಟ ವೀಕ್ಷಕರು
ಇನ್ನು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ವೀಕ್ಷಕರು ಸಾಕಷ್ಟು ಸಲಹೆಗಳನ್ನು ಕಿಚ್ಚ ಸುದೀಪ್ ಅವರಿಗೆ ನೀಡುತ್ತಿದ್ದಾರೆ. ಕಳೆದ ವಾರ ಮೊದಲ ಬಾರಿಗೆ ಉತ್ತಮ ಪದಕವನ್ನು ಭವ್ಯ ಅವರು ಪಡೆದಿದ್ದರು. ಇನ್ನು ಈ ಮನೆಯಲ್ಲಿ ಕಿಚ್ಚನ ಚಪ್ಪಾಳೆಯನ್ನು ಹನುಮಂತ ಒಬ್ಬರೇ ಪಡೆದಿರುವುದು. ಆಟ ಶುರುವಾಗಿ ಒಂದೂವರೆ ತಿಂಗಳು ಕಳೆದರೂ ಕೂಡ ಮನೆಯ ಯಾವ ಸದಸ್ಯರಿಗೂ ಆಟದ ಮೇಲೆ ಗಮನವೇ ಇಲ್ಲ. ಗತಾವು ಯಾಕೆ ಈ ಮನೆಗೆ ಬಂದಿದ್ದೀವೆ ಎಂಬುದನ್ನು ಮರೆತು ತಮ್ಮದೇ ರೂಲ್ಸ್ ಗಳನ್ನು ಮಾಡಿಕೊಂಡಿದ್ದಾರೆ. ಉತ್ತಮ, ಕಿಚ್ಚನ ಚಪ್ಪಾಳೆ ಸೇರಿದಂತೆ ಪ್ರಶಂಸಿಸುವಂತೆ ಯಾರೊಬ್ಬರೂ ನಡೆದುಕೊಳ್ಳುತ್ತಿಲ್ಲ. ಈ ವಾರದ ಆಟವೂ ಕಳಪೆಯಾಗಿದ್ದು ಅಭಿಮಾನಿಗಳು ಯಾವೆಲ್ಲಾ ವಿಚಾರಗಳನ್ನು ಚರ್ಚಿಸಬೇಕು ಎಂದು ಸುದೀಪ್ ಅವರಿಗೆ ಸಲಹೆ ಕೊಟ್ಟಿದ್ದಾರೆ.
ಮೋಕ್ಷಿತಾ ಅಹಂಕಾರಿ ಎನ್ನಲು ಕಾರಣವೇನು..?
ಮೋಕ್ಷಿತಾ ಪದೇ ಪದೇ ಧನರಾಜ್ ಮೇಲೆ ಕೂಗಾಡುತ್ತಿದ್ದಾರೆ. ಈ ವಾರವೂ ಧನರಾಜ್ ಗೆ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಜೋಡಿಯಾಗಿ ಒಟ್ಟಿಗೆ ಆಡಿದ್ದರೂ ಕೂಡ ಸುಖಾ ಸುಮ್ಮನೆ ಧನರಾಜ್ ಅವರ ಮೇಲೆ ಕೂಗಾಡಿದ್ದಾರೆ. ಇದು ಎಷ್ಟು ಸರಿ. ಮೋಕ್ಷಿತಾ ಅವರಿಗೆ ಅಹಂಕಾರ ಹೆಚ್ಚಾಗಿದೆ. ಅವರಿಗೆ ಬಿಪಿ ಇರಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದು, ಮೋಕ್ಷಿತಾ ಅವರನ್ನು ಈ ಬಗ್ಗೆ ಪ್ರಶ್ನಿಸಬೇಕು ಎಂದು ಸುದೀಪ್ ಅವರಿಗೆ ತಿಳಿಸಿದ್ದಾರೆ. ಇನ್ನು ಚೈತ್ರಾ ಅವರು ಶಿಶಿರ್ ಅವರ ಜೊತೆಗೆ ಆಡಿದ ಮಾತುಗಳಿಗೂ ನಡೆದುಕೊಂಡ ರೀತಿಗೂ ಅಜಗಜಾಂತರ. ಶಿಶಿರ್ ಅವರನ್ನು ಚೈತ್ರಾ ಬಕ್ರಾ ಮಾಡಿದ್ದೇಕೆ ಎಂಬುದನ್ನು ಪ್ರಶ್ನಿಸಿ ಎಂದಿದ್ದಾರೆ. ಅಲ್ಲದೇ, ಈ ವಾರದ ಕಿಚ್ಚನ ಚಪ್ಪಾಳೆ ಶಿಶಿರ್ ಗೆ ಸಲ್ಲಬೇಕು ಎಂದು ಬಯಸಿದ್ದಾರೆ.
ಮಂಜು ಉಸ್ತುವಾರಿಯನ್ನು ಒಪ್ಪದ ಅಭಿಮಾನಿಗಳು
ಇನ್ನು ಮಂಜು ಈ ವಾರ ಗೌತಮಿ ಅವರನ್ನು ಗೆಲ್ಲಿಸಬೇಕು ಎಂಬ ಒಂದೇ ಕಾರಣಕ್ಕೆ ಕೆಸರಿನ ಆಟದಲ್ಲಿ ಗೌತಮಿ ಅವರ ತಂಡದ ಕಡೆ ಹೋಗದೆಯೇ ಬೇರೆ ಎಲ್ಲರ ಆಟವನ್ನು ಹಾಳು ಮಾಡಿದ್ದಾರೆ. ಗೌತಮಿಯನ್ನು ಗೆಲ್ಲಿಸಿದ್ದಾರೆ. ಮಂಜು ಉಸ್ತುವಾರಿಯಾದಗಲೂ ಕೂಡ ಗೌತಮಿ ಗೆಲ್ಲಲಿ ಎಂಬ ಕಾರಣಕ್ಕೆ ತ್ರಿವಿಕ್ರಮ್ ಗೆ ಫೌಲ್ ಕೊಟ್ಟು, ಗೌತಮಿ ಅವರದ್ದು ಫೌಲ್ ಆದರೂ ಹೇಳದೆಯೇ ಗೆಲ್ಲಿಸಿದ್ದಾರೆ. ಇದೆಲ್ಲಾ ಎಷ್ಟು ಸರಿ ಎಂದು ಪ್ರಶ್ನೆ ಮಾಡಬೇಕು ಎಂದು ನೆಟ್ಟಿಗರು ಕಮೆಂಟ್ ಗಳನ್ನು ಮಾಡಿದ್ದಾರೆ. ಈ ವಾರ ಕಿಚ್ಚನ ಪ್ರಶ್ನೆಗಳು ಯಾರಿಗೆ ಎಂಬ ಕುತೂಹಲವೂ ಇದೆ.


Click it and Unblock the Notifications











